ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಭೀತಿ: ಊರು ಸ್ತಬ್ಧ, ಸಾಮೂಹಿಕ ಬಣ್ಣದಾಟದಿಂದ ಜನ ದೂರ

Last Updated 10 ಮಾರ್ಚ್ 2020, 10:41 IST
ಅಕ್ಷರ ಗಾತ್ರ

ಬಾಗಲಕೋಟೆ:ಬೆಂಗಾಲಿಗಳ ಬಸಂತ ಉತ್ಸವವನ್ನು ನೆನಪಿಸುವಂತೆ ಪ್ರತಿ ವರ್ಷ ಇಲ್ಲಿನ ಘಟಪ್ರಭಾ ತಟದಲ್ಲಿ ಕಳೆಗಟ್ಟುತ್ತಿದ್ದ ಹೋಳಿಹುಣ್ಣಿಮೆ ಸಂಭ್ರಮ ಈ ಬಾರಿ ಕೋವಿಡ್-19 ಭೀತಿಯ ಪರಿಣಾಮ ರಂಗು ಕಳೆದುಕೊಂಡಿತು.

ಹೋಳಿ ಹುಣ್ಣಿಮೆಯ ಬೆಳಕಲ್ಲಿ ಮೂರು ದಿನಗಳ ಕಾಲ ಬಣ್ಣದಲ್ಲಿ ಮಿಂದೇಳುತ್ತಿದ್ದ ನಗರದ ಜನತೆ ಈ ಬಾರಿ ಮೊದಲ ದಿನವೇ ಸಾಮೂಹಿಕ ಬಣ್ಣದಾಟದಿಂದಣ ದೂರ ಉಳಿದರು.

ಅಲ್ಲೊಂದು, ಇಲ್ಲೊಂದು ಹಲಗೆ ಸದ್ದು ಬಿಟ್ಟರೆ ಇಡೀ ನಗರ ಮೌನ ಹೊದ್ದು ಮಲಗಿದಂತೆ ಗೋಚರಿಸಿತು.

ಹೋಳಿ ಹಬ್ಬಕ್ಕಾಗಿ ಶಾಲೆ-ಕಾಲೇಜುಗಳಿಗೆ ಮೂರು ದಿನ ರಜೆ ಕೊಟ್ಟಿದ್ದರೂ ಮಕ್ಕಳು, ಯುವ ಜನತೆ ಮನೆಬಿಟ್ಟು ಹೊರಗೆ ಬರಲಿಲ್ಲ. ಪರಿಚಿತರಿಗೆ ಬಣ್ಣ ಹಚ್ಚಿ ಸುಮ್ಮನಾದರು. ರಣಬಿಸಿಲು ಹೋಳಿ ಆಚರಿಸುವವರ ಉತ್ಸಾಹ ಕಸಿಯಿತು.

ಇಲ್ಲಿನ ಬಸವೇಶ್ವರ ವೃತ್ತದ ಬಳಿ ಹೋಳಿ ಆಚರಣೆ ಸಮಿತಿಯವರು ಮಳೆ ನೃತ್ಯಕ್ಕೆ ವ್ಯವಸ್ಥೆ ಮಾಡಿದ್ದರೂ, ಪ್ರತಿ ವರ್ಷದಂತೆ ಡಿಜೆ ಅಬ್ಬರದೊಟ್ಟಿಗೆ ಹೆಜ್ಜೆ ಹಾಕಲು ನೂಕುನುಗ್ಗಲು ಕಾಣಸಿಗಲಿಲ್ಲ. ಹೀಗಾಗಿ ಈ ಬಾರಿ ಡಿಜೆ ಸದ್ದು ಅಡಗಿತ್ತು. ಕೃತಕ ಮಳೆ ಹನಿಯಿತಾದರೂ ಮೈ-ಮನ ತೋಯಿಸಿಕೊಳ್ಳುವ ಉತ್ಸಾಹ ಬಣ್ಣ ಆಡುವವರಿಗೆ ಇರಲಿಲ್ಲ.

ಸಾಮೂಹಿಕ ಪಾನಗೋಷ್ಠಿ: ಹೋಳಿಯ ನೆಪದಲ್ಲಿ ಇಡೀ ನಗರದ ವಹಿವಾಟು ಬಂದ್ ಆಗಿದ್ದು, ಅಂಗಡಿ-ಮುಂಗಟ್ಟು, ಮಾರುಕಟ್ಟೆ ಎಲ್ಲಾ ಬಂದ್ ಆಗಿವೆ. ಮೂರು ದಿನ ಮದ್ಯ ಮಾರಾಟಕ್ಕೆ ನಿಷೇಧವಿದ್ದರೂ ಬಾಗಲಕೋಟೆ ಸುತ್ತಲಿನ ಹೊಲ-ತೋಟಗಳು, ಪಾಳು ಕಟ್ಟಡಗಳು, ಕೆರೆ ಅಂಗಳ, ಮೈದಾನಗಳು ಸಾಮೂಹಿಕ ಪಾನಗೋಷ್ಠಿಗಳಿಗೆ ನೆಲೆಯಾಗಿ ಬದಲಾಗಿವೆ.

ತೀರ್ಥ ಕ್ಷೇತ್ರಕ್ಕೆ ಹೊರಟರು: ಪ್ರತಿ ವರ್ಷ ಹೋಳಿ ರಜೆಯಲ್ಲಿ ನಗರದಲ್ಲಿ ಹೆಚ್ಚಿನ ಸಂಖ್ಯೆಯ ಜನ ಗೋವಾ, ಅಂಡಮಾನ್ ದ್ವೀಪ ಸಮೂಹ, ಶ್ರೀಲಂಕಾ, ಥೈಲ್ಯಾಂಡ್, ಹಾಂಕಾಂಗ್, ಮಲೇಶಿಯಾ, ಸಿಂಗಪುರಕ್ಕೆ ಮೋಜು ಮಸ್ತಿಗಾಗಿ ಪ್ರವಾಸ ಹೋಗುತ್ತಿದ್ದರು. ಕೋವಿಡ್-19 ಭೀತಿಯಿಂದ ವಿದೇಶ ಪ್ರವಾಸದ ಎಲ್ಲಾ ಪ್ಯಾಕೇಜ್ ರದ್ದು ಆಗಿವೆ. ಗೋವಾಗೆ ಬೆರಳೆಣಿಕೆಯಷ್ಟು ಜನ ಹೋಗಿದ್ದಾರೆ. ಈ ಬಾರಿ ಹೆಚ್ಚಿನವರು ಮಂತ್ರಾಲಯ, ತಿರುಪತಿ, ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಮುರುಡೇಶ್ವರಕ್ಕೆ ದೇವರ ದರ್ಶನಕ್ಕೆ ಹೋಗಿದ್ದಾರೆ ಎಂದು ಮುಂಬೈನ ಪ್ರತಿಷ್ಠಿತ ಕೇಸರಿ ಟೂರ್ಸ್ ಅಂಡ್ ಟ್ರಾವೆಲ್ಸ್ ನ ಪ್ರಾಂಚೈಸಿ ಹೊಂದಿರುವ ಪ್ರವಾಸಿ ಏಜೆಂಟ್ ಬಾಗಲಕೋಟೆಯ ದೀಪಕ್ ಬೇತಾಲ್ ಹೇಳುತ್ತಾರೆ.

ಹೋಳಿ ಆಚರಣೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT