ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮತದಾನ ಬಹಿಷ್ಕಾರ: ಎಚ್ಚರಿಕೆ

Published 7 ಏಪ್ರಿಲ್ 2024, 13:33 IST
Last Updated 7 ಏಪ್ರಿಲ್ 2024, 13:33 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ನೇಕಾರರು ಎರಡು ದಶಕಗಳಿಂದ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದರೂ ಸ್ಪಂದನೆ ಸಿಕ್ಕಲ್ಲ. ಬೇಡಿಕೆಗಳಿಗೆ ಕೂಡಲೇ ಸ್ಪಂದಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದು ಅನಿವಾರ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.

ಇಲ್ಲಿನ ಕಾಡಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ನಡೆದ ನೇಕಾರರ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಜವಳಿ ಸಚಿವ ಶಿವಾನಂದ ಪಾಟೀಲ ಅವರಿಗೆ ನೇಕಾರರು ಸಾಕಷ್ಟು ಸಲ ಮನವಿ ಸಲ್ಲಿಸಿದ್ದರೂ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಿ ಅವರಿಗೂ ಸೌಲಭ್ಯ ಕಲ್ಪಿಸಬೇಕು. ಆತ್ಮಹತ್ಯೆ ಮಾಡಿಕೊಂಡ ನೇಕಾರರಿಗೆ ಸರ್ಕಾರ ₹10 ಲಕ್ಷ ಪರಿಹಾರ ನೀಡಬೇಕು. ನೇಕಾರರ ವಿದ್ಯುತ್ ಬಿಲ್ ಅನ್ನು ಸರ್ಕಾರವೇ ಭರಿಸಬೇಕು. ನೇಕಾರರಿಗೆ ರಿಯಾಯ್ತಿ ದರದಲ್ಲಿ ವಿದ್ಯುತ್ ಪೂರೈಸಲು ಸರ್ಕಾರ ಒಪ್ಪಿಕೊಂಡರೂ ಹಿಂದಿನ ಬಾಕಿಯನ್ನು ಇನ್ನೂ ಮನ್ನಾ ಮಾಡಿಲ್ಲ ಎಂದು ಹೇಳಿದರು.

ಕೆಎಚ್‌ಡಿಸಿ ನೇಕಾರರಿಗೆ ನಿರಂತರ ಉದ್ಯೋಗ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ವೃದ್ಧ ನೇಕಾರರಿಗೆ ₹5 ಸಾವಿರ ಮಾಸಾಶನ ನೀಡಬೇಕು. ನೇಕಾರರು ಮತ್ತು ಜವಳಿ ಉದ್ಯಮ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ₹15 ಸಾವಿರ ಕೋಟಿ ಅನುದಾನವನ್ನು ಮೀಸಲು ಇಡಬೇಕು. ಯುವಕರು ನೇಕಾರಿಕೆಯತ್ತ ಮುಖ ಮಾಡಲು ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.

‘ದಿನಾಂಕ ನಿಗದಿಪಡಿಸಿ, ‘ನಮ್ಮದೆ ಬಸ್ ಚಾರ್ಜ್, ನಮ್ಮದೆ ಬುತ್ತಿ’ ಘೋಷಣೆ ಅಡಿ ಬೆಂಗಳೂರಿನಲ್ಲಿ ಶೀಘ್ರವೇ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಶಿವಲಿಂಗ ಟಿರಕಿ ತಿಳಿಸಿದರು.

ಸಂಗಪ್ಪ ಉದಗಟ್ಟಿ, ಆನಂದ ಜಗದಾಳ, ಲಕ್ಕಪ್ಪ ಪವಾರ, ಆನಂದ ಜೀರಗಾಳ, ಮಹಾದೇವ ನುಚ್ಚಿ, ವಂಟಗೂಡಿ ಸೇರಿದಂತೆ ರಬಕವಿ, ಬನಹಟ್ಟಿ, ರಾಮಪುರ, ಹೊಸೂರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ನೇಕಾರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT