ಬೆನಕಟ್ಟಿ: ವೈಶಿಷ್ಟ್ಯಪೂರ್ಣ ಆಷಾಢ ಪರ್ವ

7
'ಜೋಳದ ಕಿಚಡಿ' ಈ ಹಬ್ಬದ ವಿಶೇಷತೆ

ಬೆನಕಟ್ಟಿ: ವೈಶಿಷ್ಟ್ಯಪೂರ್ಣ ಆಷಾಢ ಪರ್ವ

Published:
Updated:
Deccan Herald

ಬೆನಕಟ್ಟಿ (ಬಾಗಲಕೋಟೆ): ಗ್ರಾಮದಲ್ಲಿ ಶುಕ್ರವಾರ ಸಂಜೆ ಕಂಚಿ ವೆಂಕಟೇಶ್ವರ ದೇವಸ್ಥಾನದಲ್ಲಿ 'ಆಷಾಢಪರ್ವ'(ಎಂಕಂಚೆಪ್ಪನ ಪರು) ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿ ಹಾಗೂ ಸಡಗರದಿಂದ ಆಚರಿಸಲಾಯಿತು.

ಆಷಾಢ ಮಾಸದ ಹುಣ್ಣಿಮೆಯ ನಂತರದ ಶುಕ್ರವಾರ ಈ ಪರ್ವ ಕಾರ್ಯಕ್ರಮ ಜರುಗಿತು. ಜೋಳದ ಕಿಚಡಿಯ ನೈವೇದ್ಯ ಈ ಹಬ್ಬದ ವಿಶೇಷ. ಗ್ರಾಮದ ಪ್ರತಿ ಮನೆಯಲ್ಲಿ ಜೋಳದ ಕಿಚಡಿಯನ್ನು ತಯಾರಿಸಿ ಗಡಿಗೆಯನ್ನು ಬುಟ್ಟಿಯಲ್ಲಿ ಹೊತ್ತ ಪುರುಷರು ಹನಮಂತ ದೇವರ ದೇವಸ್ಥಾನದ ಬಳಿ ಸೇರುತ್ತಾರೆ. ಅಲ್ಲಿ ದೇವರ ಪೂಜೆ ನೆರವೇರಿದ ನಂತರ ಬಾಜಾ-ಭಜಂತ್ರಿ, ಹಲಗೆ, ಡೊಳ್ಳು ಮೇಳದೊಂದಿಗೆ ಮೆರವಣಿಗೆಯಲ್ಲಿ ಊರ ಹೊರವಲಯದ ಕಂಚಿ ವೆಂಕಟೇಶ್ವರ (ಎಂಕಂಚೆಪ್ಪ) ದೇವಸ್ಥಾನಕ್ಕೆ ಸಾಗುತ್ತಾರೆ.

ಮಾರ್ಗದುದ್ದಕ್ಕೂ 'ವೆಂಕಟರಮಣ ಗೋವಿಂದಾ..ಗೋವಿಂದ..' ಎಂಬ ನಾಮಸ್ಮರಣೆ ಹೇಳುತ್ತಾ ಸಾಗಿ ಬಂದ ಗಡಿಗೆ ಹೊತ್ತ ಯುವಕರು, ರೈತರು, ದೇವಸ್ಥಾನದ ಕಟ್ಟೆಯ ಮೇಲೆ ತಾವು ತಂದಿದ್ದ ಜೋಳದ ಕಿಚಡಿಯನ್ನು ಒಂದೇ ರಾಶಿಯಲ್ಲಿ ಸುರಿದು ದೇವರಿಗೆ ನೈವೇದ್ಯ ಮಾಡಿ, ಗೋಪಾಳ ತುಂಬಿಸಿ ಈ ವರ್ಷ ಒಳ್ಳೆಯ ಮಳೆ, ಬೆಳೆ ಕೊಡುವಂತೆ ದೇವರಲ್ಲಿ ಪ್ರಾರ್ಥಿಸಿದರು.

ಎಲ್ಲ ಪೂಜಾ ಕಾರ್ಯಕ್ರಮಗಳನ್ನು ಪೂರೈಸಿದ ನಂತರ ಪಾಲ್ಗೊಂಡಿರುವ ಸಮಸ್ತ ಭಕ್ತರು ಸಾಮೂಹಿಕವಾಗಿ ಕಿಚಡಿ ಹಾಗೂ ಕಟ್ಟಿನ ಸಾರು ಮತ್ತು ಮಜ್ಜಿಗೆ ಸಾರಿನ ಸವಿ ಸವಿದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಯುವಕರು,ಶಾಲಾ ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಜನ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !