ಕುಳಗೇರಿ ಕ್ರಾಸ್: ಸಮೀಪದ ಸೋಮನಕೊಪ್ಪ ಗ್ರಾಮದಿಂದ ಕುಳಗೇರಿ ಕ್ರಾಸ್ ಹಾಗೂ ಬಾದಾಮಿಗೆ ತೆರಳಲು ನಿತ್ಯ ಶಾಲಾ –ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು 3 ರಿಂದ 4 ಕಿ.ಮೀ ನಡೆಯಬೇಕಾಗುತ್ತದೆ.
ಸೋಮನಕೊಪ್ಪ ಗ್ರಾಮದಲ್ಲಿ ಅನಾರೋಗ್ಯ ಸಮಸ್ಯೆ ಉಂಟಾದರೆ ಖಾಸಗಿ ವಾಹನ ತೆಗೆದುಕೊಂಡು ಅಥವಾ ಗ್ರಾಮದಲ್ಲಿಯ ಯಾರಾದರೂ ಒಬ್ಬರ ಸಹಾಯದಿಂದ ಬೈಕ್ ತೆಗೆದುಕೊಂಡು ಆಸ್ಪತ್ರೆಗೆ ಹೋಗುವ ಸ್ಥಿತಿಯಿದೆ. ಬೇರೆ ಗ್ರಾಮದಿಂದ ತಡರಾತ್ರಿ ಬಂದರೆ ಯಾವುದೇ ವಾಹನಗಳು ಸಿಗುವುದಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
‘ಸೋಮನಕೊಪ್ಪ ಗ್ರಾಮಕ್ಕೆ ಮೊದಲು ದಿನಕ್ಕೆ ಎರಡು ಬಾರಿ ಬಾದಾಮಿ ಘಟಕದಿಂದ ಸಾರಿಗೆ ಬಸ್ ಸಂಚರಿಸುತ್ತಿತ್ತು. ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಗ್ರಾಮದ ಶಾಲೆ-ಕಾಲೇಜು ಮಕ್ಕಳು, ಪ್ರಯಾಣಿಕರು ಕುಳಗೇರಿ ಕ್ರಾಸ್‌ವರೆಗೆ ನಡೆದು ಹೋಗಬೇಕಾಗುತ್ತಿದೆ’ ಎಂದು ಗ್ರಾಮದ ಯುವಕ ರಮೇಶ ಮಣ್ಣೂರ ದೂರಿದರು.
ಬಸ್ ಸೌಲಭ್ಯವನ್ನು ಪುನಃ ಆರಂಭಿಸುವಂತೆ ಗ್ರಾಮಸ್ಥರು ಘಟಕ ವ್ಯವಸ್ಥಾಪಕರಲ್ಲಿ ಮನವಿ ಮಾಡಿದರು.