ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾದಾಮಿ: ಹಾಳು ಬಿದ್ದ ಆಸರೆ ಮನೆಗಳು

Published : 4 ಸೆಪ್ಟೆಂಬರ್ 2024, 5:54 IST
Last Updated : 4 ಸೆಪ್ಟೆಂಬರ್ 2024, 5:54 IST
ಫಾಲೋ ಮಾಡಿ
Comments

ಬಾದಾಮಿ: ಮಲಪ್ರಭಾ ನದಿ ದಂಡೆಯಲ್ಲಿ ಬೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಢಾಣಕಶಿರೂರ ಗ್ರಾಮವು ಸಮಸ್ಯೆಗಳ ಆಗರವಾಗಿದೆ.

ಇದು ಗುಳೇದಗುಡ್ಡ ಮಾಜಿ ಶಾಸಕ, ಜನಪದ ವಿದ್ವಾಂಸ ಮತ್ತು ನಾಲ್ಕು ದಶಕಗಳ ಹಿಂದೆಯೇ ಮಲಪ್ರಭಾ- ಮಹಾದಾಯಿ ಜೋಡಣೆಯ ಹೋರಾಟಗಾರ ಬಿ.ಎಂ. ಹೊರಕೇರಿ ಅವರ ಗ್ರಾಮವಾಗಿದೆ.

ಈ ಊರಿಗೆ ಹೋದಾಗ ರಸ್ತೆಯಲ್ಲಿ ಹರಿಯುವ ಕೊಳಚೆ ನೀರು, ಕಸದ ರಾಶಿ, ರಸ್ತೆಯ ಪಕ್ಕದ ಬಯಲಿನಲ್ಲಿಯೇ ಶೌಚ ಮತ್ತು ದುರ್ನಾತ ಬೀರುವ ತಿಪ್ಪೆಗಳು ಸ್ವಾಗತಿಸುತ್ತವೆ.

ವಿತರಣೆಯಾಗದ ಆಸರೆ ಮನೆಗಳ ಹಕ್ಕು ಪತ್ರ, ವಾಸಿಸಲು ಬಾರದ ಆಸರೆ ಮನೆಗಳು, ಪುನರ್ವಸತಿ ವಿಳಂಬ, ಶೌಚಾಲಯದ ಕೊರತೆ, ಬಾಗಿದ ವಿದ್ಯುತ್ ಕಂಬಗಳು, ಸರ್ಕಾರಿ ಪ್ರೌಢಶಾಲೆಗೆ ಕಾಂಪೌಂಡ್ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದು, ಕೆಸರುಮಯ ಗ್ರಾಮದ ಸಂಪರ್ಕ ರಸ್ತೆ, ಪ್ರಾಥಮಿಕ ಶಾಲೆಗಳಿಗೆ ಕೊಠಡಿಗಳ ಕೊರತೆ... ಹೀಗೆ ಸಮಸ್ಯೆಗಳ ಸರಮಾಲೆಯನ್ನೇ ಗ್ರಾಮಸ್ಥರು ತೆರೆದಿಡುತ್ತಾರೆ.

2009 ಮತ್ತು 2019 ರಲ್ಲಿ ಮಲಪ್ರಭಾ ನದಿಯ ನೆರೆ ಪ್ರವಾಹದಿಂದ ಗ್ರಾಮದ ಜನ ಸಂಪೂರ್ಣ ನಲುಗಿದ್ದರು. 2010 ರಲ್ಲಿ ಸರ್ಕಾರ 350 ಮನೆಗಳನ್ನು ನಿರ್ಮಿಸಿದರೂ ಇದುವರೆಗೂ ಹಕ್ಕುಪತ್ರ ಕೊಡದ ಕಾರಣ ಜನರು ಹಳೇ ಗ್ರಾಮದಲ್ಲಿಯೇ ವಾಸವಾಗಿದ್ದಾರೆ.

ದಶಕದಿಂದ ಮನೆಗಳಲ್ಲಿ ಯಾರೂ ವಾಸವಾಗದ ಕಾರಣ ಆಸರೆ ಮನೆಗಳ ಬಾಗಿಲು, ಕಿಟಕಿ ಕಿತ್ತು ಹೋಗಿವೆ. ಕೆಲವು ಮನೆಗಳ ಗೋಡೆಗಳು ಕುಸಿದು ವಾಸಕ್ಕೆ ಅಯೋಗ್ಯವಾಗಿದೆ. ನೆರೆ ಪ್ರವಾಹದಿಂದ ಸಂಪೂರ್ಣವಾಗಿ ಮನೆಗಳು ಬಿದ್ದ ಕಾರಣ ಏಳೆಂಟು ಪರಿಶಿಷ್ಟ ಜಾತಿಯ ಕುಟುಂಬಗಳು ಮಾತ್ರ ವಾಸವಾಗಿವೆ. ಸುತ್ತ ಜಾಲಿಕಂಟಿಗಳು ಬೆಳೆದಿವೆ. ರಸ್ತೆಯೂ ಹದಗೆಟ್ಟು ಹೋಗಿದೆ.

ಗ್ರಾಮದ ಹೊರಗೆ 2018 ರಲ್ಲಿ ನೂತನವಾಗಿ ಬಿ.ಎಂ. ಹೊರಕೇರಿ ಸರ್ಕಾರಿ ಪ್ರೌಢಶಾಲೆಯ ಕಟ್ಟಡ ನಿರ್ಮಾಣವಾಗಿದೆ. ಶಾಲೆಗೆ ಸರಿಯಾದ ಮೈದಾನವಿಲ್ಲ. ಕಾಂಪೌಂಡ್ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಮಳೆಗಾಲದಲ್ಲಿ ಮಕ್ಕಳು ಕಪ್ಪುಮಣ್ಣಿನ ರೊಜ್ಜಿನಲ್ಲಿಯೇ ಹೋಗಬೇಕಿದೆ.

‘ನರೇಗಾ ಯೋಜನೆಯಲ್ಲಿ ಅಂದಾಜು ₹ 1 ಕೋಟಿ ವೆಚ್ಚದ ಕ್ರಿಯಾ ಯೋಜನೆಯಲ್ಲಿ ಸುತ್ತ ಕಾಂಪೌಂಡ್ ನಿರ್ಮಾಣ, ಮೈದಾನ ದುರಸ್ತಿ ಮತ್ತು ವಿವಿಧ ಆಟದ ಮೈದಾನ ನಿರ್ಮಿಸಬೇಕಿದೆ. ಭೂಮಟ್ಟದವರೆಗೆ ಕಾಂಪೌಂಡ್ ನಿರ್ಮಾಣವಾಗಿ ಸ್ಥಗಿತವಾಗಿದೆ. ಗುತ್ತಿಗೆದಾರ ಸರಿಯಾಗಿ ಸ್ಫಂದಿಸುತ್ತಿಲ್ಲ’ ಎಂದು ಶಂಕ್ರಪ್ಪ ಮಾಗಿ ಆರೋಪಿಸಿದರು.

‘ಗುತ್ತಿಗೆದಾರನ ವಿಳಂಬ ಧೋರಣೆಯಿಂದ ಕಾಮಗಾರಿ ಸ್ಥಗಿತವಾಗಿದೆ. ಮಳೆಗಾಲದಲ್ಲಿ ಮಕ್ಕಳಿಗೆ ಶಾಲೆಗೆ ಹೋಗಲು ತೊಂದರೆಯಾಗಿದೆ. ಶಾಲಾ ಕಾಂಪೌಂಡ್ ಮತ್ತು ಮೈದಾನ ಕಾಮಗಾರಿಯನ್ನು ಬೇಗ ಮುಗಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ಪ ಹೊರಕೇರಿ ಹೇಳಿದರು.

ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡದಲ್ಲಿ ನೀರು ನಿಲ್ಲುವುದರಿಂದ ಊರಲ್ಲಿರುವ ಪ್ರಾಥಮಿಕ ಶಾಲೆಯಲ್ಲಿಯೇ 1 ರಿಂದ 7ನೇ ತರಗತಿಯವರೆಗೆ ವರ್ಗಗಳು ನಡೆಯುತ್ತಿವೆ. ಮೂರು ಕೊಠಡಿಗಳ ಅವಶ್ಯವಿವೆ ಎಂದು ಗ್ರಾಮಸ್ಥರು ಹೇಳಿದರು.

ರಸ್ತೆಯ ಪಕ್ಕದಲ್ಲಿ ಮಹಿಳೆಯರಿಗೆ, ಪುರುಷರಿಗೆ ಆರು ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಗಿಡಗಂಟಿಗಳು ಬೆಳೆದಿರುವುದರಿಂದ ಶೌಚಾಲಯಕ್ಕೆ ಹೋಗಲು ರಸ್ತೆ ಇಲ್ಲದಂತಾಗಿದೆ. ಪಕ್ಕದಲ್ಲಿ ಹಳೇ ಕೆರೆ ಇದೆ. ನೀರು ಸಂಪೂರ್ಣ ಕೊಳಚೆಮಯವಾಗಿ ಸೊಳ್ಳೆಗಳ ಕಾಟದಿಂದ ಜನರ ಅರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಗ್ರಾಮಸ್ಥರು
ಹೇಳಿದರು.

ಶಾಲೆಗೆ ಹೋಗುವ ರಸ್ತೆ ಪಕ್ಕದ ಹೊಲದಲ್ಲಿ ನಾಲ್ಕು ವಿದ್ಯುತ್ ಕಂಬಗಳು ಸಂಪೂರ್ಣ ಬಾಗಿವೆ. ಇಲ್ಲಿಯೇ ಕುರಿದೊಡ್ಡಿಯ ಶೆಡ್ ಇದೆ. ಕಂಬಗಳು ಶೆಡ್ ಮೇಲೆ ಮತ್ತು ಹೊಲದಲ್ಲಿ ರೈತನ ಮೇಲೆ ಬೀಳುವ ಅಪಾಯವಿದೆ. ಕಂಬಗಳನ್ನು ಸರಿಯಾಗಿ ಜೋಡಿಸಲು ಹೆಸ್ಕಾಂ ಕ್ರಮ ಕೈಗೊಳ್ಳಬೇಕಿದೆ ಎಂದು ರೈತರು ಆಗ್ರಹಿಸಿದ್ದಾರೆ.

ಢಾಣಕಶಿರೂರ ಗ್ರಾಮದಿಂದ ನೈನಾಪುರ ಗ್ರಾಮವನ್ನು ಸಂಪರ್ಕಿಸುವ 3 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದೆ. ಈ ರಸ್ತೆಯ ಕಾಮಗಾರಿ ಕೈಗೊಂಡರೆ ರೈತರಿಗೆ, ಜನರಿಗೆ ಅನುಕೂಲವಾಗುತ್ತದೆ ಎಂದು ರೈತರು ತಿಳಿಸಿದರು.

ಢಾಣಕಶಿರೂರ ಗ್ರಾಮದ ಪ್ರೌಢಶಾಲೆಗೆ ತೆರಳಿ ಕಾಮಗಾರಿ ಬಗ್ಗೆ ಪರಿಶೀಲಿಸಲಾಗುವುದು. ಕಾಮಗಾರಿ ಏಕೆ ಸ್ಥಗಿತವಾಗಿದೆ ಎಂಬುದನ್ನು ಬೇಲೂರ ಗ್ರಾಮ ಪಂಚಾಯಿತಿ ಪಿಡಿಒ ಜೊತೆ ಚರ್ಚಿಸಿ ಕಾಮಗಾರಿ ಆರಂಭಿಸಲಾಗುವುದು
ಮಲ್ಲಿಕಾರ್ಜುನ ಬಡಿಗೇರ, ತಾಲ್ಲೂಕು ಪಂಚಾಯಿತಿ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT