ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಟಂಟಂಗೆ ಟಿಪ್ಪರ್ ಡಿಕ್ಕಿ, ಮೂವರು ಸಾವು

Last Updated 6 ನವೆಂಬರ್ 2019, 9:59 IST
ಅಕ್ಷರ ಗಾತ್ರ

ಬಾಗಲಕೋಟೆ: ಹುನಗುಂದ ತಾಲ್ಲೂಕಿನ ಕಮತಗಿ ಬಳಿ ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ತಡರಾತ್ರಿ ಟಿಪ್ಪರ್ ಹಾಗೂ ಟಂಟಂ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಟಂಟಂನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಾವಿಗೀಡಾಗಿದ್ದು, ಒಬ್ಬರು ತೀವ್ರ ಗಾಯಗೊಂಡಿದ್ದಾರೆ.

ಟಂಟಂನಲ್ಲಿ ಪ್ರಯಾಣಿಸುತ್ತಿದ್ದ ಗುಳೇದಗುಡ್ಡ ಪಟ್ಟಣದ ಸಾಲೇಶ್ವರ ಹಾಗೂ ಸಂಗನಬಸವೇಶ್ವರ ಓಣಿಯ ನಿವಾಸಿಗಳಾದ ಬಸವರಾಜ ಚಿನ್ನಪ್ಪ ತೋರಗಲ್ (25), ವಿಠ್ಠಲ ಭೀಮಪ್ಪ ವಗ್ಗಾ (24), ಸಂಗಮೇಶ ಬಸವರಾಜ ಕಿತ್ತಲಿ (24) ಸಾವಿಗೀಡಾದವರು. ಗಂಭೀರವಾಗಿ ಗಾಯಗೊಂಡಿರುವ ಛಾಯಾಗ್ರಾಹಕ ನೂರಂದಪ್ಪ ಶಿವಕುಮಾರ ಲಕ್ಕುಂಡಿ (23) ಅವರನ್ನು ಚಿಕಿತ್ಸೆಗಾಗಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸವರಾಜ ತೋರಗಲ್ ಪಟ್ಟಣದಲ್ಲಿ ಸಣ್ಣ ಹೋಟೆಲ್ ನಡೆಸುತ್ತಿದ್ದು, ಟಂಟಂನ ಮಾಲೀಕ. ವಿಠ್ಠಲ ವಗ್ಗಾ ಟೈಲರಿಂಗ್ ಕೆಲಸ ಮಾಡುತ್ತಿದ್ದರು. ಸಂಗಮೇಶ ಕಿತ್ತಲಿ ಛಾಯಾಗ್ರಾಹಕ. ನೂರಂದಪ್ಪ ಲಕ್ಕುಂಡಿ ಮಹಾರಾಷ್ಟ್ರದ ಕರಾಡ್‌ನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಇಳಕಲ್‌ ತಾಲ್ಲೂಕಿನ ದೋಟಿಹಾಳ ಗ್ರಾಮದಲ್ಲಿ ವಿಠ್ಠಲ ವಗ್ಗಾ ಅವರ ತಂಗಿಯ ಸೀಮಂತ ಕಾರ್ಯಕ್ರಮಕ್ಕೆ ಬುತ್ತಿ ರೊಟ್ಟಿ ಕೊಡಲು ಎಲ್ಲರೂ ಹೋಗಿದ್ದರು. ಮರಳಿ ಬರುವಾಗ ಕಮತಗಿ–ಶಿರೂರು ನಡುವೆ ಈ ಅಪಘಾತ ಸಂಭವಿಸಿದೆ.

ಕಮತಗಿಗೆ ಡಾಬಾದಲ್ಲಿ ಎಲ್ಲರೂ ಊಟ ಮುಗಿಸಿ ಶಿರೂರು ಮಾರ್ಗವಾಗಿ ಗುಳೇದಗುಡ್ಡಕ್ಕೆ ಹೊರಟಾಗ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.ಟಿಪ್ಪರ್‌ ಬಾಗಲಕೋಟೆಯಿಂದ ಐಹೊಳೆಯತ್ತ ಹೊರಟಿತ್ತು. ಅಪಘಾತದ ರಭಸಕ್ಕೆ ಟಂಟಂ ಜಖಂಗೊಂಡಿದೆ. ಈ ಬಗ್ಗೆ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT