ಬಾಗಲಕೋಟೆ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ₹11.28 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದರ ಹಿಂದಿನ ಸಾಲಿನಲ್ಲಿ ₹6.65 ಕೋಟಿ ಲಾಭ ಗಳಿಸಿತ್ತು. ಈ ಬಾರಿ ಲಾಭದ ಪ್ರಮಾಣ ಹೆಚ್ಚಳವಾಗಿದೆ. ಆರಂಭದಿಂದಲೂ ಬ್ಯಾಂಕ್ ಲಾಭದಲ್ಲಿದೆ. ₹4,833 ಕೋಟಿ ದುಡಿಯುವ ಬಂಡವಾಳದೊಂದಿಗೆ ಒಟ್ಟು ₹6,856 ಕೋಟಿ ವ್ಯವಹಾರ ನಡೆಸಿದೆ ಎಂದರು.
₹3,521 ಕೋಟಿ ಠೇವಣಿ ಇದ್ದು, 2023–24ನೇ ಸಾಲಿನಲ್ಲಿ ₹3,944 ಕೋಟಿ ಗುರಿ ಹಾಕಿಕೊಳ್ಳಲಾಗಿದೆ. ₹3,397 ಕೋಟಿ ಸಾಲ ಬಾಕಿ ಇದ್ದು, ಅದರಲ್ಲಿ 1,280 ಕೋಟಿ ಬೆಳೆ ಸಾಲ, ₹234 ಕೋಟಿ ಮಾಧ್ಯಮಿಕ ಕೃಷಿ ಸಾಲ, ₹1,882 ಕೋಟಿ ಕೃಷಿಯೇತರ ಸಾಲ ಬಾಕಿ ಇದೆ ಎಂದು ಹೇಳಿದರು.
2022–23ನೇ 2,59,087 ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹1,346 ಕೋಟಿ ಬೆಳೆ ಸಾಲ, 1,778 ರೈತರಿಗೆ ಶೇ 3ರ ಬಡ್ಡಿ ದರದಲ್ಲಿ ₹105 ಕೋಟಿ ಸಾಲ ನೀಡಲಾಗಿದೆ. 2023–24ನೇ ಸಾಲಿನಲ್ಲಿ ₹1,400 ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದರು.
ಪಂಪ್‌ಸೆಟ್, ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಭೂ ಅಭಿವೃದ್ಧಿ, ರೇಷ್ಮೆ, ಟ್ರ್ಯಾಕ್ಟರ್ ಖರೀದಿ ಮುಂತಾದ ಉದ್ದೇಶಗಳಿಗೆ ಸಾಲ ನೀಡಲಾಗಿದೆ. ವಿವಿಧ ಔದ್ಯೋಗಿಕ ಘಟಕಗಳಿಗೆ ₹1,499 ಕೋಟಿ ಸಾಲ ನೀಡಲಾಗಿದೆ ಎಂದು ಹೇಳಿದರು.
ಕೃಷಿಯೇತರ ಸಾಲಗಳಾದ ಮನೆ ನಿರ್ಮಾಣ/ಖರೀದಿ, ವೇತನಾಧರಿತ, ಬಂಗಾರ ಆಭರಣ, ಅಡಮಾನ ಹಾಗೂ ವ್ಯಾಪಾರಕ್ಕಾಗಿ ₹201 ಕೋಟಿ ಸಾಲ ನೀಡಲಾಗಿದೆ. ನೇಕಾರಿಕೆಗಾಗಿ ₹7.66 ಕೋಟಿ, 339 ಸ್ವ ಸಹಾಯಗಳಿಗೆ ಶೂನ್ಯ ಬಡ್ಡಿ ದರದಲ್ಲಿ ₹7.76 ಕೋಟಿ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ 700 ಸ್ವಸಹಾಯ ಸಂಘಗಳಿಗೆ ₹14 ಕೋಟಿ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದರು.
ಬ್ಯಾಂಕ್ 47 ಶಾಖೆಗಳನ್ನು ಹಿಂದಿದ್ದು, ಹೊಸದಾಗಿ 6 ಶಾಖೆಗಳನ್ನು ಆರಂಭಿಸಲಾಗಿದೆ. ಶೀಘ್ರದಲ್ಲೇ ಇನ್ನೂ ಐದು ಶಾಖೆಗಳನ್ನು ಆರಂಭಿಸಲಾಗುವುದು. 38 ಎಟಿಎಂ ಯಂತ್ರಗಳನ್ನು ಅಳವಡಿಸಲಾಗಿದ್ದು, 100 ಪಿಎಸಿಎಸ್‌ಗಳಿಗೆ ಮೈಕ್ರೊ ಎಟಿಎಂ ಯಂತ್ರ ನೀಡಲಾಗಿದೆ. ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಬಹು ಸೇವಾ ಕೇಂದ್ರಗಳನ್ನಾಗಿ ಅಭಿವೃದ್ಧಿ ಪಡಿಸಲು ಬ್ಯಾಂಕಿನ ಸ್ವಂತ ವೆಚ್ಚದಲ್ಲಿ ಪಿಎಸಿಎಸ್ ಡೆವಲೆಪ್‌ಮೆಂಟ್ ಸೆಲ್ ರಚನೆ ಮಾಡಲಾಗಿದೆ. ಬ್ಯಾಂಕಿನ ಸದಸ್ಯತ್ವ ಹೊಂದಿ, ತನ್ನ ಎಲ್ಲ ವ್ಯವಹಾರಗಳನ್ನು ಬ್ಯಾಂಕಿನೊಂದಿಗೆ ನಿರ್ವಹಿಸುವ ಸದಸ್ಯ ಸಹಕಾರ ಸಂಘಗಳಿಗೆ ಗೋದಾಮು ಅಥವಾ ಸಂಘದ ಕಚೇರಿ ನಿರ್ಮಿಸಿಕೊಳ್ಳಲು ₹4 ಲಕ್ಷ ಸಹಾಯ ಧನ ನೀಡಲಾಗುತ್ತಿದ್ದು, ಈ ಬಾರಿ 196 ಸಂಘಗಳಿಗೆ ₹3.68 ಕೋಟಿ ಸಹಾಯ ಧನ ನೀಡಲಾಗಿದೆ ಎಂದರು.
ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ ರೈತರಿಗೆ ವೈಯಕ್ತಿಕ ಅಪಘಾತ ವಿಮೆ ಯೋಜನೆ, ಬೆಳೆ ವಿಮೆ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಬ್ಯಾಂಕ್ ಕೇಂದ್ರ ಕಚೇರಿ ಮೇಲೆ 100 ಕಿ.ವ್ಯಾಟ್ ಸಾಮರ್ಥ್ಯದ ಸೌರ ಶಕ್ತಿ ವಿದ್ಯುತ್ ಉತ್ಪಾದನಾ ಘಟಕವನ್ನು ₹58 ಲಕ್ಷ ವೆಚ್ಚದಲ್ಲಿ ಸ್ಥಾಪಿಸಲಾಗಿದ್ದು, ಪ್ರತಿ ವರ್ಷ ₹14 ಲಕ್ಷ ವಿದ್ಯುತ್ ವೆಚ್ಚ ಉಳಿತಾಯವಾಗಿದೆ ಎಂದು ಹೇಳಿದರು.
ನಿರ್ದೇಶಕ ಪ್ರಕಾಶ ತಪಶೆಟ್ಟಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.