ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬಾಕಿ ಪಾವತಿ; ಜೂ.30ರ ಗಡುವು

ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಜಿಲ್ಲಾಡಳಿತದ ಸಭೆ
Last Updated 6 ಜೂನ್ 2020, 16:02 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ ರೈತರಿಗೆ ಕಳೆದ ಹಂಗಾಮಿನಲ್ಲಿ ಬಾಕಿ ಉಳಿಸಿಕೊಂಡಿರುವ₹309.65 ಕೋಟಿ ಕಬ್ಬಿನ ಬಿಲ್ ಜೂನ್ 30ರೊಳಗೆ ಸಂಪೂರ್ಣ ಪಾವತಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸೂಚಿಸಿದರು.

ಕಬ್ಬಿನ ಬಾಕಿ ಪಾವತಿಗೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿಅವರು ಮಾತನಾಡಿದರು.

2019-20ನೇ ಹಂಗಾಮಿನ ಬಾಕಿ ಪಾವತಿಯ ಜೊತೆಗೆ 2018-19ನೇ ಹಂಗಾಮಿನಲ್ಲಿ ಕಾರ್ಖಾನೆ ಮಾಲೀಕರು ಮತ್ತು ರೈತರ ನಡುವಿನ ಒಪ್ಪಂದದಂತೆ ಪ್ರತಿ ಕ್ವಿಂಟಲ್ ಕಬ್ಬಿಗೆ ನೀಡಬೇಕಾದ ಹೆಚ್ಚುವರಿ ಬಾಕಿಯನ್ನು ಸಹ ತುರ್ತಾಗಿ ಪಾವತಿಸಲು ತಿಳಿಸಿದರು. 15 ದಿನಗಳ ನಂತರ ಮತ್ತೊಮ್ಮೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

2017-18ನೇ ಹಂಗಾಮಿಗೆ ಕಾರ್ಖಾನೆಯವರು ಘೋಷಿಸಿರುವ ಹೆಚ್ಚುವರಿ ದರ ಪಾವತಿಸಲು ಮುಧೋಳ ರನ್ನನಗರದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ₹3.44 ಕೋಟಿ ಮತ್ತು ತೇರದಾಳದ ಸಾವರಿನ್ ಶುಗರ್ಸ್‌ನವರು ₹56.88 ಲಕ್ಷ ಬಾಕಿ ಉಳಿಸಿಕೊಂಡಿದ್ದಾರೆ. ಸಾವರಿನ್ ಶುಗರ್ಸ್‌ನವರು 2018-19ನೇ ಹಂಗಾಮಿನಲ್ಲಿ ₹20 ಕೋಟಿ ಬಾಕಿ ಉಳಿಸಿಕೊಂಡಿದೆ. ವಸೂಲಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪ್ರಸಕ್ತ ಹಂಗಾಮಿಗೆ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊಳ್ಳಲು ಹಣದ ಅವಶ್ಯಕತೆ ಇದೆ. ರೈತರ ಹಿತದೃಷ್ಟಿಯಿಂದ ತಕ್ಷಣ ಬಾಕಿ ಹಣ ಪಾವತಿಸಲು ತಿಳಿಸಿದರು. ಕಾರ್ಖಾನೆ ಮಾಲೀಕರ ಸಮಸ್ಯೆಯನ್ನು ಸಹ ಜಿಲ್ಲಾಧಿಕಾರಿ ಆಲಿಸಿದರು. ಹೆಸ್ಕಾಂಗೆ ಸರ್ಕಾರದಿಂದ ಬರುವ ಬಾಕಿ ಸಬ್ಸಿಡಿ ಹಣದ ಬಗ್ಗೆ ಪ್ರಸ್ತಾವನೆ ನೀಡಿದಲ್ಲಿ ಕೊಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು.

ಸರಕಾರದಿಂದ ಟ್ರಾನ್ಸ್‌ಪೋರ್ಟ್ ಸಬ್ಸಿಡಿ ಹಣ ಬರುವುದು ಬಾಕಿ ಇದ್ದರೆ ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡುವುದಾಗಿ ತಿಳಿಸಿದರು. ಕೋವಿಡ್-19 ಹರಡುವಿಕೆ ತಡೆಗಟ್ಟಲು ಸಿಎಸ್ಆರ್ ಅನುದಾನದಲ್ಲಿ ಸ್ಯಾನಿಟೈಸರ್ ಉಚಿತವಾಗಿ ನೀಡಿದ ಎಲ್ಲ ಕಾರ್ಖಾನೆಗಳ ಮಾಲೀಕರಿಗೆ ಜಿಲ್ಲಾಧಿಕಾರಿ ಕೃತಜ್ಞತೆ ಸಲ್ಲಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಆಹಾರ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT