ಶನಿವಾರ, ಡಿಸೆಂಬರ್ 3, 2022
21 °C

ಕೊರೊನಾ ಪರೀಕ್ಷೆಗೆ ಗ್ರಾಮೀಣರ ಅಂಜಿಕೆ: ಈಗ ’ಮುನ್ನಾಭಾಯಿ‘ಗಳದ್ದೇ ಹವಾ

ವೆಂಕಟೇಶ ಜಿ.ಎಚ್ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ದವಾಖಾನಿಗೆ ಹೋದರೆ ಖಲಾಸೇರಿ. ಅಲ್ಲಿ ಛೊಲೊ ನೋಡೋವಲ್ರು. ಹೊಳ್ಳಿ ಹೆಣಾನು ಬರಾಂಗಿಲ್ಲ. ಕಣ್ಣೆದುರೇ ನಡಕೊಂಡು ದವಾಖಾನಿಗೆ ಹೋದವ ಹೆಣ ಆಗ್ಯಾನ. ಲಕ್ಷಗಟ್ಟಲೇ ರೊಕ್ಕ ಹೋಗಿದ್ದೇ ಖರೆ. ಇಲ್ಲೇ ಮನೀಮುಂದ ನೀರು ಕುಡಿದು ಸಾಯ್ತೇವಿ ಅಂತಾರ ಹೊರತು ಯಾರೂ ದವಾಖಾನಿಗೆ ಹೋಗೋವಲ್ರು.

ಹೀಗೆಂದು ಹುನಗುಂದ ತಾಲ್ಲೂಕು ಕಡಿವಾಳ ಕಲ್ಲಾಪುರ–ಬಸವನಾಳ ರಸ್ತೆಯಲ್ಲಿ ’ಪ್ರಜಾವಾಣಿ‘ಗೆ ಎದುರಾದ ಕುರಿಗಾಹಿ ಹುಲಿಗೆಪ್ಪ, ಸ್ಥಳೀಯರಾದ ಮುದುಕಪ್ಪ ಮೂಗನೂರ ಹೇಳಿದರು.

ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿನ ಪಥ ಅರಸುತ್ತಾ ಹೊರಟ ನಮಗೆ, ಗ್ರಾಮೀಣರಲ್ಲಿ ಆರೋಗ್ಯ ಸೇವೆಯ ಬಗ್ಗೆ ಮೂಡಿರುವ ತಿರಸ್ಕಾರ ಭಾವ ಬಸವನಾಳದ ಹುಲಿಗೆಪ್ಪ ಹಾಗೂ ಸುರಳಿಕಲ್‌ನ ಮುದುಕಪ್ಪ ಅವರ ಮಾತಿನಲ್ಲಿ  ಧ್ವನಿಸಿತು.

ಗಂಜಿಹಾಳದ ಮುಖ್ಯ ರಸ್ತೆಯಲ್ಲಿ ಸಿಕ್ಕ ವೃದ್ಧ, ಈ ವಾರ ನಮ್ಮೂರಾಗ ಐದು ಮಂದಿ ಹೋದ್ರು ಎಂದು ಲೆಕ್ಕ ಒಪ್ಪಿಸಿದರು. ಪಕ್ಕದಲ್ಲಿಯೇ ಬಟ್ಟೆ ಅಂಗಡಿ, ಕಿರಾಣಿ ಅಂಗಡಿಯಲ್ಲಿ ಮುಂಜಾನೆ 10ರ ನಂತರವೂ ವಹಿವಾಟು ಜೋರಾಗಿತ್ತು. ಮಾಸ್ಕ್, ಸುರಕ್ಷಿತ ಅಂತರ ಯಾವುದೂ ಅಲ್ಲಿ ಕಾಣಲಿಲ್ಲ. 

ಗ್ರಾಮ ಪಂಚಾಯ್ತಿ ಕಚೇರಿ ಭಣಗುಡುತ್ತಿತ್ತು. ಅಲ್ಲಿದ್ದ ಸಹಾಯಕಿ ಪಿಡಿಒ ಸಂಪರ್ಕ ಸಂಖ್ಯೆ ಕೊಟ್ಟರು. ‘ಕೆಲಸದ ಮೇಲೆ ಹೊರಗಿದ್ದೇನೆ. ಪಂಚಾಯ್ತಿಗೆ ಬರುವುದಿಲ್ಲ ಎಂದ ಪಿಡಿಒ ಹುಲ್ಲಪ್ಪ ಆವಿನ, ಕೊರೊನಾಗೆ ಇಬ್ಬರು ಮಾತ್ರ ಸತ್ತಿದ್ದಾರೆ. ಉಳಿದವರು ಬೇರೆ ಕಾರಣಕ್ಕಿರಬಹುದು’ ಎಂದರು.

‘ಊರಿನವರು ಸಹಕರಿಸುತ್ತಿಲ್ಲ..’

ಕಂದಗಲ್, 13 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಊರು. ಸುತ್ತಲಿನ 18 ಹಳ್ಳಿಗಳಿಗೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವೇ ದಿಕ್ಕು. ಬಿಎಎಂಎಸ್ ವೈದ್ಯ ಡಾ.ಎಸ್.ಎಸ್.ಬಿಂಜವಾಡಗಿ ಅವರೇ ಚಿಕಿತ್ಸೆಯ ನೇತೃತ್ವ ವಹಿಸಿದ್ದಾರೆ. ಅಲ್ಲಿದ್ದ ಹಿರಿಯ ನರ್ಸ್, ‘ಊರವರಿಂದ ಸಹಕಾರ ಸಿಗುತ್ತಿಲ್ರಿ’  ಎಂದರು.

‘ಕೊರೊನಾ ಟೆಸ್ಟ್ ಮಾಡಿಸಲು ಊರವರನ್ನು ಕರೆಯಲು ಹೋದರೆ ಆಶಾ ಕಾರ್ಯಕರ್ತೆಯರಿಗೆ ಬೈದು ಕಳುಹಿಸುತ್ತಿದ್ದಾರೆ. ಹೊರಗಿನಿಂದ ಊರಿಗೆ ಬಂದವರೂ ದಬಾಯಿಸುತ್ತಾರೆ‘ ಎಂದು ಅಲವತ್ತುಕೊಂಡರು.

‘ನಿಮಗ ಪಗಾರ ಕೊಡ್ತಾರ, ನೀವು ಬರ್ತೀರಿ. ಊರಾಗೆಲ್ಲ ಅಡ್ಡಾಡಿ ನಮಗೂ ಕೊರೊನಾ ಹಚ್ಚುತೀರಿ. ನೀವು ಮನೆಗೆ ಬರಬೇಡಿ ಎಂದು ಅವಾಚ್ಯ ಪದಗಳಿಂದ ನಿಂದಿಸುತ್ತಾರೆ’ ಎಂದು ನರ್ಸ್ ಪಕ್ಕದಲ್ಲಿಯೇ ನಿಂತಿದ್ದ ಆಶಾ ಕಾರ್ಯಕರ್ತೆ ಶಿವನಮ್ಮ ಛಬ್ಬಿ ದನಿಗೂಡಿಸಿದರು.

ಊರಿನಲ್ಲಿ ಈಗ ಕೊರೊನಾ ನಿಯಂತ್ರಣದಲ್ಲಿದೆ ಎಂದು ಹೇಳಿದ ವೈದ್ಯ ಡಾ.ಬಿಂಜವಾಡಗಿ, ‘ಈವರೆಗೆ ಆಸ್ಪತ್ರೆಯಿಂದ ಮಾಡಿರುವ ಕೊರೊನಾ ಪರೀಕ್ಷೆಯ (ಆರ್‌ಟಿಪಿಸಿಆರ್) ಸಂಖ್ಯೆಯ ನಿಖರ ಮಾಹಿತಿ ಇಲ್ಲ. ಕೊರೊನಾ ಪರೀಕ್ಷೆಗೆ ತೆರಳಿರುವ ಸಿಬ್ಬಂದಿ ದಾಖಲೆ ಪುಸ್ತಕ ಒಯ್ದಿದ್ದಾರೆ’ ಎಂದರು.

‘ಆಯುರ್ವೇದ ವೈದ್ಯರು ಅಲೋಪಥಿ ಔಷಧಿ ನೀಡುತ್ತಿದ್ದಾರೆ, ಚಿಕಿತ್ಸೆಯ ಬಗ್ಗೆ ನಂಬಿಕೆ ಹೇಗೆ ಬರಬೇಕು‘ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಚಂದ್ರಶೇಖರಯ್ಯ ಪೂಜಾರಿ ಪ್ರಶ್ನಿಸಿದರು.

ಕಂದಗಲ್‌ನಿಂದ ಇಳಕಲ್‌ಗೆ ತೆರಳುವ ಹಾದಿಯಲ್ಲಿ ಹಿರೇಕೊಡಗಲಿ ಗ್ರಾಮದ ಆಸ್ಪತ್ರೆ ಕಟ್ಟಡಕ್ಕೆ ಬೀಗ ಹಾಕಲಾಗಿತ್ತು. ‘ಇಲ್ಲಿ ಐದಾರು ವರ್ಷವಾಯಿತು ವೈದ್ಯರೇ ಇಲ್ಲ. ಇಲ್ಲಿದ್ದ ನರ್ಸ್ ಎರಡು ತಿಂಗಳ ಹಿಂದೆ ಹುಬ್ಬಳ್ಳಿಗೆ ವರ್ಗಾವಣೆಯಾಗಿದ್ದಾರೆ. ಸದ್ಯ ಆಶಾ ಕಾರ್ಯಕರ್ತೆಯರೇ ಮೇಲುಸ್ತುವಾರಿ ವಹಿಸಿದ್ದಾರೆ’ ಎಂದು ಪಂಚಾಯ್ತಿ ಬಿಲ್ ಕಲೆಕ್ಟರ್ ಹುಲಿಗೆಪ್ಪ ಹೇಳಿದರು. 

ಹಿರೇಕೊಡಗಲಿ ಶಾಶ್ವತ ಮಲೇರಿಯಾ ಬಾಧಿತ ಪ್ರದೇಶ. ಆದರೆ ಅಲ್ಲಿನ ಆಸ್ಪತ್ರೆಗೆ ಬೀಗ ಜಡಿಯಲಾಗಿತ್ತು. ‘ಚಿಕಿತ್ಸೆಗೆ ಪಕ್ಕದ ಗುಡೂರಿನ ಆರ್‌ಎಂಪಿ ವೈದ್ಯರ ಬಳಿ ಹೋಗುತ್ತೇವೆ’ ಎಂದು ಹಿರಿಯರಾದ ಸಂಗಯ್ಯ ವಿರಕ್ತಮಠ ಹೇಳಿದರು.

ಹುನಗುಂದ ತಾಲ್ಲೂಕಿನ ಬಿಸಿಲದಿನ್ನಿಯಲ್ಲಿ ಇರುವ ಉಪ ಆರೋಗ್ಯ ಕೇಂದ್ರ ಕಟ್ಟಡದಲ್ಲಿ ಮುಳ್ಳು–ಕಂಟಿ ಬೆಳೆದಿವೆ. ’ಆಸ್ಪತ್ರೆ ಕಟ್ಟಿ 15 ವರ್ಷಗಳಾಗಿವೆ. ಆರಂಭದಲ್ಲಿ ಮೂರು ವರ್ಷ ವೈದ್ಯರು ಬರುತ್ತಿದ್ದರು. ಕೂಡಲಸಂಗಮದಿಂದ ವಾರಕ್ಕೆರಡು ಬಾರಿ ಕಿರಿಯ ಆರೋಗ್ಯ ಸಹಾಯಕಿ ಬರುತ್ತಿದ್ದರು. ಎರಡು ವರ್ಷಗಳಿಂದ ಅವರೂ ಬರುತ್ತಿಲ್ಲ‘ ಎಂದು ವಳಕಲದಿನ್ನಿ ಗ್ರಾಮದ ಮಂಗಳಪ್ಪ ಬಡಬಟ್ಟಿ ಹೇಳಿದರು.

ಕೂಡಲಸಂಗಮ ಅಂತರಾರಾಷ್ಟ್ರೀಯ ಪ್ರವಾಸಿ ಕೇಂದ್ರ ಹಾಗೂ ನಾರಾಯಣಪುರ ಜಲಾಶಯದ ಹಿನ್ನೀರಿನ ಮುಳುಗಡೆ ಪ್ರದೇಶ.  ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 2011ರಲ್ಲಿ ಸರ್ಕಾರ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿದೆ. ನಿಯಮಾವಳಿಯಂತೆ ಆರು ಮಂದಿ ತಜ್ಞ ವೈದ್ಯರು ಇರಬೇಕು. ಒಬ್ಬ ತಜ್ಞ ವೈದ್ಯನೂ ನೇಮಕವಾಗಿಲ್ಲ. ಬಿಎಎಂಎಸ್ ವೈದ್ಯೆಯನ್ನು ನಿಯೋಜಿಸಲಾಗಿದೆ.

ಹುನಗುಂದ ಹಾಗೂ ಇಳಕಲ್ ತಾಲ್ಲೂಕುಗಳಲ್ಲಿ ಒಟ್ಟು 59 ಉಪ ಆರೋಗ್ಯ ಕೇಂದ್ರ, 13 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎರಡು ಸಮುದಾಯ ಆರೋಗ್ಯ ಕೇಂದ್ರಗಳಿವೆ. ಎರಡು ಕಡೆ ಮಾತ್ರ ಎಂಬಿಬಿಎಸ್ ಮುಗಿಸಿರುವ ವೈದ್ಯರಿದ್ದಾರೆ.

‘ಮುನ್ನಾಭಾಯಿ’ಗಳದ್ದೇ ಹಾವಳಿ

ಕೊರೊನಾ ದುರಿತ ಕಾಲದಲ್ಲಿ ಜಿಲ್ಲೆಯಲ್ಲಿ ಗ್ರಾಮೀಣರಿಗೆ ನಕಲಿ ವೈದ್ಯರೇ ಆಸರೆ. ಇಳಕಲ್ ತಾಲ್ಲೂಕಿನ ಗಡಿಭಾಗದ ಇಸ್ಲಾಂಪುರ, ಅಮರವಾಡಗಿ, ಚಿನ್ನಾಪುರ ಗ್ರಾಮಸ್ಥರು ಚಿಕಿತ್ಸೆಗೆ ಪಕ್ಕದ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಲಕವಾಡಗಿಗೆ ಹೋಗುತ್ತಾರೆ. ರಾಯಚೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಆರು ವರ್ಷ ಕೆಲಸ ಮಾಡಿರುವ ಬಿಎ ಪದವೀಧರ ಕ್ಲಿನಿಕ್ ತೆರೆದಿದ್ದಾರೆ!

‘ಜ್ವರ, ಶೀತ ಇದ್ದರೆ ವೈದ್ಯ ಪ್ಯಾರಾಸಿಟಮಾಲ್, ಆಂಟಿಬಯಾಟಿಕ್ ಹಾಗೂ ವಿಟಮಿನ್ ಮಾತ್ರೆ  ನೀಡುತ್ತಾರೆ. ಅಗತ್ಯವಿದ್ದರೆ ಸಲೈನ್ ಹಚ್ಚುತ್ತಾರೆ. ಪರಿಸ್ಥಿತಿ ಗಂಭೀರವಾದರೆ ಬಾಗಲಕೋಟೆಗೆ ಕರೆದೊಯ್ಯಲು ಹೇಳುತ್ತಾರೆ. ಒಬ್ಬರಿಗೆ ದಿನಕ್ಕೆ ₹1000ದಿಂದ 1500ರವರೆಗೆ ಬಿಲ್ ಮಾಡುತ್ತಾರೆ’  ಎಂದು ಇಸ್ಲಾಂಪುರದ ಜಬೀರ್ ಹೇಳುತ್ತಾರೆ. 

ಬಾಗಲಕೋಟೆ ತಾಲ್ಲೂಕಿನ ಫಾರ್ಮಾಸಿಸ್ಟ್ ಒಬ್ಬರು ಕೂಡಲಸಂಗಮ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ವೈದ್ಯರಾಗಿ ಮನೆಗೆ ಬಂದು ಚಿಕಿತ್ಸೆ ಕೊಡುತ್ತಾರೆ. ಹೆಚ್ಚಿನವರು ಈ ನಕಲಿಗಳ ಬಗ್ಗೆ ಮೆಚ್ಚುಗೆ ಮಾತನ್ನೇ ಆಡುತ್ತಾರೆ.

***

ನಮ್ಮದು ಉಪವಿಭಾಗಾಧಿಕಾರಿ ಗ್ರೇಡ್ ಹುದ್ದೆ. ಆದರೆ ಹಳ್ಳಿಗಳಲ್ಲಿ ಯಾರೋ ರಾಜಕೀಯ ಪುಡಾರಿ ಬಂದು ‘ಡಾಕ್ಟರ್ ಎಲ್ಲಿದ್ದಾನೆ ಅವಾ, ಕರೀಲೆ ಅವನ್ನ‘ ಎಂದು ಏಕವಚನದಲ್ಲಿ  ಮಾತಾಡುತ್ತಾನೆ. ಗೌರವ ಇಲ್ಲದ ಕಡೆ ಕೆಲಸ ಮಾಡಲು ಬಹುತೇಕ ವೈದ್ಯರು ಬಯಸೊಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಎಂಬಿಬಿಎಸ್ ವೈದ್ಯರ ಕೊರತೆ ಬಗ್ಗೆ ತಾಲ್ಲೂಕು ವೈದ್ಯಾಧಿಕಾರಿಯೊಬ್ಬರ ಅಭಿಮತ 

***

ಊರಾಗ ಇದ್ದ ಆಸ್ಪತ್ರೆನ ಯಾರೂ ದಾದ್ (ಕಾಳಜಿ) ಮಾಡ್ಲಿಲ್ರಿ. ಹಿಂಗಾಗಿ ಹಾಳು ಬಿದ್ದಾದ. ಈಗ ಜಡ್ಡು ಬಂದರೆ ಕೂಡಲಸಂಗಮ ಇಲ್ಲವೇ ಬಾಗಲಕೋಟೆಗೆ ಹೋಗಬೇಕ್ರಿ.

-ಮಂಗಳಪ್ಪ ಬಡಬಟ್ಟಿ, ವಳಕಲದಿನ್ನಿ ಗ್ರಾಮಸ್ಥ

***

ಜಿಲ್ಲೆಯಲ್ಲಿ ಒಟ್ಟು 224 ಉಪ ಆರೋಗ್ಯ ಕೇಂದ್ರಗಳು

48 ಪ್ರಾಥಮಿಕ ಆರೋಗ್ಯ ಕೇಂದ್ರ

08 ಸಮುದಾಯ ಆರೋಗ್ಯ ಕೇಂದ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು