ಮಂಗಳವಾರ, ಮಾರ್ಚ್ 9, 2021
29 °C
₹12 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸೋಲಾರ್ ಘಟಕ

17 ಕೆ.ವಿ. ವಿದ್ಯುತ್ ಉತ್ಪಾದನೆ: ಚರಂತಿಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ‘ಬಿವಿವಿ ಸಂಘದ ಬಸವೇಶ್ವರ ವಿಜ್ಞಾನ ಕಾಲೇಜಿನಲ್ಲಿ ನಿತ್ಯ 17 ಕೆ.ವಿ(ಕಿಲೋ ವಾಟ್‌) ವಿದ್ಯುತ್ ಉತ್ಪಾದಿಸುವ ಸೋಲಾರ್ ಘಟಕ ನಿರ್ಮಿಸಿದ್ದು, ಕಾಲೇಜಿನ ವಿದ್ಯುತ್‌ ಅಗತ್ಯತೆ ಪೂರೈಸುತ್ತಿದೆ’ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

₹12 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸೋಲಾರ್ ಘಟಕ ಹಾಗೂ ₹20 ಲಕ್ಷ ವೆಚ್ಚದಲ್ಲಿ ನವೀಕರಿಸಿರುವ ಗಣಕಯಂತ್ರ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು, ‘ಕಾಲೇಜಿಗೆ ಬಳಸಿ, ಉಳಿದ ವಿದ್ಯುತ್ತನ್ನು ಹೆಸ್ಕಾಂ ಗ್ರೀಡ್‌ಗೆ ಯುನಿಟ್‌ಗೆ ₹ 4 ರಂತೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜಿನಲ್ಲೂ ಸೋಲಾರ್‌ ಘಟಕಗಳನ್ನು ನಿರ್ಮಿಸಲಾಗಿದೆ’ ಎಂದರು.

‘ದೇಶದ ಯುವಕರು ಉನ್ನತ ವ್ಯಾಸಂಗಕ್ಕೆ ಬೇರೆ ದೇಶಗಳಿಗೆ ಹೋಗುವ ಬದಲು ಬೇರೆ ದೇಶದ ವಿದ್ಯಾರ್ಥಿಗಳು ಭಾರತಕ್ಕೆ ಬಂದು ಉನ್ನತ ಶಿಕ್ಷಣ ಪಡೆಯಬೇಕು ಎನ್ನುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ‘ನ್ಯಾಷನಲ್ ರಿಸರ್ಚ್ ಫೌಂಡೇಷನ್‌’ ಸ್ಥಾಪನೆಗೆ ಪ್ರಾಶಸ್ತ್ಯ ನೀಡಿದೆ’ ಎಂದರು.

‘ವಿದ್ಯಾರ್ಥಿಗಳು ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕು ಎಂಬುದು ಪ್ರಧಾನಿ ಇಚ್ಛೆಯಾಗಿದೆ. ಅದರಂತೆ ಸಂಘದ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಪ್ರಾಚಾರ್ಯರು, ಪ್ರಾಧ್ಯಾಪಕರು ಪ್ರೋತ್ಸಾಹ ನೀಡಬೇಕು’ ಎಂದು ಸಲಹೆ ನೀಡಿದರು.

ಸಂಘದ ಗೌರವಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಆರ್.ಕಂದಗಲ್ಲ ಸೇರಿ ಅನೇಕರು ಪಾಲ್ಗೊಂಡಿದ್ದರು.

ಸರ್ಕಾರ ಅತಂತ್ರ:ಬಿಜೆಪಿ ಪಾತ್ರವಿಲ್ಲ

ಸಮ್ಮಿಶ್ರ ಸರ್ಕಾರದ ಅತೃಪ್ತ ಶಾಸಕರ ರಾಜೀನಾಮೆ ವಿಷಯದಲ್ಲಿ ಬಿಜೆಪಿ ಪಾತ್ರವಿಲ್ಲ. ಸರ್ಕಾರ ಅಲ್ಪಮತಕ್ಕೆ ಕುಸಿದರೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ನಾವು (ಬಿಜೆಪಿಗರು) ಸರ್ಕಾರ ರಚಿಸಲೀ ಅಂತಾನೇ ಜನರು ನಮ್ಮನ್ನು ಹೆಚ್ಚು ಬಹುಮತದಿಂದ ಆಯ್ಕೆ ಮಾಡಿ‌ದ್ದಾರೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು. 

ಪಕ್ಷದ ಶಾಸಕ ಬಸವರಾಜ ದಡೇಸನೂರ್ ಅವರು ತಮ್ಮ ಕ್ಷೇತ್ರದ ಕೆಲಸಕ್ಕಾಗಿ ಸಚಿವ ವೆಂಕಟರಾವ್ ನಾಡಗೌಡ ಅವರನ್ನು ಭೇಟಿ ಮಾಡಿದ್ದಾರೆ. ಪಕ್ಷ ತೊರೆಯುವ ವ್ಯಕ್ತಿ ಅವರಲ್ಲ. ರಾಜೀನಾಮೆ ನೀಡಿದ ಶಾಸಕರಲ್ಲಿ ಹೆಚ್ಚಿನವರು ಸಿದ್ದರಾಮಯ್ಯ ಆಪ್ತರು ಹಾಗೂ ಸಮ್ಮಿಶ್ರ ಸರ್ಕಾರದ ಇನ್ನು ಹೆಚ್ಚಿನ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ ಎಂದರು.

ಈ ಹಿಂದಿನ ರಾಜ್ಯಪಾಲ ಹಂಸರಾಜ ಭಾರದ್ವಾಜ್‌ ರೀತಿಯಲ್ಲಿ ಇಂದಿನ ರಾಜ್ಯಪಾಲ ವಜುಭಾಯಿ ವಾಲಾ ಇಲ್ಲ. ಅವರೊಬ್ಬ ಅತ್ಯುತ್ತಮ ವ್ಯಕ್ತಿ. ಕಾಲಕ್ಕೆ ತಕ್ಕಂತೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು