ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀಳಗಿ: ಕಲ್ಲಿಗೆ ಜೀವಕಳೆ ನೀಡುವ ಹನಮಂತಪ್ಪ

ಕಾಶಿನಾಥ ಸೋಮನಕಟ್ಟಿ
Published : 2 ಸೆಪ್ಟೆಂಬರ್ 2024, 4:31 IST
Last Updated : 2 ಸೆಪ್ಟೆಂಬರ್ 2024, 4:31 IST
ಫಾಲೋ ಮಾಡಿ
Comments

ಬೀಳಗಿ: ಪಟ್ಟಣದ ಕಾಟಕರ ಓಣಿಯ ನಿವಾಸಿ ಹನಮಂತಪ್ಪ ಬಂಡಿವಡ್ಡರ ಅವರ ಕುಟುಂಬಕ್ಕೆ ಶಿಲ್ಪಕಲೆ ಜೀವಾಳ. ಬಾಲ್ಯದಲ್ಲಿಯೇ ತಂದೆ ತಾಯಿ ಕಳೆದುಕೊಂಡು, ಬಡತನದ ಬೇಗುದಿಯನ್ನು ಅನುಭವಿಸಿ ವಿವಿಧ ಮನೆಯ ಭಿಕ್ಷೆ ಬೇಡಿ ಬದುಕು ಸಾಗಿಸಿದ ಇವರು ಇಂದು ನೂರಾರು ಕಲ್ಲುಗಳಿಗೆ ಜೀವಕಳೆ ತುಂಬುವ ಸೃಷ್ಟಿಕರ್ತ.

ಹನಮಂತಪ್ಪ 35 ವರ್ಷಗಳಿಂದ ವಿವಿಧ ಬಗೆಯ ಶಿಲ್ಪಗಳನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ದೀಪಸ್ತಂಭ, ದೇವಾಲಯ, ಗದ್ದುಗೆ ಗಲ್ಲು, ಬಸವೇಶ್ವರ, ಅಮೋಘಸಿದ್ದೇಶ್ವರ, ಕನಕದಾಸ, ವಾಲ್ಮೀಕಿ, ವ್ಯಾಸ ಮಹರ್ಷಿ, ಈಶ್ವರ ಲಿಂಗ, ನಂದಿಮೂರ್ತಿ, ಹನುಮಂತ, ವೀರಭದ್ರ, ಶನಿದೇವ, ನಾಗಶಿಲ್ಪ ಸೇರಿದಂತೆ ಅನೇಕ ಬಗೆಯ ಮೂರ್ತಿಗಳು ಹಾಗೂ ಆಲಂಕಾರಿಕ ಶಿಲ್ಪಗಳು ಸಾರ್ವಜನಿಕರ ಬದುಕನ್ನು ಬಿಂಬಿಸುವ ಚಿತ್ರಗಳು, ನೃತ್ಯ, ಸಂಗೀತ ಮೊದಲಾದವುಗಳನ್ನು ವಸ್ತುವನ್ನಾಗಿಸಿಕೊಂಡು ಶಿಲ್ಪಗಳನ್ನು ಕೆತ್ತಿದ್ದಾರೆ. ಆರಂಭದಲ್ಲಿ ಬೀಳಗಿಯ ನೀಲಕಂಠೇಶ್ವರ ದೇವಸ್ಥಾನ, ನಂತರ ತಾಲ್ಲೂಕಿನ ತೆಗ್ಗಿ ಗ್ರಾಮದ ಲಡ್ಡು ಮುತ್ಯಾನ ದೇವಾಲಯ, ದೊಡಿಹಾಳ ಭೀಮಾಶಂಕರ ದೇವಸ್ಥಾನ, ರೊಳ್ಳಿಯ ಹನುಮ ದೇವಾಲಯ, ದುರ್ಗಾದೇವಿ ದೇವಾಲಯ ಹಾಗೂ ಮೊಹರಂ ಮಸೀದಿಯನ್ನು ಕೂಡ ನಿರ್ಮಿಸುವ ಮೂಲಕ ಭಾವೈಕ್ಯ ಮೆರೆದಿದ್ದಾರೆ.

ಕೈಗಳಿಂದ ಚಿತ್ರಗಳ ಕೆತ್ತನೆ ಮಾಡಿದರೆ ಬಹಳ ದಿನ ಬಾಳಿಕೆ ಬರುತ್ತಿದೆ ಎಂದು ರಾಜ್ಯದ ಬೆಳಗಾವಿ, ಬಸವಕಲ್ಯಾಣ, ಬೀದರ, ವಿಜಯಪುರ ಮೈಸೂರು, ತುಮಕೂರು, ಬೆಳಗಾವಿ, ಬೀದರ್‌, ಕೊಪ್ಪಳ, ಗದಗ, ಬಾಗಲಕೋಟೆ ಸೇರಿ ಮುಂತಾದ ಜಿಲ್ಲೆಗಳಿಗೆ ಇವರು ನಿರ್ಮಿಸಿದ ಶಿಲ್ಪಕಲೆಗಳು
ರಫ್ತಾಗಿವೆ.

ಮೂರ್ತಿ ಕೆತ್ತನೆಗೆ ಬೆಳಗಾವಿ ಜಿಲ್ಲೆಯ ಅರಭಾವಿ, ಬಾಗಲಕೋಟೆ ಜಿಲ್ಲೆಯ ಶೆಲ್ಲಿಕೆರಿ, ಕಗಲಗೊಂಬ, ಶಿರೂರು, ಗುಳೇದಗುಡ್ಡ,  ಕುಷ್ಟಗಿ ತಾಲ್ಲೂಕಿನ ಚಂದಾಲಿಂಗ ಹಾಗೂ ಬೀಳಗಿಯ ಕಲ್ಲುಗಳನ್ನು ಬಳಸುತ್ತಾರೆ. ಇವರು ಬಳಸುವ ಶಿಲೆ ಗಟ್ಟಿಯಾಗಿರುವುದರಿಂದ ಬಹಳ ದಿನ ಬಾಳಿಕೆ ಬರುತ್ತದೆ ಎನ್ನುವ ನಂಬಿಕೆಯಿಂದ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ.

ನಾಲ್ಕು, ಹನ್ನೆರಡು ಹಾಗೂ ಹದಿನಾರು ಕಂಬದ ದೇವಾಲಯಗಳನ್ನು ನಿರ್ಮಾಣ ಮಾಡಿದ ಅನುಭವ ಇದೆ. ಇವರು ಕಂಬಗಳಲ್ಲಿ ನಿರ್ಮಿಸುವ ವೃತ್ತ ಹಾಗೂ ವಿವಿಧ ಹೂವು, ಬಳ್ಳಿಗಳ ಚಿತ್ರಗಳು ವಿಶೇಷ ಆಕರ್ಷಣೆ ಪಡೆದಿವೆ.

ಹಲವು ಪ್ರಶಸ್ತಿ

ಹನಮಂತಪ್ಪ ಅವರು ತಮ್ಮ 25ನೆಯ ವಯಸ್ಸಿನಲ್ಲೇ ಮೂರ್ತಿ ಕೆತ್ತನೆ ಕಾರ್ಯ ಆರಂಭಿಸಿದ್ದರು. ಕಲೆಯನ್ನು ಶಿಷ್ಯಂದಿರಾದ ಶೇಖಪ್ಪ ಬಂಡಿವಡ್ಡರ (ಮನ್ನಿಕೇರಿ), ಮಳಿಯಪ್ಪ ಬನಪ್ಪನವರ (ಮನ್ನಿಕೇರಿ), ಹನಮಂತ ಬಂಡಿವಡ್ಡರ (ಹನಮಾಪುರ), ಶಂಕ್ರಪ್ಪ ಅಣ್ಣಿಗೇರಿ (ಬೀಳಗಿ) ಬಸು ಮಮದಾಪುರ (ಬೀಳಗಿ)ಅವರಿಗೆ ಕಲಿಸುತ್ತಿದ್ದಾರೆ.

60ರ ಇಳಿ ವಯಸ್ಸಿನಲ್ಲಿಯೂ ಇವರು ಕೆತ್ತನೆ ಕೆಲಸ ನಿಲ್ಲಿಸಿಲ್ಲ. ಇವರ ಕಾರ್ಯ ಗಮನಿಸಿದ ಹಲವು ಮಠಗಳು ಹಾಗೂ ಸಂಘ-ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

‘ಶಿಲ್ಪ ಕಲಾವಿದರಿಗೆ ಸರ್ಕಾರದಿಂದ ಯಾವುದೇ ಭದ್ರತೆಯಾಗಲಿ, ಸಹಾಯ ಸಹಕಾರವಾಗಲಿ ಇಲ್ಲಿಯವರೆಗೆ ಸಿಕ್ಕಿಲ್ಲ. ಮೂರ್ತಿ ಕೆತ್ತನೆಗೆ ಬಳಸುವ ಸಾಮಗ್ರಿಗಳು ಸರ್ಕಾರದಿಂದ ಉಚಿತವಾಗಿ ದೊರೆಯುವಂತಾಗಲಿ. ಶಿಲ್ಪಕಲೆಗೆ ಪ್ರೋತ್ಸಾಹದಾಯಕ ಯೋಜನೆಗಳು ಬಾರದೇ ಇರುವುದರಿಂದ ಇಂದಿನ ಯುವಕರು ಈ ಉದ್ಯೋಗದತ್ತ ಒಲವು ತೋರುತ್ತಿಲ್ಲ’ ಎಂದು ಹನಮಂತಪ್ಪ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT