ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿದು ಉಳಿದ ಖಾದ್ಯತೈಲ ಜೈವಿಕ ಇಂಧನವಾಯ್ತು!

ಹೋಟೆಲ್, ಕಲ್ಯಾಣ ಮಂಟಪಗಳಿಂದ ಖಾದ್ಯ ತೈಲದ ತ್ಯಾಜ್ಯ ಖರೀದಿ
Last Updated 11 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಇಲ್ಲಿನ ಹೋಟೆಲ್ ಹಾಗೂ ಕಲ್ಯಾಣ ಮಂಟಪಗಳಲ್ಲಿ ತಿನಿಸುಗಳನ್ನು ಕರಿಯಲು ಬಳಸಿದ ಖಾದ್ಯ ತೈಲವನ್ನು ನಂತರ ಬಯೊ ಡೀಸೆಲ್ ಆಗಿ ಮಾರ್ಪಡಿಸಿ, ವಾಹನಗಳಿಗೆ ಇಂಧನವಾಗಿ ಬಳಸಲಾಗುತ್ತಿದೆ.

ಈ ಪರಿಸರ ಸ್ನೇಹಿ ಕಾರ್ಯದ ಸಾರಥ್ಯವನ್ನು ಬಾಗಲಕೋಟೆ ನಗರಸಭೆ ವಹಿಸಿದೆ. ಅದಕ್ಕೆ ಬಿ.ವಿ.ವಿ ಸಂಘದ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಬಯೊಟೆಕ್ನಾಲಜಿ ವಿಭಾಗ ಕೂಡ ಕೈ ಜೋಡಿಸಿದೆ. ಖಾದ್ಯ ತೈಲ ತ್ಯಾಜ್ಯದಿಂದ ನಿತ್ಯ ಇಲ್ಲಿ 100 ಲೀಟರ್ ಬಯೊ ಡೀಸೆಲ್ ಉತ್ಪಾದಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ.

ಬಳಕೆಯಾಗುವ ಖಾದ್ಯ ತೈಲವನ್ನುಹೋಟೆಲ್ ಹಾಗೂ ಕಲ್ಯಾಣ ಮಂಟಪಗಳಿಂದ ನಗರಸಭೆ ಸಿಬ್ಬಂದಿ ನಿತ್ಯ ಸಂಗ್ರಹಿಸಿ ಎಂಜಿನಿಯರಿಂಗ್ ಕಾಲೇಜಿಗೆ ತಂದು ಕೊಡುತ್ತಾರೆ. ಅಲ್ಲಿ ಅದನ್ನು ಸಂಸ್ಕರಿಸಲಾಗುತ್ತಿದೆ.

ಈ ಹಸಿರು ಇಂಧನ ಸಾರ್ವಜನಿಕರಿಗೆ ಪ್ರತಿ ಲೀಟರ್‌ಗೆ ₹ 60ಕ್ಕೆ ಸಿಗುತ್ತಿದೆ. ಲೀಟರ್‌ಗೆ ₹ 10ರಂತೆ ಖಾದ್ಯ ತೈಲದ ತ್ಯಾಜ್ಯವನ್ನು ಖರೀದಿಸಲಾಗುತ್ತಿದೆ. ಒಂದು ಲೀಟರ್ ತ್ಯಾಜ್ಯದಿಂದ ಅಷ್ಟೇ ಪ್ರಮಾಣದ ಬಯೊ ಡೀಸೆಲ್ ಸಿದ್ಧವಾಗುತ್ತದೆ. ಲಾಭದ ಮೊತ್ತ ಘಟಕದ ನಿರ್ವಹಣೆಗೆ ಬಳಸಲಾಗುತ್ತಿದೆ ಎಂದು ನಗರಸಭೆ ಪರಿಸರ ಎಂಜಿನಿಯರ್ ಹನಮಂತ ಕಲಾದಗಿ ಹೇಳುತ್ತಾರೆ.

‘ಈ ಮೊದಲು ಖಾದ್ಯ ತೈಲ ತ್ಯಾಜ್ಯ ಚರಂಡಿ ಪಾಲಾಗುತ್ತಿತ್ತು. ಇಲ್ಲವೇ ಬೀದಿ ಬದಿ ವ್ಯಾಪಾರಸ್ಥರು ಕಡಿಮೆ ಬೆಲೆಗೆ ಆ ಎಣ್ಣೆಯನ್ನು ಕೊಂಡು ಮರುಬಳಕೆ ಮಾಡುತ್ತಿದ್ದರು. ಇದು ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗಿತ್ತು. ಈಗ ಆ ಸಮಸ್ಯೆ ಇಲ್ಲ’ ಎನ್ನುತ್ತಾರೆ ಅವರು.

‘ಬಂಕ್‌ಗಳಲ್ಲಿ ಡೀಸೆಲ್ ದರ ಲೀಟರ್‌ಗೆ ₹ 71 ಇದೆ. ಬಯೊ ಡೀಸೆಲ್ ಪರಿಸರ ಸ್ನೇಹಿ, ವಾಹನಗಳ ನಿರ್ವಹಣೆಯೂ ಸುಲಭ. ಜೊತೆಗೆ ಹಣದ ಉಳಿತಾಯವಾಗಲಿದೆ. ಹೀಗಾಗಿ ಬೇಡಿಕೆ ಹೆಚ್ಚಿದೆ. ನಿತ್ಯ 200 ಲೀಟರ್ ಸಂಸ್ಕರಣೆ ಸಾಮರ್ಥ್ಯವಿದ್ದರೂ ಅಷ್ಟೊಂದು ಪ್ರಮಾಣದ ತ್ಯಾಜ್ಯ ನಗರದಲ್ಲಿ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಬೇರೆ ಕಡೆಯಿಂದಲೂ ಸಂಗ್ರಹಿಸಿ ತರುವ ಯೋಚನೆ ಇದೆ’ ಎಂದು ಕಲಾದಗಿ ಹೇಳುತ್ತಾರೆ.

‘ನನ್ನ ಟಂಟಂ ವಾಹನಕ್ಕೆ ಬಯೊ ಡೀಸೆಲ್ ಬಳಕೆ ಆರಂಭಿಸಿರುವೆ.ಲೀಟರ್‌ಗೆ 28 ಕಿ.ಮೀ ಮೈಲೇಜ್ ಕೊಟ್ಟಿದೆ. ಹೊಗೆಯೇ ಬರುವುದಿಲ್ಲ’ ಎಂದು ಚಾಲಕ ನವನಗರದ ಪರಶುರಾಮ ಕೋಲಾರ ಅಚ್ಚರಿ ವ್ಯಕ್ತಪಡಿಸುತ್ತಾರೆ.

ಡಿ.ಸಿ ಕಾರಿಗೂ ಬಯೊ ಡೀಸೆಲ್!
ಬಾಗಲಕೋಟೆ ಜಿಲ್ಲಾಧಿಕಾರಿ ಕಾರಿಗೂ ಇದೇ ಹಸಿರು ಇಂಧನ ಬಳಸಲಾಗುತ್ತಿದೆ. ನಗರಸಭೆಯ ಕಸ ಸಾಗಿಸುವ ವಾಹನಕ್ಕೂ ಪ್ರಾಯೋಗಿಕ ಬಳಕೆ ನಡೆದಿದೆ. ಕೆಲವು ಆಟೊ ಹಾಗೂ ಟಂಟಂ ಚಾಲಕರು ಹಸಿರು ಇಂಧನದ ಕಾಯಂ ಗ್ರಾಹಕರಾಗಿ ಬದಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT