ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ಲೋಕಸಭಾ ಚುನಾವಣೆ: ಆಕಾಂಕ್ಷಿ, ಬೆಂಬಲಿಗರಲ್ಲಿ ತಳಮಳ

ಘೊಷಣೆಯಾಗದ ಅಭ್ಯರ್ಥಿಗಳ ಹೆಸರು; ಇಂದು, ನಾಳೆ ಎಂದು ಮುಂದೂಡಿಕೆ
Published 13 ಮಾರ್ಚ್ 2024, 4:45 IST
Last Updated 13 ಮಾರ್ಚ್ 2024, 4:45 IST
ಅಕ್ಷರ ಗಾತ್ರ

ಬಾಗಲಕೋಟೆ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಆದರೆ, ಬಾಗಲಕೋಟೆ ಅಭ್ಯರ್ಥಿ ಹೆಸರು ಪ್ರಕಟಗೊಳ್ಳದಿರುವುದು ಆಕಾಂಕ್ಷಿಗಳ ತಳಮಳ ಹೆಚ್ಚಿಸಿದೆ.

ಕಾಂಗ್ರೆಸ್‌ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಮೊದಲ ಪಟ್ಟಿಯಲ್ಲಿ ರಾಜ್ಯದ ಹಲವು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಗೊಂಡಿದೆ. ಬಾಗಲಕೋಟೆಯ ಅಭ್ಯರ್ಥಿ ಹೆಸರು ಇಂದು, ನಾಳೆ ಎಂದು ಮುಂದೂಡುತ್ತಿರುವುದು ಬೆಂಬಲಿಗರಲ್ಲಿ ಆತಂಕ ಹೆಚ್ಚಿಸಿದೆ.

ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಮಾಜಿ ಸಚಿವ ಅಜಯಕುಮಾರ ಸರನಾಯಕ, ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ವೀಣಾ ಕಾಶಪ್ಪನವರ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರಕ್ಷಿತಾ ಈಟಿ, ಮುಖಂಡರಾದ ಬಸವಪ್ರಭು ಸರನಾಡಗೌಡ, ಪ್ರಕಾಶ ತಪಶೆಟ್ಟಿ, ಶಿವಕುಮಾರ ಮಲಘಾಣ, ಶ್ರೀಶೈಲ ದಳವಾಯಿ, ವಿವೇಕ ಯಾವಗಲ್‌ ಆಕಾಂಕ್ಷಿಗಳಾಗಿ ಟಿಕೆಟ್‌ಗಾಗಿ ಮನವಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸದವರ ಹೆಸರುಗಳೂ ಕೇಳಿ ಬರುತ್ತಿವೆ.

ಪ್ರಮುಖ ರೇಸ್‌ನಲ್ಲಿರುವ ಅಭ್ಯರ್ಥಿಗಳು ಬೆಂಗಳೂರು, ದೆಹಲಿಯ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ತಮಗೇ ಟಿಕೆಟ್‌ ನೀಡುವಂತೆ ಒತ್ತಡ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನೊಂದೆಡೆ ಪಕ್ಷದ ಮುಖಂಡರನ್ನೂ ಭೇಟಿಯಾಗಿ ತಮ್ಮ ಪರವಾಗಿರುವಂತೆ ಮನವಿ ಮಾಡುತ್ತಿದ್ದಾರೆ.

ನಿತ್ಯ ಮಾಧ್ಯಮಗಳಲ್ಲಿ ಇವರಿಗೇ ಟಿಕೆಟ್‌ ಪಕ್ಕಾ ಎಂದು ಬರುತ್ತಿದ್ದಂತೆಯೇ ಬೆಂಬಲಿಗರು, ಅಭಿಮಾನಿಗಳು ಮೊಬೈಲ್‌ಗೆ ಕರೆ ಮಾಡಿ ಅವರಿಗೆ ಟಿಕೆಟ್ ಪಕ್ಕಾ ಅಂತೇ ಹೌದಾ ಎಂದಾಗ ಉತ್ತರ ಹೇಳಲು ತಡವರಿಸುತ್ತಾರೆ. ತಮಗೇ ಖಂಡಿತಾ ಸಿಗಲಿದೆ ಎಂದು ವಿಶ್ವಾಸ ಮೂಡಿಸಲು ಹೆಣಗಾಡುತ್ತಿದ್ದಾರೆ.

ಸತತ ನಾಲ್ಕು ಬಾರಿ ಗೆಲುವು ಸಾಧಿಸಿರುವ ಪಿ.ಸಿ. ಗದ್ದಿಗೌಡರ ಐದನೇ ಬಾರಿಗೆ ಬಿಜೆಪಿಯಿಂದ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ. ಮಾಜಿ ಸಚಿವ ಮುರುಗೇಶ ನಿರಾಣಿಯೂ ಟಿಕೆಟ್‌ಗಾಗಿ ದೆಹಲಿ ಮಟ್ಟದಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ. ಇನ್ನೊಂದೆಡೆ ಸ್ವಯಂ ನಿವೃತ್ತಿ ಪಡೆದು ಬಂದಿರುವ ಐಎಎಸ್‌ ಅಧಿಕಾರಿಯಾಗಿದ್ದ ಪ್ರಕಾಶ ಪರಪ್ಪ ಸಹ ಬಾಗಲಕೋಟೆಯಲ್ಲಿ ಮನೆ ಮಾಡಿಕೊಂಡು, ಪ್ರಚಾರ ನಡೆಸುತ್ತಿದ್ದಾರೆ. ಇವೆಲ್ಲದರ ನಡುವೆ ಆಗಾಗ ಶಾಸಕ ಬಸನಗೌಡ ಯತ್ನಾಳರ ಹೆಸರೂ ಕೇಳಿ ಬರುತ್ತದೆ.

ಹೊಸಮುಖಗಳಿಗೆ, ಅನಿರೀಕ್ಷಿತ ಅಭ್ಯರ್ಥಿಗಳನ್ನು ಹಾಕುವಲ್ಲಿ ಬಿಜೆಪಿ ಹೈಕಮಾಂಡ್‌ ಮುಂದಿದೆ. ಬಾಗಲಕೋಟೆಗೂ ಅಂತಹ ಅಚ್ಚರಿ ಕಾದಿದೆಯೇ ಎಂಬುದು ಚರ್ಚೆಯ ವಿಷಯವಾಗಿದೆ.

ಚುನಾವಣೆ ಸಮೀಪಿಸುತ್ತಿದೆ. ನಾಲ್ಕಾರು ತಿಂಗಳು ಮೊದಲೇ ಘೋಷಣೆ ಮಾಡಿ, ಪ್ರಚಾರಕ್ಕೆ ಹೆಚ್ಚಿನ ಸಮಯ ನೀಡಲಾಗುವುದು ಎಂದಿದ್ದ ಪಕ್ಷದ ಮುಖಂಡರು ಚುನಾವಣಾ ದಿನಾಂಕ ಘೋಷಣೆ ದಿನ ಸಮೀಪಿಸುತ್ತಿದ್ದರೂ ಅಭ್ಯರ್ಥಿ ಹೆಸರು ಘೋಷಣೆಯಾಗದಿರುವುದು ಆಕಾಂಕ್ಷಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಯಾರಿಗಾದರೂ ಟಿಕೆಟ್‌ ನೀಡಲಿ. ಕೂಡಲೇ ಘೋಷಣೆ ಮಾಡಬೇಕು. ಕೊನೆಗಳಿಗೆಯಲ್ಲಿ ಘೋಷಣೆ ಮಾಡಿದರೆ ಪಕ್ಷಕ್ಕೂ ನಷ್ಟ, ಸ್ಪರ್ಧಿಸಿದವರಿಗೂ ಕಷ್ಟ ಎಂದು ಅಭ್ಯರ್ಥಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT