ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟಿಸ್ ನೀಡದೆ ವಾಹನ ಜಪ್ತಿ ಮಾಡಿದ ಬ್ಯಾಂಕ್‌ಗೆ ದಂಡ ವಿಧಿಸಿದ ಗ್ರಾಹಕರ ಆಯೋಗ

Last Updated 29 ಮಾರ್ಚ್ 2023, 7:01 IST
ಅಕ್ಷರ ಗಾತ್ರ

ಬಾಗಲಕೋಟೆ: ಸಾಲ ಪಡೆದು ವಾಹನ ಖರೀದಿಸಿದಾಗ ಕಂತು ಕಟ್ಟಿಲ್ಲ ಎಂದು ನೋಟಿಸ್‌ ನೀಡದೆ ವಾಹನ ಜಪ್ತಿ ಮಾಡಿದ್ದಕ್ಕೆ ಜಿಲ್ಲಾ ಗಾಹಕರ ಆಯೋಗ ದಂಡ ವಿಧಿಸಿದೆ.

ಪ್ರಕರಣದ ವಿವರ: ಮುಧೋಳ ತಾಲ್ಲೂಕಿನ ಭಂಟನೂರ ಗ್ರಾಮದ ಕಲ್ಲಪ್ಪ ಕುಂಬಾರ ಎಂಬುವರು ಜೀವನೋಪಾಯ ಸಲುವಾಗಿ 2018ರಲ್ಲಿ ಮುಧೋಳ ಐಡಿಎಫ್‌ಸಿ ಬ್ಯಾಂಕಿನಲ್ಲಿ ₹5,88,703 ಸಾಲ ಮಾಡಿ ಗೂಡ್ಸ್ ಗಾಡಿ ಖರೀದಿಸಿರುತ್ತಾರೆ. ಕಂತುಗಳನ್ನು ಸರಿಯಾಗಿ ಕಟ್ಟುತ್ತಾ ಇರುತ್ತಾರೆ.

ಕೋವಿಡ್ ಸಂದರ್ಭದಲ್ಲಿ ಕಂತು ಕಟ್ಟಲು ಕಷ್ಟವಾಗಿದೆ. ಬ್ಯಾಂಕಿನವರ ಒತ್ತಡದಿಂದಾಗಿ ಅಲ್ಲಿ, ಇಲ್ಲಿ ಹಣ ಹೊಂದಿಸಿ 2021ನವೆಂಬರ್‌ವರೆಗೆ ಕಂತುಗಳನ್ನು ಕಟ್ಟುತ್ತಾರೆ. 2021 ಡಿಸೆಂಬರ್ ನಲ್ಲಿ ಬ್ಯಾಂಕಿನವರು ನೋಟಿಸ್‌ ನೀಡದೆ ವಾಹನ ಜಪ್ತಿ ಮಾಡುತ್ತಾರೆ. ಬಾಕಿ ಮೊತ್ತ ₹3,86,907 ತುಂಬುವಂತೆ ನೋಟಿಸ್‌ ನೀಡಿದ್ದಾರೆ. 2022 ಫೆಬ್ರವರಿಯಲ್ಲಿ ದೂರುದಾರರು ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಸರಿಯಾಗಿ ಸ್ಪಂದಿಸದೆ ಬಾಗಲಕೋಟೆ ಪ್ರಧಾನ ಕಚೇರಿಗೆ ಕಳುಹಿಸುತ್ತಾರೆ. ಅಲ್ಲಿಯೂ ಸರಿಯಾಗಿ ಮಾಹಿತಿ ಕೊಡದೆ ಹುಬ್ಬಳ್ಳಿ ಕಚೇರಿಗೆ ಹೋಗಲು ತಿಳಿಸುತ್ತಾರೆ.

ಬ್ಯಾಂಕ್ ಅಧಿಕಾರಿ ಮೌಖಿಕವಾಗಿ ಸದರಿ ವಾಹನವನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾಗಿ ತಿಳಿಸುತ್ತಾರೆ. ಬೇರೆಯವರಿಗೆ ಮಾರಾಟ ಮಾಡಿದ್ದರೂ ಮಾಲೀಕತ್ವ ವರ್ಗಾವಣೆ ಮಾಡದೆ ವಾಹನ ಇನ್ನೂ ತನ್ನ ಹೆಸರಿನಲ್ಲಿ ಓಡಾಡುತ್ತಿರುವುದು ಗಮನಕ್ಕೆ ಬರುತ್ತದೆ. ಈ ನಡುವೆ ಮಾಲೀಕತ್ವ ವರ್ಗಾವಣೆ ಸಲುವಾಗಿ ಜಮಖಂಡಿ ಆರ್.ಟಿ.ಒ ನೋಟಿಸ್ ನೀಡುತ್ತಾರೆ.

ವಾಹನವನ್ನು ತನಗೆ ನೋಟಿಸ್ ನೀಡದೆ ಜಪ್ತಿ ಮಾಡಿದ್ದು ಅಲ್ಲದೆ ಬೇರೆಯವರಿಗೆ ಮಾರಾಟ ಮಾಡಿದ್ದೀರಿ. ಹೆಸರು ವರ್ಗಾವಣೆ ತಕಾರು ಸಲ್ಲಿಸಿ, ವಾಹನ ತನಗೆ ಕೊಡಬೇಕು ಎಂದು ಬ್ಯಾಂಕಿನವರಿಗೆ ಕೇಳುತ್ತಾರೆ. ಬ್ಯಾಂಕಿನವರು ಸರಿಯಾಗ ಸ್ಪಂದಿಸದ ಕಾರಣ ಜಿಲ್ಲಾ ಗಾಹಕರ ಆಯೋಗಕ್ಕೆ ದೂರು ನೀಡುತ್ತಾರೆ‌.

ದೂರುದಾರರಿಗೆ ಸಾಲ ತೀರಿದ ಪ್ರಮಾಣ ಪತ್ರ ಕೊಡಬೇಕು. ದೂರುದಾರರು ಹೆಸರು ವರ್ಗಾವಣೆಗೆ ನಿರಾಪೇಕ್ಷಣ ಪತ್ರ ಕೊಡಬೇಕು ಎಂದೂ ಆದೇಶದಲ್ಲಿ ತಿಳಿಸಿದೆ.

ದಾವಾ ವೆಚ್ಚ ₹2 ಸಾವಿರ

ನೋಟಿಸ್‌ ನೀಡದೆ ವಾಹನ ಜಪ್ತಿ ಮಾಡಿ, ವಾಹನ ಮಾಲೀಕರಿಗೆ ತಿಳಿಸದೆ ಮಾರಾಟ ಮಾಡಿದ್ದು ಅನುಚಿತ ವ್ಯಾಪಾರ ಪದ್ಧತಿ ಎಂದು ತೀರ್ಮಾನಿಸಿ ಅಧ್ಯಕ್ಷ ವಿಜಯಕುಮಾರ ಪಾವಲೆ, ಸದಸ್ಯರುಗಳಾದ ರಂಗನಗೌಡ ದಂಡಣ್ಣವರ ಹಾಗೂ ಸಮಿವುನ್ನೀಸಾ ಅಬ್ರಾರ ಅವರಿದ್ದ ನ್ಯಾಯಪೀಠವು ದೂರುದಾರರಿಗೆ ದೂರು ದಾಖಲಿಸಿದ ದಿನದಿಂದ ಶೇ6ರ ಬಡ್ಡಿ ಸಮೇತ ₹50 ಸಾವಿರ ಪರಿಹಾರವನ್ನು 45 ದಿನಗಳಲ್ಲಿ ನೀಡಬೇಕು. ತಪ್ಪಿದಲ್ಲಿ ಶೇ9ರಂತೆ ಬಡ್ಡಿ ಸಮೇತ ಕೊಡಬೇಕು. ಅಲ್ಲೆ ಮಾನಸಿಕ ವ್ಯಥೆಗೆ ₹5 ಸಾವಿರ, ದಾವಾ ವೆಚ್ಚ ₹2 ಸಾವಿರ ನೀಡಬೇಕು ಎಂದು ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT