ಮಂಗಳವಾರ, ಮಾರ್ಚ್ 2, 2021
31 °C
ಮುತ್ತೂರು ನಡುಗಡ್ಡೆಯ ನಿವಾಸಿಗಳಿಗೆ ಜಿಲ್ಲಾಡಳಿತದ ಎಚ್ಚರಿಕೆ

ಸ್ಥಳಾಂತರಗೊಳ್ಳಿ ಇಲ್ಲವೇ ಕ್ರಮ ಎದುರಿಸಿ

ವೆಂಕಟೇಶ್ ಜಿ.ಎಚ್. Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಪ್ರವಾಹ ಇಳಿಯುವವರೆಗೂ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯಿರಿ. ಸೋಮವಾರ ಸಂಜೆಯೊಳಗೆ ಎಲ್ಲರೂ ಸ್ಥಳಾಂತರಗೊಳ್ಳಬೇಕು. ಇಲ್ಲದಿದ್ದರೆ ಕೇಸ್ ದಾಖಲಿಸಿ ಬಲವಂತವಾಗಿ ಕರೆದೊಯ್ಯಲಾಗುತ್ತದೆ..

ಇದು ಜಮಖಂಡಿ ತಾಲ್ಲೂಕಿನ ಮುತ್ತೂರು ನಡುಗಡ್ಡೆಯಲ್ಲಿ ಉಳಿದಿರುವ ನಿವಾಸಿಗಳಿಗೆ ಭಾನುವಾರ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ನೀಡಿದ ಖಡಕ್ ಎಚ್ಚರಿಕೆ.

ಕೃಷ್ಣೆಯ ಪ್ರವಾಹದ ನೀರು ಮುತ್ತೂರು ನಡುಗಡ್ಡೆಗೆ ನುಗ್ಗಿದೆ. ಅಲ್ಲಿದ್ದ 31 ಕುಟುಂಬಗಳ ಪೈಕಿ 24 ಈಗಾಗಲೇ ಬೇರೆಡೆಗೆ ಸ್ಥಳಾಂತರಗೊಂಡಿವೆ. ಮನೆ–ಮಠ, ದನ–ಕರು, ಆಡು–ಕುರಿ ಹಾಗೂ ಕೃಷಿ ಭೂಮಿಯ ಬಿಟ್ಟು ಬರಲು ಒಪ್ಪದ ಏಳು ಕುಟುಂಬಗಳು ಅಲ್ಲಿಯೇ ವಾಸವಿದ್ದು, ಜಿಲ್ಲಾಡಳಿತದ ಪರಿಹಾರ ಕಾರ್ಯಕ್ಕೆ ಸ್ಪಂದಿಸಿರಲಿಲ್ಲ.  ದಿನೇ ದಿನೇ ಕೃಷ್ಣೆಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ನಡುಗಡ್ಡೆಗೆ ನುಗ್ಗುತ್ತಿರುವ ನೀರಿನ ಪ್ರಮಾಣವೂ ಏರಿಕೆಯಾಗುತ್ತಿದೆ. ಹೀಗಾಗಿ ಅಲ್ಲಿ ನೆಲೆನಿಂತವರ ಜೀವ ರಕ್ಷಣೆ ಜಿಲ್ಲಾಡಳಿತಕ್ಕೆ ಸವಾಲಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ಎಸ್‌ಪಿ ಲೋಕೇಶ್ ಜಗಲಾಸರ್ ಅಧಿಕಾರಿಗಳ ತಂಡದೊಂದಿಗೆ ಬೋಟ್‌ನಲ್ಲಿ ಮುತ್ತೂರು ನಡುಗಡ್ಡೆಗೆ ತೆರಳಿ ಸ್ಥಳೀಯರ ಮನವೊಲಿಸಲು ಮುಂದಾದರು.

ಬರೀ ₹ 30 ಸಾವಿರ ಪರಿಹಾರ:

‘ವಿಶ್ವಾಸ–ಪ್ರೀತಿಯಿಂದ ನಿಮ್ಮನ್ನು ಕರೆದೊಯ್ಯಲು ಬಂದಿದ್ದೇನೆ. ₹1.5 ಲಕ್ಷದ ಬೆಲೆ ಬಾಳುವ ರಾಸುಗಳನ್ನು ನೀವು ಹೊಂದಿದ್ದೀರಿ. ಅವುಗಳಿಗೆ ಜೀವಕ್ಕೆ ಅಪಾಯವಾದರೆ ಬರೀ ₹30 ಸಾವಿರ ಪರಿಹಾರ ದೊರೆಯಲಿದೆ’ ಎಂದು ಜಿಲ್ಲಾಧಿಕಾರಿ ಸ್ಥಳೀಯರಿಗೆ ಕಿವಿಮಾತು ಹೇಳಿದರು.

‘ಬೇರೆಡೆಗೆ ಹಸುಗಳನ್ನು ಸ್ಥಳಾಂತರಿಸಿದರೆ ಹೈನು (ಹಾಲಿನ) ಇಳುವರಿ ಕಡಿಮೆ ಆಗುತ್ತದೆ ಎಂಬ ಚಿಂತೆ ಬೇಡ. ಒಂದೆರಡು ದಿನ ಹೈನು ಇಲ್ಲದಿದ್ದರೆ ತೊಂದರೆ ಇಲ್ಲ. ಬೇರೆಡೆಗೆ ಹೋಗದಿದ್ದಲ್ಲಿ ದನಗಳನ್ನೇ ಕಳೆದುಕೊಳ್ಳುತ್ತೀರಿ. ದನಗಳನ್ನು ಕೊಂಡೊಯ್ಯಲು ಜಿಲ್ಲಾಡಳಿತದಿಂದ ಬೋಟ್ ವ್ಯವಸ್ಥೆ ಮಾಡಲಾಗುವುದು. ಸುರಕ್ಷಿತವಾಗಿ ಆಚೆ ದಡಕ್ಕೆ ಕಳುಹಿಸಿಕೊಡಲಾಗುವುದು. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಳವಾಗುತ್ತಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ಅಪಾಯ ಎದುರಾಗಬಹುದು. ಹೀಗಾಗಿ ಮೊದಲು ಇಲ್ಲಿಂದ ಸುರಕ್ಷಿತ ಸ್ಥಳಕ್ಕೆ ತೆರಳಿ. ನಿಮಗೆ ಅಗತ್ಯ ಸೌಲಭ್ಯ ಕಲ್ಪಿಸಲಿದ್ದೇವೆ‘ ಎಂದು ಹೇಳಿದ ಆರ್.ರಾಮಚಂದ್ರನ್, ಸ್ಥಳಾಂತರಗೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.