ಬಾಗಲಕೋಟೆ: ತಾಲ್ಲೂಕಿನ ಗದ್ದನಕೇರಿ ಬಳಿ ಇರುವ ರಾಮಾರೂಢ ಮಠದ ಸ್ವಾಮೀಜಿ ಅವರನ್ನು ಹೆದರಿಸಿ ₹1 ಕೋಟಿ ಹಣ ವಸೂಲು ಮಾಡಿದ್ದ ಆರೋಪಿ ಪ್ರಕಾಶ ಮುಧೋಳ ಮೇಲೆ 12 ಪ್ರಕರಣಗಳಿರುವುದು ವಿಚಾರಣೆ ಕಾಲಕ್ಕೆ ಗೊತ್ತಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಶಕುಮಾರ ವಿಕಾಶ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳ್ಳತನ, ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಪ್ರಕಾಶ ತಮ್ಮ ವಾಹನಕ್ಕೆ ಸೈರನ್ ಅಳವಡಿಸಿಕೊಂಡಿರುವುದೂ ಪತ್ತೆಯಾಗಿದೆ. ಮೂವರು ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ ಎಂದರು.
ಆರೋಪಿಯಿಂದ 87.19 ಲಕ್ಷ, ಜತೆಗೆ ಕೃತ್ಯಕ್ಕೆ ಬಳಸಿದ್ದ ಕಾರು, ಜೀಪು ಜೊತೆಗೆ ಮಾಧ್ಯಮ ಪ್ರತಿನಿಧಿಗಳು ಬಳಸುವಂತೆ ಲೋಗೊ, ಮೂರು ಮೊಬೈಲ್, ಸ್ವಾಮೀಜಿ ನೀಡಿದ್ದ ಎರಡು ಖಾಲಿ ಚೆಕ್, ಎರಡು ಬಾಂಡ್ ಪೇಪರ್, ಎರಡು ವಕಾಲತು ಅರ್ಜಿ, ಸಹಿ ಮಾಡಿದ್ದ ಎರಡು ಖಾಲಿ ಹಾಳೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಕೇಳಲಾಗಿದೆ ಎಂದು ಹೇಳಿದರು.
ಸೆ.12ರಂದು ರಾಮಾರೂಢ ಮಠಕ್ಕೆ ಹೋಗಿ ಪರಮಹಂಸ ಪರಮರಾಮಾರೂಢ ಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾನೆ. ಯೋಜಿತ ಪ್ಲಾನ್‌ನಂತೆ ಸ್ವಾಮೀಜಿ ಅವರ ಮೊಬೈಲ್‌ಗೆ ಕರೆ ಮಾಡಿದ್ದಾನೆ. ನೆಟ್‌ವರ್ಕ್ ಸಿಗದಾದಾಗ ಕಲಾದಗಿ ಪಿಎಸ್‌ಐಗೆ ಫೋನ್ ಮಾಡಿ, ಬೆಂಗಳೂರಿನಿಂದ ಡಿವೈಎಸ್‌ಪಿ ಮಾತನಾಡುತ್ತಿದ್ದೇನೆ. ಸ್ವಾಮೀಜಿಯೊಂದಿಗೆ ಅರ್ಜಂಟಾಗಿ ಮಾತನಾಡಬೇಕು. ಫೋನ್ ಮಾಡಿಕೊಡುವಂತೆ ತಿಳಿಸಿದ್ದಾರೆ. ಪೊಲೀಸರು ಫೋನ್ ಮಾಡಿಸಿ, ಮಾತನಾಸಿಡಿದ್ದಾರೆ ಎಂದರು.
ನಂತರ ಶಿಷ್ಯಂದಿರ ಮೊಬೈಲ್ ಫೋನ್‌ಗೆ ಕೊನೆ ಮಾಡಿ ಬೆದರಿಕೆ ಹಾಕಿ ಎರಡು ಕಂತಿನಲ್ಲಿ ₹1 ಕೋಟಿ ಪಡೆದಿದ್ದಾನೆ. ಹಣ ಕೊಟ್ಟ ನಂತರವೂ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಸ್ವಾಮೀಜಿ ದೂರು ನೀಡಿದ್ದಾರೆ. ದೂರು ನೀಡಿದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿಯನ್ನು ಬಂಧಿಸಿ ಹಣ ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠ ಅಮರನಾಥ ರೆಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಹಾಂತೇಶ್ವರ ಜಿದ್ದಿ, ಪ್ರಸನ್ನ ದೇಸಾಯಿ ಇದ್ದರು.
ಖಾಲಿ ಚೆಕ್ ಮೇಲೆ ಸಹಿ ಪಡೆದಿದ್ದ ಆರೋಪಿ ಪೊಲೀಸರ ಮೂಲಕವೇ ಮೊಬೈಲ್ ಕರೆ ಮೂವರು ಆರೋಪಿಗಳ ಶೋಧ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.