ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಬಕವಿ ಬನಹಟ್ಟಿ | ಉದ್ಘಾಟನೆಯಾಗದ ಬಸ್ ನಿಲ್ದಾಣ: ಪ್ರಯಾಣಿಕರಿಗೆ ಸಂಕಟ

Published 16 ಜೂನ್ 2024, 6:11 IST
Last Updated 16 ಜೂನ್ 2024, 6:11 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಸ್ಥಳೀಯ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಂಡರೂ ಇನ್ನೂ ಉದ್ಘಾಟನೆಯಾಗದೇ ಇರುವುದರಿಂದ ಪ್ರಯಾಣಿಕರಿಗೆ ಮತ್ತು ಶಾಲೆ–ಕಾಲೇಜು ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದೆ.

ಬಸ್ ನಿಲ್ಧಾಣಕ್ಕೆ ಬರುವ ಪ್ರಯಾಣಿಕರು ನಿಂತುಕೊಂಡೇ ಬಸ್‌ಗಾಗಿ ಕಾಯುವ ಸ್ಥಿತಿ ಇದೆ. ಅದರಲ್ಲೂ ಹಿರಿಯ ನಾಗರಿಕರಿಗೆ ಮತ್ತು ಚಿಕ್ಕಮಕ್ಕಳಿಗೆ ಬಹಳ ಸಮಸ್ಯೆ ಉಂಟಾಗಿದೆ. ಬಸ್‌ಗಳು ವ್ಯವಸ್ಥಿತವಾಗಿ ನಿಲ್ಲಲು ಸ್ಥಳಾವಕಾಶ ಇಲ್ಲದಂತಾಗಿದೆ.

ನಿತ್ಯ ಶಾಲೆ–ಕಾಲೇಜು ಮುಗಿಸಿಕೊಂಡು ಮನೆಗಳಿಗೆ ತೆರಳುವ ವಿದ್ಯಾರ್ಥಿಗಳು ತಮ್ಮ ಗ್ರಾಮಗಳ ಬಸ್ ಬರುವವರೆಗೂ ನಿಲ್ಲಬೇಕಿದೆ. ಕೆಲವು ಬಾರಿ ಗಂಟೆಗಟ್ಟಲೇ ನಿಂತು ಕಾಯಬೇಕಾಗಿದೆ.

ಸದ್ಯ ಮಳೆಗಾಲ ಇರುವುದರಿಂದ ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಮತ್ತಷ್ಟು ಸಮಸ್ಯೆಯಾಗಿದೆ. ಹಳೆಯ ಬಸ್‍ ನಿಲ್ದಾಣ ಕಟ್ಟಡವನ್ನು ಸಂಪೂರ್ಣ ತೆಗೆದು ಹಾಕಿದ್ದರಿಂದ ಮಳೆ ಮತ್ತು ಗಾಳಿಯಿಂದ ರಕ್ಷಣೆ ಪಡೆಯಲು ಯಾವುದೇ ವ್ಯವಸ್ಥೆ ಬಸ್ ನಿಲ್ದಾಣದಲ್ಲಿ ಇಲ್ಲ. ಕೆಡವಿದ ಹಳೆಯ ಬಸ್ ನಿಲ್ಧಾಣದ ಕಟ್ಟಡದಲ್ಲಿರುವ ಪ್ರದೇಶವನ್ನು ಇನ್ನಷ್ಟು ಸ್ವಚ್ಛ ಮಾಡಬೇಕಾಗಿದೆ.

ನೂತನ ಬಸ್ ನಿಲ್ದಾಣದಲ್ಲಿ ನಿರ್ಮಾಣ ಮಾಡಲಾಗಿರುವ ಶೌಚಾಲಯಗಳು ಕೂಡ ಪ್ರಯಾಣಿಕರಿಗೆ ಲಭ್ಯವಿಲ್ಲ. ಬಹಳಷ್ಟು ಜನರು ಬಸ್ ನಿಲ್ದಾಣದ ಹಿಂದಿರುವ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದಾಗಿ ಬಸ್ ನಿಲ್ದಾಣ ಗಬ್ಬೆದ್ದು ನಾರುತ್ತಿದೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ನೀಡಿ ಆದಷ್ಟು ಬೇಗ ಬಸ್ ನಿಲ್ದಾಣದ ಉದ್ಘಾಟನೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರಾದ ಬಸವರಾಜ ಪುಟಾಣಿ, ಗೋಪಾಲ ಭಟ್ಟಡ, ಪ್ರಕಾಶ ಹೋಳಗಿ, ಎಸ್.ಎಂ. ಫಕೀರಪುರ, ಅವಿನಾಶ ಹಟ್ಟಿ, ಮಹಾಶಾಂತ ಶೆಟ್ಟಿ, ಗೌರಿ ಮಿಳ್ಳಿ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.

ಬನಹಟ್ಟಿಯ ಬಸ್ ನಿಲ್ದಾಣದಲ್ಲಿ ಹಳೇಯ ಕಟ್ಟಡದ ಕಲ್ಲು ಮಣ್ಣು ಉಳಿದುಕೊಂಡಿರುವುದು
ಬನಹಟ್ಟಿಯ ಬಸ್ ನಿಲ್ದಾಣದಲ್ಲಿ ಹಳೇಯ ಕಟ್ಟಡದ ಕಲ್ಲು ಮಣ್ಣು ಉಳಿದುಕೊಂಡಿರುವುದು

ಬಸ್ ನಿಲ್ದಾಣದಲ್ಲಿ ನಿಲ್ಲಲು, ಕುಳಿತುಕೊಳ್ಳಲು ಸ್ಥಳವೇ ಇಲ್ಲ ಬಸ್ ನಿಲ್ದಾಣ ಪ್ರವೇಶಿಸದಂತೆ ಪತ್ರಾಸ ತಡೆಗೋಡೆ ನಿರ್ಮಾಣ ವಿದ್ಯಾರ್ಥಿಗಳಿಗೆ ದಿನನಿತ್ಯ ತೊಂದರೆ

ಉದ್ಘಾಟನೆಗೆ ಶೀಘ್ರ ಕ್ರಮ ರಬಕವಿ ಮತ್ತು ಬನಹಟ್ಟಿಯಲ್ಲಿ ನಿರ್ಮಾಣ ಮಾಡಲಾಗಿರುವ ಬಸ್ ನಿಲ್ದಾಣಗಳ ಉದ್ಘಾಟನೆಯನ್ನು ನೆರವೇರಿಸಲು ಬಾಗಲಕೋಟೆಯ ಸಾರಿಗೆ ಇಲಾಖೆಯ ಜಿಲ್ಲಾ ಮುಖ್ಯಸ್ಥರ ಗಮನಕ್ಕೆ ತರಲಾಗಿದೆ. ಎರಡು ಬಸ್ ನಿಲ್ದಾಣಗಳನ್ನು ಪರಿಶೀಲಿಸುವಂತೆ ತಿಳಿಸಿದ್ಧೇನೆ. ಸಾರಿಗೆ ಇಲಾಖೆಯ ಸಚಿವರನ್ನು ಉದ್ಘಾಟನೆಗೆ ಕರೆಯಿಸಿ ಆದಷ್ಟು ಬೇಗ ಉದ್ಘಾಟನೆ ನೆರವೇರಿಸುವಂತೆ ಅಧಿಕಾರಿಗಳ ಜೊತೆಗೆ ಚರ್ಚಿಸಿದ್ಧೇನೆ. ಸಿದ್ದು ಸವದಿ ಶಾಸಕ ತೇರದಾಳ ಮತಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT