ಮಂಗಳವಾರ, ಮಾರ್ಚ್ 28, 2023
33 °C
ಗಂಡುಮಕ್ಕಳನ್ನು ಲವ–ಕುಶರಂತೆ ಜೋಪಾನ ಮಾಡಿದ್ದೆ: ತಾಯಿ ಕಣ್ಣೀರು

ಹೃದಯಾಘಾತ: ಬಿಎಸ್‌ಎಫ್ ಯೋಧ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇಲೂರ (ಬಾದಾಮಿ): ಬಿಎಸ್ಎಫ್ ಯೋಧ ಬೇಲೂರ ಗ್ರಾಮದ ಚಂದ್ರಶೇಖರಪ್ಪ ಶಂಕ್ರಪ್ಪ ಕಿನ್ನಾಳ (53) ಸೋಮವಾರ ಕರ್ತವ್ಯದಲ್ಲಿದ್ದಾಗ ಹೃದಯಾ ಘಾತದಿಂದ ನಿಧನ ಹೊಂದಿದ್ದಾರೆ.

ಸೋಮವಾರ ಆರೋಗ್ಯದಲ್ಲಿ ಏರುಪೇರಾದಾಗ ಅಮೃತಸರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. 31 ವರ್ಷದಿಂದ ಅವರು ಪಂಜಾಬ್ ರಾಜ್ಯದ ಅಮೃತಸರದ 183ರ ಬಿಎಸ್ಎಫ್ ಬಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಗ್ರಾಮಕ್ಕೆ ಬಂದಿದ್ದ ಅವರು ಜುಲೈ 26 ರಂದು ಕರ್ತವ್ಯಕ್ಕೆ ಮರಳಿದ್ದರು. ಅವರಿಗೆ  ತಾಯಿ ಬಸಮ್ಮ, ಪತ್ನಿ ಶಿವಲೀಲಾ, ಪುತ್ರ ಅಭೀಷೇಕ, ವಿಶ್ವನಾಥ, ಸಹೋದರಿಯರು ಇದ್ದಾರೆ.

ಗ್ರಾಮಕ್ಕೆ ಬಂದಾಗ ನಮ್ಮೊಂದಿಗೆ ಸ್ನೇಹದಿಂದ ಇರುತ್ತಿದ್ದರು. ವಾರದ ಹಿಂದಷ್ಟೇ ಬಂದು ಹೋಗಿದ್ದರು. ಅವರ ಸಾವಿನ ಸುದ್ದಿ ಆಘಾತ ತಂದಿದೆ ಎಂದು ಸ್ನೇಹಿತ ಶಿವಲಿಂಗಪ್ಪ ಹೇಳಿದರು.

ತಾಯಿ ಕಣ್ಣೀರು: ‘ ಇಬ್ಬರು ಗಂಡುಮಕ್ಕಳನ್ನು ಲವಕುಶರಂತೆ ಜೋಪಾನ ಮಾಡಿ ಒಬ್ಬ ಮಗನನ್ನು ಭಾರತಮಾತೆಯ ಸೇವೆಯ ಕಳಿಸಿದ್ದೆ. ನನ್ನ ಗಂಡು ಮಗನನ್ನು ತಂದು ಕೊಡಿರಿ ಎಪ್ಪ‘ ಎಂದು ತಾಯಿ ಬಸಮ್ಮ ದುಃಖಿಸುತ್ತಿದ್ದರು.

ಯೋಧನ ಸ್ನೇಹಿತರು ಮನೆಗೆ ಮಂಗಳವಾರ ಸಾಂತ್ವನ ಹೇಳಲು ಬಂದಾಗ ತಾಯಿ ದುಃಖಿಸುವ ಸನ್ನಿವೇಶವು ಎಲ್ಲರ ಕಣ್ಣಾಲಿಗಳನ್ನು ತೇವವಾಗಿಸಿತು.

‘ಒಂದು ತಿಂಗಳ ಸೂಟಿಗೆ ಬಂದಿದ್ದ ಹೋದ ಸೋಮಾರ (ಜು.26) ತಿರುಗಿ ಹೋಗ್ಯಾನ್ರಿ. ಯವ್ವ ನೀ ಆರಾಮ ಇರಬೆ ಯಾವುದೂ ಚಿಂತಿ
ಮಾಡಬ್ಯಾಡ ಅಂತ ಹೇಳಿ ಹೋಗ್ಯಾನ್ರಿ ಒಂದ ವಾರದಾಗ ಹಿಂಗ ಆಗೈತ ಅಂದ್ರ ಹ್ಯಾಂಗ ನಂಬೂನ್ರಿ ‘ ಎಂದು ರೋದಿಸುತ್ತಿದ್ದರು.

ಪತ್ನಿ ಶೀವಲೀಲಾಗೆ ಆರಾಮ ಇಲ್ಲದ ಕಾರಣ ಪತಿ ಮೃತಪಟ್ಟ ಸುದ್ದಿಯನ್ನು ಹೇಳಿಲ್ಲ. ಮಕ್ಕಳಾದ ಅಭಿಷೇಕ, ವಿಶ್ವನಾಥ, ಸಹೋದರಿಯರಾದ ಅನ್ನಪೂರ್ಣ, ಕಳಕಮ್ಮ ಅವರಿಗೆ ಸಂಗತಿ ತಿಳಿಸಿದ್ದೇವೆ ಎಂದು ಸಹೋದರ ಶಿವಕುಮಾರ ಹೇಳಿದರು.

ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಆವರಣದಲ್ಲಿ ಯೋಧನ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ತಹಶೀಲ್ದಾರ್ ಸುಹಾಸ ಇಂಗಳೆ ಹೇಳಿದರು.

ಯೋಧನ ಪಾರ್ಥಿವ ಶರೀರ ಬುಧವಾರ ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿಗೆ ಬರಲಿದ್ದು ಮಧ್ಯಾಹ್ನದ ನಂತರ ಗ್ರಾಮಕ್ಕೆ ಬರುವ ನಿರೀಕ್ಷೆ ಇದೆ ಎಂದು ಸಿಪಿಐ ರಮೇಶ ಹಾನಾಪೂರ ಹೇಳಿದರು. ಗ್ರಾಮಕ್ಕೆ ತಹಶೀಲ್ದಾರ್ ಸುಹಾಸ ಇಂಗಳೆ, ಸಿಪಿಐ ರಮೇಶ ಹಾನಾಪೂರ, ಪಿಎಸ್ಐ ನೇತ್ರಾವತಿ ಪಾಟೀಲ, ತಾಲ್ಲೂಕು ಪಂಚಾಯ್ತಿ ಇಒ ಮಲ್ಲಿಕಾರ್ಜುನ ಕಲಾದಗಿ ಬೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಅಂತಿಮ ಸಂಸ್ಕಾರದ ಸಿದ್ದತೆ ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು