ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: 15 ನೌಕರರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು

ಕೋವಿಡ್–19 ಆಸ್ಪತ್ರೆಯಲ್ಲಿ ಕೆಲಸ ಮಾಡಲು ನಿರಾಕರಿಸಿದ ಆರೋಪ
Last Updated 5 ಮೇ 2020, 2:30 IST
ಅಕ್ಷರ ಗಾತ್ರ

ಬಾಗಲಕೋಟೆ: ಕೋವಿಡ್–19 ತುರ್ತು ಸಂದರ್ಭದಲ್ಲಿ ಕೆಲಸ ಮಾಡಲು ನಿರಾಕರಿಸಿದ ಹಾಗೂ ಅನಧಿಕೃತವಾಗಿ ಗೈರು ಹಾಜರಾದ ಇಲ್ಲಿನ ಜಿಲ್ಲಾ ಆಸ್ಪತ್ರೆಯ 15 ಮಂದಿ ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೋಮವಾರ ಜಿಲ್ಲಾ ಶಸ್ತ್ರಚಿಕಿತ್ಸಕರು ಶಿಫಾರಸು ಮಾಡಿದ್ದಾರೆ.

ಇವರಲ್ಲಿ ಮೂವರು ಶುಶ್ರೂಷಕರು, ಆರು ಮಂದಿ ಡಿ ಗ್ರೂಪ್ ನೌಕರರು ಹಾಗೂ ಆರು ಮಂದಿ ನಾನ್‌ಕ್ಲಿನಿಕಲ್ ಸಿಬ್ಬಂದಿ ಸೇರಿದ್ದಾರೆ. ಎಲ್ಲರಿಗೂ ನಿಯಮಾವಳಿ ಅನ್ವಯ ಆಸ್ಪತ್ರೆಯಿಂದ ತಲಾ ಮೂರು ಬಾರಿ ನೋಟಿಸ್ ನೀಡಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿಯೂ ಒಮ್ಮೆ ನೋಟಿಸ್ ನೀಡಿದ್ದಾರೆ. ಅದಕ್ಕೂ ಸ್ಪಂದಿಸದ ಕಾರಣ ಅಂತಿಮವಾಗಿ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ’ಪ್ರಜಾವಾಣಿ’ಗೆ ತಿಳಿಸಿದರು.

ಕರೆ ಸ್ವೀಕರಿಸುತ್ತಿಲ್ಲ: ಆಸ್ಪತ್ರೆ ಕೆಲಸಕ್ಕೆ ಗೈರು ಹಾಜರಾದ ಬಹುತೇಕರು ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಕರೆ ಸ್ವೀಕರಿಸಿದರೂ ನಮ್ಮ ಮನೆಯವರು ವಯಸ್ಸಾದವರು, ಮಕ್ಕಳು ಇದ್ದಾರೆ ಹೀಗಾಗಿ ಬರಲು ಆಗುವುದಿಲ್ಲ ಎನ್ನುತ್ತಾರೆ. ಆಸ್ಪತ್ರೆಗೆ ಬರಲು ನಮ್ಮೂರಿನ ಜನ ಬಿಡುತ್ತಿಲ್ಲ, ಮನೆಯಲ್ಲಿ ಗರ್ಭಿಣಿ, ಬಾಣಂತಿಯರು ಇದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.

ಮನೆಯಲ್ಲಿ ಒಂದು ವರ್ಷಕ್ಕಿಂತ ಕೆಳಗಿನ ಮಕ್ಕಳಿದ್ದರೆ, ಸಿಬ್ಬಂದಿ ಯಾರಾದರೂ ಗರ್ಭಿಣಿಯರು ಇದ್ದರೆ ಇಲ್ಲವೇ ಮನೆಯಲ್ಲಿ ಹಿರಿಯರು ಇದ್ದರೆ ಅವರನ್ನು ಕೋವಿಡ್–19 ಕರ್ತವ್ಯಕ್ಕೆ ನಿಯೋಜಿಸುವುದಿಲ್ಲ. ಬದಲಿಗೆ ಬೇರೆ ಸಾಮಾನ್ಯ ಕೆಲಸಕ್ಕೆ ಹಾಕುವುದಾಗಿ ಹೇಳಿದ್ದೇವೆ. ಆದರೂ ಅವರು ಸ್ಪಂದಿಸುತ್ತಿಲ್ಲ. ಹೀಗಾಗಿ ಶಿಸ್ತು ಕ್ರಮ ಅನಿವಾರ್ಯ ಎಂದು ಡಾ.ಬಿರಾದಾರ ಹೇಳುತ್ತಾರೆ.

ವೈದ್ಯರಿಂದ ಉತ್ತಮ ಸ್ಪಂದನೆ

ಕೋವಿಡ್–19 ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲಾ ಆಸ್ಪತ್ರೆಯ ಎಲ್ಲ ವೈದ್ಯರೂ ಉತ್ತಮವಾಗಿ ಸ್ಪಂದಿಸಿದ್ದಾರೆ. ಯಾರೂ ಕೆಲಸಕ್ಕೆ ಗೈರು ಹಾಜರಾಗಿಲ್ಲ. ಉಳಿದ ಸಿಬ್ಬಂದಿಯೂ ನೆರವಾಗಿದ್ದಾರೆ ಎಂದು ಬಿರಾದಾರ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT