ಬುಧವಾರ, ಆಗಸ್ಟ್ 4, 2021
20 °C
ಮೇ ತಿಂಗಳ ವೇತನ ಪೂರ್ಣಪ್ರಮಾಣದಲ್ಲಿ ನೀಡಿಕೆ: ಸಾರಿಗೆ ಸಂಸ್ಥೆ ಭರವಸೆ

ಬಾಗಲಕೋಟೆ | ಜೂನ್ 15ರೊಳಗೆ ಸಿಬ್ಬಂದಿಗೆ ವೇತನ: ಸಾರಿಗೆ ಸಂಸ್ಥೆ ಭರವಸೆ

ವೆಂಕಟೇಶ್ ಜಿ.ಎಚ್ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ವಾಯವ್ಯ ಸಾರಿಗೆ ಸಂಸ್ಥೆ ಬಾಗಲಕೋಟೆ ವಿಭಾಗದ ಸಿಬ್ಬಂದಿಗೆ ಮೇ ತಿಂಗಳ ವೇತನ ನೀಡಿಕೆಗೆ ಸಿದ್ಧತೆ ಆರಂಭವಾಗಿದೆ. ಜೂನ್ 15ರೊಳಗೆ ನೌಕರರ ವೇತನ ಪೂರ್ಣ ಪ್ರಮಾಣದಲ್ಲಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.

ಬಾಗಲಕೋಟೆ ವಿಭಾಗದಲ್ಲಿ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ, ಅಧಿಕಾರಿಗಳು ಸೇರಿದಂತೆ 3200 ಮಂದಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮೇ ತಿಂಗಳ ವೇತನ ನೀಡಲು ₹6 ಕೋಟಿ ಅಗತ್ಯವಿದೆ.

ವದಂತಿಗಳಿಗೆ ಕಿವಿಗೊಡಬೇಡಿ: ’ಬಾಗಲಕೋಟೆಗೆ ಶುಕ್ರವಾರ ಭೇಟಿ ನೀಡಿದ್ದ ರಾಜ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಜೂನ್ 15ರ ಒಳಗಾಗಿ ನೌಕರರ ವೇತನ ಬಿಡುಗಡೆ ಮಾಡುವುದಾಗಿ ಸ್ಪಷ್ಟ ಭರವಸೆ ನೀಡಿದ್ದಾರೆ‘ ಎಂದು ವಾಯವ್ಯ ಸಾರಿಗೆ ಸಂಸ್ಥೆ ಬಾಗಲಕೋಟೆ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮಣ್ಣವರ ’ಪ್ರಜಾವಾಣಿ’ಗೆ ತಿಳಿಸಿದರು.

’ಕೆಲಸಕ್ಕೆ ತೆಗೆದುಕೊಳ್ಳದ ನೌಕರರಿಗೆ ವೇತನವಿಲ್ಲ, ಈಗ ಅರ್ಧ ಸಂಬಳ ಮಾತ್ರ ಕೊಡುತ್ತಾರೆ. ಅದು ಕಂತಿನಲ್ಲಿ ಪಾವತಿಸುತ್ತಾರೆ. ಸಂಬಳ ಕಡಿತ ಮಾಡುತ್ತಾರೆ ಎಂಬ ವದಂತಿಗಳಿಗೆ ಯಾರೂ ಕಿವಿಗೊಡಬೇಡಿ. ಎಲ್ಲರಿಗೂ ಪೂರ್ಣಪ್ರಮಾಣದಲ್ಲಿ ವೇತನ ನೀಡಲಾಗುತ್ತಿದೆ’ ಎಂದು ಹೇಳಿದರು.

ಹೆಚ್ಚಳವಾಗುತ್ತಿದೆ ಆದಾಯ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಸ್‌ಗಳು ರಸ್ತೆಗೆ ಇಳಿಯದೇ ಆದಾಯ ಇಲ್ಲದಂತಾಗಿ ಸಾರಿಗೆ ಸಂಸ್ಥೆಯಲ್ಲಿ ನೌಕರರಿಗೆ ವೇತನ ಕೊಡಲು ಹಣವಿಲ್ಲದಂತಾಗಿತ್ತು. ಈಗ ನಿಧಾನಕ್ಕೆ ಆದಾಯ ವೃದ್ಧಿಯಾಗುತ್ತಿದೆ.

’ಪ್ರಯಾಣಿಕರು ಬರತೊಡಗಿದ್ದಾರೆ. ಸಂಸ್ಥೆಯ ಬಾಗಲಕೋಟೆ ವಿಭಾಗದಲ್ಲಿ ಪ್ರತಿನಿತ್ಯ ಈಗ ₹16 ಲಕ್ಷ ಅದಾಯ ಬರುತ್ತಿದೆ. ರಾತ್ರಿ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಿರುವುದರಿಂದ ಸೋಮವಾರದಿಂದ ಆದಾಯದ ಪ್ರಮಾಣ ₹20 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ‘ ಎನ್ನುತ್ತಾರೆ.

ಅಂತರರಾಜ್ಯ ಸಂಚಾರಕ್ಕೆ ಅವಕಾಶ?:‌ ಜೂನ್ 8ರಿಂದ ಹೋಟೆಲ್, ವಸತಿಗೃಹಗಳ ತೆರೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಕೆಲವು ನಿಬಂಧನೆಗಳೊಂದಿಗೆ ಅಂತರರಾಜ್ಯ ಬಸ್ ಸಂಚಾರಕ್ಕೂ ಅವಕಾಶ ಕೊಡುವ ನಿರೀಕ್ಷೆ ಇದೆ. ಅದು ಆರಂಭವಾದಲ್ಲಿ ಸಂಸ್ಥೆಯ ಆದಾಯ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎನ್ನುತ್ತಾರೆ.

’ಲಾಕ್‌ಡೌನ್‌ಗೆ ಮುನ್ನ ಬಾಗಲಕೋಟೆ ವಿಭಾಗದಿಂದ ನಿತ್ಯ 645 ಬಸ್‌ಗಳ ಕಾರ್ಯಾಚರಣೆ ಇತ್ತು. ಅದರಲ್ಲಿ 150 ಬಸ್‌ಗಳು ಅಂತಾರಾಜ್ಯ ಸಂಚಾರ ನಡೆಸುತ್ತಿದ್ದವು. ಈಗ 280 ಶೆಡ್ಯೂಲ್‌ಗೆ ಮಾತ್ರ ಕಾರ್ಯಾಚರಿಸುತ್ತಿವೆ. ಜೂನ್ 10ರ ವೇಳೆ 400 ಶೆಡ್ಯೂಲ್‌ಗಳು ಕಾರ್ಯಾರಂಭಕ್ಕೆ ಸಿದ್ಧತೆ ನಡೆಸಿದ್ದೇವೆ‘ ಎಂದು ತಿಳಿಸಿದರು.

ನಿಲ್ದಾಣದಲ್ಲೇ ಸ್ಯಾನಿಟೈಸೇಶನ್: ಹೆಚ್ಚು ಪ್ರಯಾಣಿಕರ ದಟ್ಟಣೆ ಇರುವ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳನ್ನು ಆಯಾ ಟ್ರಿಪ್ ಮುಗಿಯುತ್ತಿದ್ದಂತೆಯೇ ಬಸ್ ನಿಲ್ದಾಣದಲ್ಲಿಯೇ ಸ್ಯಾನಿಟೈಸ್ ಮಾಡಲು ನಿರ್ಧರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು