ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ತೆರವಾಗದ ನದಿಗಳ ಒತ್ತುವರಿ: ಮತ್ತೆ ಸಂಕಷ್ಟ

Published : 10 ಆಗಸ್ಟ್ 2024, 5:26 IST
Last Updated : 10 ಆಗಸ್ಟ್ 2024, 5:26 IST
ಫಾಲೋ ಮಾಡಿ
Comments

ಬಾಗಲಕೋಟೆ: ಘಟಪ್ರಭಾ, ಮಲಪ್ರಭಾ ನದಿ ಪಾತ್ರದ ಒತ್ತುವರಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಮೂರು ವರ್ಷಗಳಾದರೂ ತೆರವು ಮಾಡಿಲ್ಲ. ಈ ಬಾರಿಯೂ ಪ್ರವಾಹ ಬಂದು ಹಲವೆಡೆ ಹೊಲಗಳಿಗೆ ನುಗ್ಗಿದ್ದು, 15 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶಗಳಲ್ಲಿ ಬೆಳೆ ಹಾನಿಯಾಗಿದೆ. 

ಮಲಪ್ರಭಾ ನದಿ ಹರಿಯುವ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಭೂ ದಾಖಲೆಗಳ ಇಲಾಖೆಯು ಸರ್ವೆ ಮಾಡಿದ್ದು, 424 ಎಕರೆಗಳಷ್ಟು ನದಿ ಪ್ರದೇಶ ಒತ್ತುವರಿಯಾಗಿದೆ. ಘಟಪ್ರಭಾ ನದಿ ಹರಿಯುವ ಎರಡು ತಾಲ್ಲೂಕುಗಳಲ್ಲಿ ಸರ್ವೆ ಮಾಡಲಾಗಿದ್ದು, 62 ಎಕರೆ ಒತ್ತುವರಿಯಾಗಿದೆ. ಕೆಲವು ಕಡೆಗಳಲ್ಲಿ ಒತ್ತುವರಿಯಿಂದಾಗಿ ಮಲಪ್ರಭಾ ನದಿ ಹಳ್ಳದಂತಾಗಿದೆ.

ಮಲಪ್ರಭಾ ನದಿ ವರ್ಷಪೂರ್ತಿ ಹರಿಯುವುದಿಲ್ಲ. ಬೇಸಿಗೆಯಲ್ಲಿ ನೀರು ಕಡಿಮೆಯಾಗುವುದರಿಂದ ನದಿ ದಂಡೆ ಒತ್ತುವರಿ ಮಾಡಿಕೊಂಡು ರೈತರು ಸಾಗುವಳಿ ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಹ ಬಂದು ನೀರು ಹೆಚ್ಚಾದಾಗ ನದಿ ಹರಿಯುವ ತನ್ನ ಪಾತ್ರವನ್ನೇ (ಮಾರ್ಗ) ಬದಲಾಯಿಸಿಕೊಂಡು ಹೊಲಗಳಿಗೆ ನುಗ್ಗುತ್ತಿದೆ.

ಒತ್ತುವರಿಯಿಂದ ನದಿಗಳೆರಡೂ ಹರಿಯುವ ಮಾರ್ಗ ಬದಲಾಯಿಸಿಕೊಂಡಿದ್ದು, ಮಲಪ್ರಭಾ ನದಿಯು ರೈತರ 551 ಎಕರೆ, ಘಟಪ್ರಭಾ ನದಿಯು ರೈತರ 114 ಎಕರೆ ಭೂಮಿಯನ್ನು ಅತಿಕ್ರಮಿಸಿಕೊಂಡಿದೆ. ಪರಿಣಾಮ ಘಟಪ್ರಭಾ ನದಿಯು ಹತ್ತಾರು ಹಳ್ಳಿಗಳಿಗೆ ನುಗ್ಗಿ ಅಪಾರ ಹಾನಿಯುಂಟು ಮಾಡಿದೆ.

ಮಲಪ್ರಭಾ ನದಿ ಒತ್ತುವರಿ ಕಂಡು ಬಂದಂತಹ ಬಾದಾಮಿ ತಾಲ್ಲೂಕಿನಲ್ಲಿ 103 ಹೊಲಗಳ ಮಾಲೀಕರು 157 ಎಕರೆ ಒತ್ತುವರಿ ಮಾಡಿದ್ದಾರೆ. ಹುನಗುಂದ ತಾಲ್ಲೂಕಿನ 128 ಹೊಲಗಳ ಮಾಲೀಕರು 267 ಎಕರೆ, ಇಳಕಲ್‌ ತಾಲ್ಲೂಕಿನಲ್ಲಿ ಕೇವಲ 31 ಗುಂಟೆ ಒತ್ತುವರಿ ಮಾಡಿರುವುದು 2021ರಲ್ಲಿ ಮಾಡಿದ ಸರ್ವೆಯಲ್ಲಿ ಬಯಲಾಗಿದೆ.

ಘಟಪ್ರಭಾ ನದಿಯನ್ನು 88 ಹೊಲಗಳ ಮಾಲೀಕರು 62 ಎಕರೆ ಒತ್ತುವರಿ ಮಾಡಿದ್ದಾರೆ. ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ 12 ಗುಂಟೆ ಒತ್ತುವರಿಯಾಗಿದೆ.

ಪ್ರವಾಹ–ಹಾನಿ: ನದಿಗಳ ಒತ್ತುವರಿಯಿಂದಾಗಿ ಆಗಾಗ ನದಿಗಳು ಆಗಾಗ ಉಕ್ಕಿ ಹರಿದು, ಗ್ರಾಮಗಳಿಗೆ ನುಗ್ಗಲಾರಂಭಿಸಿವೆ. 2009, 2019, 2024ರಲ್ಲಿಯೂ ಪ್ರವಾಹ ಎದುರಾಗಿದೆ. ಘಟಪ್ರಭಾ, ಮಲಪ್ರಭಾ ನದಿಯು ಹೊಲಗಳಿಗೆ ನುಗ್ಗಿ 15,455 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. 12 ಗ್ರಾಮಗಳ 1,600ಕ್ಕೂ ಹೆಚ್ಚು ಜನರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಮುಧೋಳ ಬಳಿ ಘಟಪ್ರಭಾ ನೀರಿನಲ್ಲಿ ನಿಂತಿರುವ ಬೆಳೆ
ಮುಧೋಳ ಬಳಿ ಘಟಪ್ರಭಾ ನೀರಿನಲ್ಲಿ ನಿಂತಿರುವ ಬೆಳೆ
ಹಿಂದಿನ ವರ್ಷಗಳಂತೆ ನಾವು ಸುಮ್ಮನಾಗುವುದಿಲ್ಲ. ನದಿಗಳಲ್ಲಿ ನೀರು ಕಡಿಮೆಯಾದ ಮೇಲೆ ಒತ್ತುವರಿ ತೆರವು ಮಾಡಲಾಗುವುದು
–ಆರ್.ಬಿ. ತಿಮ್ಮಾಪುರ ಜಿಲ್ಲಾ ಉಸ್ತುವಾರಿ ಸಚಿವ
ಹತ್ತಾರು ವರ್ಷಗಳಿಂದ ಆಗಾಗ ಪ್ರವಾಹ ಬಂದು ಮನೆ ಹೊಲಗಳಿಗೆ ನುಗ್ಗುತ್ತದೆ. ಲಕ್ಷಗಟ್ಟಲೇ ಖರ್ಚು ಮಾಡಿದ ಕಬ್ಬು ನಾಶವಾಗಿದೆ
–ಭೀಮಸಿ ಕುರಿ ಮಳಲಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT