ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್ ಸೂಪರ್ ಸ್ಪೆಷಾಲಿಟಿ ಪರೀಕ್ಷೆ: ದೇಶಕ್ಕೆ ಚಿದಾನಂದ ಮೊದಲ ರ‍್ಯಾಂಕ್‌ !

ಕೃಷಿ ಕಾರ್ಮಿಕನ ಮಗನ ಸಾಧನೆ
Last Updated 2 ಫೆಬ್ರುವರಿ 2022, 20:19 IST
ಅಕ್ಷರ ಗಾತ್ರ

ಬಾಗಲಕೋಟೆ: ಮುಧೋಳ ತಾಲ್ಲೂಕಿನ ರನ್ನಬೆಳಗಲಿಯ ಕೃಷಿ ಕಾರ್ಮಿಕ ಕಲ್ಲಪ್ಪ ಕುಂಬಾರ ಅವರ ಪುತ್ರ ಚಿದಾನಂದ ಕುಂಬಾರ 2021ನೇ ಸಾಲಿನ ನೀಟ್ ಸೂಪರ್ ಸ್ಪೆಷಾಲಿಟಿ ಪರೀಕ್ಷೆಯಲ್ಲಿ ಡಿಎಂ ಗ್ಯಾಸ್ಟ್ರೊಎಂಟರಾಲಜಿ ಹಾಗೂ ಡಿಎಂ ಹೆಪ್ಟಾಲಜಿ ಈ ಎರಡೂ ವಿಭಾಗಗಳಲ್ಲಿ ದೇಶಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದಾರೆ.

ಸೂಪರ್ ಸ್ಪೆಷಾಲಿಟಿ ವಿಭಾಗದ ನೀಟ್ ಪರೀಕ್ಷೆಯಲ್ಲಿ ದೇಶದಾದ್ಯಂತ 20 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ಚಿದಾನಂದ ಬಾಲಕನಿದ್ದಾಗಲೇ ತಾಯಿ ಕಸ್ತೂರಿ ತೀರಿಕೊಂಡಿದ್ದರು. ತಂದೆ ಕಲ್ಲಪ್ಪ ಅವರ ಆಶ್ರಯದಲ್ಲಿ ಬೆಳೆದು ಬಡತನದಲ್ಲೇ ರನ್ನಬೆಳಗಲಿಯ ಎಂಪಿಎಸ್ ಶಾಲೆಯಲ್ಲಿ 1ರಿಂದ 7ನೇ ತರಗತಿ, ಬಿವಿವಿಎಸ್ ಪ್ರೌಢಶಾಲೆಯಲ್ಲಿ 8 ರಿಂದ 10ನೇ ತರಗತಿ ಕಲಿತು, ಜಮಖಂಡಿಯ ಬಿಎಲ್‍ಡಿಇ ಕಾಲೇಜಿನಲ್ಲಿ ಪಿಯುಸಿ (ವಿಜ್ಞಾನ) ಪಾಸಾಗಿದ್ದರು. ಅವರು ವಿದ್ಯಾರ್ಥಿವೇತನ ಹಾಗೂ ಸಾರ್ವಜನಿಕರ ಆರ್ಥಿಕ ನೆರವಿನಿಂದ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದ್ದಾರೆ.

ಸರ್ಕಾರಿ ಕೋಟಾದಲ್ಲಿ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಎಂಬಿಬಿಎಸ್ ಕಲಿತು ಗುವಾಹಟಿಯಲ್ಲಿ ಎಂ.ಡಿ ಮುಗಿಸಿರುವ ಅವರು, ಹೈದರಾಬಾದ್‍ನ ಗ್ಲೋಬಲ್ ಹಾಸ್ಪಿಟಲ್‍ನಲ್ಲಿ ಕೆಲಸ ಮಾಡಿದ್ದಾರೆ.

‘ಹೆಪ್ಟಾಲಜಿಯಲ್ಲಿ ಮೊದಲ ರ‍್ಯಾಂಕ್ ಬರುವ ನಿರೀಕ್ಷೆ ಇತ್ತು. ಆದರೆ ಗ್ಯಾಸ್ಟ್ರೊಎಂಟರಾಲಜಿಯಲ್ಲಿ ಮೊದಲ 50ರೊಳಗೆ ಸ್ಥಾನ ಸಿಗಬಹುದು ಅಂದುಕೊಂಡಿದ್ದೆ. ಸಾಮಾಜಿಕ ಜಾಲತಾಣದಿಂದ ದೂರವಿದ್ದು, ಮನಸ್ಸಿಟ್ಟು ಓದಿದರೆ ಖಂಡಿತ ಯಶಸ್ಸು ಸಾಧ್ಯ’ ಎಂದು ಚಿದಾನಂದ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.

‘ಅಪ್ಪ, ಸಂಬಂಧಿಗಳು, ಊರಿನ ಜನರ ನೆರವಿನಿಂದ ಇದೆಲ್ಲ ಸಾಧ್ಯವಾಗಿದೆ. ದೆಹಲಿಯ ಜಿ.ಬಿ.ಪಂತ್ ಕಾಲೇಜಿನ ಗ್ಯಾಸ್ಟ್ರೊಎಂಟರಾಲಜಿ ವಿಭಾಗಕ್ಕೆ ಸೇರ್ಪಡೆಯಾಗುವೆ’ ಎಂದು ಅವರು ತಿಳಿಸಿದರು.

ಸೂಪರ್ ಸ್ಪೆಷಾಲಿಟಿ ವಿಭಾಗದ ನೀಟ್ ಪರೀಕ್ಷೆಯಲ್ಲಿ ದೇಶಾದ್ಯಂತ 20 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರಲ್ಲಿ ಚಿದಾನಂದ ದೇಶಕ್ಕೆ ಮೊದಲ ರ‍್ಯಾಂಕ್‌ ಪಡೆದು ಗಮನ ಸೆಳೆದಿದ್ದಾರೆ.

ಚಿದಾನಂದ ತಂದೆ ಕಲ್ಲಪ್ಪ ಕೃಷಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ಬಡತನದ ಮಧ್ಯೆಯೂ ಮಗನಿಗೆ ಶಿಕ್ಷಣ ಕೊಡಿಸಿದ್ದಾರೆ. ಚಿದಾನಂದ ಸ್ಕಾಲರ್ ಶಿಪ್ ಹಾಗೂ ಸಾರ್ವಜನಿಕರ ಸಹಾಯದಿಂದ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT