ಚಾಲುಕ್ಯ ಉತ್ಸವ: ನಾಟಕ ಪ್ರದರ್ಶನ ರದ್ದು
ಬಾದಾಮಿ:ಸಾಂಸ್ಕೃತಿಕ ಪರಂಪರೆ ಅನಾವರಣಚಾಲುಕ್ಯ ಉತ್ಸವದ ಅಂಗವಾಗಿ ಬನಶಂಕರಿದೇವಿ ಜಾತ್ರೆಯಲ್ಲಿ ನಾಟಕಗಳ ಪ್ರದರ್ಶನ ರದ್ದಾಗಿದ್ದವು. ವಾಹನ ಸಂಚಾರಗಳ ನಿಷೇಧದಿಂದ ಜಾತ್ರೆಗೆ ಬಂದ ಯಾತ್ರಿಕರು ಬನಶಂಕರಿಯಿಂದ ಬಾದಾಮಿಗೆ ನಡೆದು ಬಂದರು. ಬನಶಂಕರಿ ದೇವಾಲಯಕ್ಕೆ ತೆರಳುವ ಗದಗ ರಸ್ತೆಯ ಎಪಿಎಂಸಿ ಆವರಣದಲ್ಲಿ ಚಾಲುಕ್ಯ ಉತ್ಸವದ ವೇದಿಕೆ ಇರುವುದರಿಂದ ಜನರಿಗೆ ಸಂಚಾರ ವ್ಯವಸ್ಥೆ ಮಾಡಲು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವ ಹಿನ್ನಲೆಯಲ್ಲಿ ಜ.19 ರಂದು ಮಧ್ಯಾಹ್ನ 2 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗೂ ಜಿಲ್ಲಾ ಆಡಳಿತ ವಾಹನ ಸಂಚಾರವನ್ನು ನಿಷೇಧಿಸಿತ್ತು.
ಬೆಳಿಗ್ಗೆ ಬನಶಂಕರಿ ಬನಶಂಕರಿದೇವಿ ಜಾತ್ರೆಗೆ ಹೋದ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ವಾಹನ ಸಂಚಾರ ಇಲ್ಲದ್ದರಿಂದ ನಡೆದು ಬಂದರು. ಜಾತ್ರೆಯಲ್ಲಿ ಮಧ್ಯಾಹ್ನ 3 ರಿಂದ ಮತ್ತು ಸಂಜೆ 6 ಗಂಟೆಯಿಂದ ಆರಂಭವಾಗುವ ಎರಡು ನಾಟಕ ಪ್ರದರ್ಶನಗಳನ್ನು ಸಹ ಬಂದ್ ಮಾಡಲಾಗಿತ್ತು. ಜಾತ್ರಗೆ ಬಂದ ಭಕ್ತರಿಗೆ ನಿರಾಶೆಯಾಯಿತು.
ನಾಟಕ ಪ್ರದರ್ಶನ ಬಂದಾಗಿದ್ದರಿಂದ ನಮಗೆ ಲಕ್ಷಾಂತರ ರೂಪಾಯಿ ಬರುವ ಆದಾಯ ಹಾನಿಯಾಗಿದೆ ಎಂದು ನಾಟಕ ಕಂಪನಿಯ ಮಾಲೀಕರು ಮತ್ತು ಕಲಾವಿದರು ಬೇಸರ ವ್ಯಕ್ತಪಡಿಸಿದರು.
‘ಹಳ್ಳಿಗಳಿಂದ ಬನಶಂಕರಿದೇವಿ ಜ್ಯಾತ್ರಿಗಿ ಬಂದಿದ್ದಿವಿ ನಾಟಕ ಪ್ರದರ್ಶನ ಇಲ್ಲಂದ್ರು ನಡಕೋಂತ ತಿರಿಗಿ ಬಂದಿವಿ ಜಾತ್ರಿ ವ್ಯಾಳೇದಾಗ ಉತ್ಸವ ಇಡಬಾರದು ’ ವಿಜಯಪುರ ಜಿಲ್ಲೆಯ ಮುತ್ತಗಿ ಗ್ರಾಮದ ಬಸವಂತಪ್ಪ ಹೇಳಿದರು. ವೀರಪುಲಿಕೇಶಿ ವೃತ್ತದಲ್ಲಿ ಎರಡು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿ ವಾಹನ ಚಾಲಕರು ಪರದಾಡಿದರು.