ಶನಿವಾರ, ಸೆಪ್ಟೆಂಬರ್ 24, 2022
21 °C
ಜಿಲ್ಲೆ ರಚನೆಯ ಬೆಳ್ಳಿ ಸಂಭ್ರಮ: ಕೈಗಾರಿಕೆ, ನೀರಾವರಿ, ಸಂತ್ರಸ್ತರ ಪುನರ್‌ ವಸತಿ, ಪ್ರವಾಸೋದ್ಯಮಕ್ಕೆ ಸಿಗಬೇಕಿದೆ ಒತ್ತು

ಬಾಗಲಕೋಟೆ: ದೂರದೃಷ್ಟಿಯಿಲ್ಲದಿದ್ದರೆ ಅಭಿವೃದ್ಧಿ ಕಷ್ಟ ಕಷ್ಟ...

ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಜಿಲ್ಲೆ ರಚನೆಯಾಗಿ 25 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಕೈಗಾರಿಕೆ, ನೀರಾವರಿ, ಕ್ರೀಡೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದೆ. ಆದರೆ, ಅದಕ್ಕೆ ಇನ್ನಷ್ಟು ವೇಗ ನೀಡುವ ಕೆಲಸ ಆಗಬೇಕಿದೆ. ಸುದೀರ್ಘ ಅವಧಿಯ ಮುನ್ನೋಟ ಇಟ್ಟುಕೊಂಡು ಯೋಜನೆಗಳನ್ನು ರೂಪಿಸದಿದ್ದರೆ, ಅಭಿವೃದ್ಧಿಯ ಹಾದಿ ಕಷ್ಟಕರವಾಗಿರಲಿದೆ.

ರಾಜ್ಯದಲ್ಲಿರುವ ಹಲವಾರು ಜಲಾಶಯಗಳು ಭರ್ತಿಯಾಗುವುದಿಲ್ಲ. ಆಲಮಟ್ಟಿ ಜಲಾಶಯ ಭರ್ತಿಯಾಗುತ್ತಲೇ ಇರುತ್ತದೆ. ಸಾಕಷ್ಟು ನೀರಿದೆ. ಹಲವಾರು ಏತ ನೀರಾವರಿಗಳ ಮೂಲಕ ನೀರುದೊಗಿಸುವ ಕೆಲಸ ನಡೆದಿದೆ. ಆದರೆ, ಯೋಜನೆ ಆರಂಭಗೊಂಡು ನಾಲ್ಕು ದಶಕಗಳು ಕಳೆದರೂ ಪೂರ್ಣಗೊಂಡಿಲ್ಲ. ಜಮೀನುಗಳಿಗೆ ನೀರು ತಲುಪಿಸುವ ಕೆಲಸ ಆಗಿಲ್ಲ. ಕಾಲಮಿತಿಯಲ್ಲಿ ಜಾರಿಯಾಗಬೇಕು.

ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಪಟ್ಟದಕಲ್ಲು ಸೇರಿದಂತೆ ಹಲವಾರು ಪ್ರವಾಸಿ ತಾಣಗಳು ಜಿಲ್ಲೆಯಲ್ಲಿವೆ. ಆ ತಾಣಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿ, ವಹಿವಾಟು ವೃದ್ಧಿ, ಉದ್ಯೋಗ ಕೇಂದ್ರಗಳನ್ನಾಗಿ ಪರಿವರ್ತಿಸುವ ಕೆಲಸ ಆಗಬೇಕು. ಆಲಮಟ್ಟಿ, ನಾರಾಯಣಪುರ ಜಲಾಶಯದ ಹಿನ್ನೀರು ಜಿಲ್ಲೆಯ ಹರಡಿಕೊಂಡಿದೆ. ಹಿನ್ನೀರನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳುವ ಚಿಂತನೆ ಆಗಬೇಕಿದೆ. 

ಇಳಕಲ್‌ ಗ್ರಾನೈಟ್‌, ಲೈಮ್ ಸ್ಟೋನ್‌, ಕಬ್ಬಿಣದ ಅದಿರು, ಮರಳು ಸೇರಿದಂತೆ ಹಲವು ನೈಸರ್ಗಿಕ ಸಂಪನ್ಮೂಲಗಳು ಲಭ್ಯವಿವೆ. ₹100 ಕೋಟಿಗೂ ಹೆಚ್ಚು ಶುಲ್ಕ ರೂಪದಲ್ಲಿ ಸಂಗ್ರಹವಾಗುತ್ತಿದೆ. ಇಲ್ಲಿ ನಡೆಯುವ ಅಕ್ರಮ ಗಣಿಗಾರಿಕೆ ತಡೆದು, ಸಂಪನ್ಮೂಲದ ಸಮರ್ಪಕ ಬಳಕೆ ಮಾಡಿಕೊಳ್ಳಬೇಕಿದೆ.

ಇಳಕಲ್‌ ಸೀರೆ, ಗುಳೇದಗುಡ್ಡ ಖಣದಿಂದಾಗಿ ಜಿಲ್ಲೆ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದೆ. ಇಳಕಲ್‌, ಗುಳೇದಗುಡ್ಡ ರಬಕವಿ–ಬನಹಟ್ಟಿ ಸೇರಿದಂತೆ ವಿವಿಧೆಡೆ ಇರುವ ನೇಕಾರರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಜಿ.ಎಸ್‌.ಟಿ. ರದ್ದು, ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಣೆ, ಕಟ್ಟಡ ಕಾರ್ಮಿಕರ ಸೌಲಭ್ಯಗಳನ್ನು ನೇಕಾರರಿಗೂ ಅನ್ವಯಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಆ ಕಡೆ ಸರ್ಕಾರ ಗಮನ ಹರಿಸಬೆಕಿದೆ. ಜಿಲ್ಲೆಯ ತುಳಸಿಗೇರಿ, ಬೇಲೂರಿನಲ್ಲಿ ರಾಷ್ಟ್ರಧ್ವಜದ ಬಟ್ಟೆ ಸಿದ್ಧಪಡಿಸಲಾಗುತ್ತದೆ. ಬಟ್ಟೆ ನೇಯುವವರು ಸಂಕಷ್ಟದಲ್ಲಿದ್ದರೆ, ಖಾದಿ ಕೇಂದ್ರದ ಕಟ್ಟಡಗಳು ಶಿಥಿಲಗೊಂಡಿವೆ. ಬೀಳುವ ಹಂತದಲ್ಲಿರುವ ಕಟ್ಟಡಗಳಿಗೆ ಕಾಯಕಲ್ಪ ನೀಡುವ ಕೆಲಸ ಆಗಬೇಕಿದೆ.

ಜಿ.ಎಸ್‌.ಟಿ. ಜಾರಿಯ ನಂತರ ಮಹಾಲಿಂಗಪುರದ ಬೆಲ್ಲದ ವಹಿವಾಟು ಕುಸಿದಿದ್ದು, ಕಬ್ಬು ಬೆಳೆಗಾರರಿಗೆ ಕಹಿಯಾಗುತ್ತಿದೆ. ಕಬ್ಬು ಬೆಳೆಗಾರರು ಬೆಲ್ಲದಿಂದ ಸಕ್ಕರೆ ಕಾರ್ಖಾನೆಗಳತ್ತ ಮುಖ ಮಾಡಿದ್ದಾರೆ. ಬೆಲ್ಲದ ಸಿಹಿ ಹೆಚ್ಚಿಸುವ ಕೆಲಸ ಮಾಡಬೇಕಿದೆ. ರೋಗಗಳ ಹಾವಳಿಯಿಂದಾಗಿ ದಾಳಿಂಬೆ ಬೆಳೆಗಾರರೂ ಸಂಕಷ್ಟ ಸಿಲುಕಿದ್ದಾರೆ. ಹಲವಾರು ರೈತರು ದಾಳಿಂಬೆ ಕಿತ್ತು ಹಾಕಿ, ಕಬ್ಬಿನ ಮೊರೆ ಹೋಗುತ್ತಿದ್ದಾರೆ. ಅವರನ್ನೂ ರಕ್ಷಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕಿದೆ.

ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಸಂಪರ್ಕ ವ್ಯವಸ್ಥೆಯೂ ಬಹಳ ಮುಖ್ಯ. ರಸ್ತೆ, ರೈಲ್ವೆ ಸಂಪರ್ಕವಿದೆ. ರೈಲ್ವೆ ಸಂಪರ್ಕ ಜಾಲದ ವಿಸ್ತರಣೆಯಾಗಬೇಕಿದೆ. ವಿಮಾನ ನಿಲ್ದಾಣಕ್ಕಾಗಿ ಈಗಷ್ಟೇ ಜಾಗ ನಿಗದಿ ಪಡಿಸಿರುವ ಮಾತುಗಳು ಕೇಳಿ ಬರುತ್ತಿವೆ. ನಿಲ್ದಾಣ ನಿರ್ಮಾಣ ಕಾರ್ಯ ವೇಗಪಡೆದುಕೊಳ್ಳಬೇಕಿದೆ.

ಜೆ.ಎಚ್‌. ‍ಪಟೇಲರ ಸ್ಮರಿಸಲಿ
ಬಾಗಲಕೋಟೆ ಜಿಲ್ಲಾ ರಚನೆಗಾಗಿ 12 ವರ್ಷಗಳ ಹೋರಾಟದ ನಂತರ ಅಂದು ಮುಖ್ಯಮಂತ್ರಿಯಾಗಿದ್ದ ಜೆ.ಎಚ್‌. ಪಟೇಲ್‌ ಅವರು ಜಿಲ್ಲೆ ಘೋಷಣೆ ಮಾಡಿದರು. ಕೂಡಲಸಂಗಮ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಹೆಸರನ್ನು ಜಿಲ್ಲಾ ಕ್ರೀಡಾಂಗಣ ಸೇರಿದಂತೆ ಯಾವುದಾದರೂ ಒಂದು ಪ್ರಮುಖ ಸ್ಥಳಕ್ಕೆ ಅವರ ಹೆಸರಿಡುವ ಮೂಲಕ ಸ್ಮರಿಸುವ ಕೆಲಸ ಆಗಬೇಕು.

ಜಿಲ್ಲಾ ರಚನೆಗಾಗಿ ಪ್ರತಿಭಟನೆ, ಬಂದ್‌ ಸೇರಿದಂತೆ ಹಲವು ರೀತಿಯ ಹೋರಾಟಗಳನ್ನು ಮಾಡಲಾಯಿತು. 1985ರಲ್ಲಿ ಆರಂಭವಾದ ಹೋರಾಟಕ್ಕೆ 1997ರಲ್ಲಿ ಫಲ ಸಿಕ್ಕಿತು. ಜಿಲ್ಲಾ ರಚನೆಯಿಂದ ವಿವಿಧ ಇಲಾಖೆ ಕಚೇರಿಗಳು ಬಂದಿವೆ. ಜನರ ಕೆಲಸಕ್ಕೆ ಅಲೆದಾಡುವುದು ತಪ್ಪಿದೆ. ಕೃಷ್ಣಾ ಮೇಲ್ಡಂಡೆ ಯೋಜನೆ ಸಂತ್ರಸ್ತರಿಗೆ ಪುನರ್‌ ವಸತಿ ಕಲ್ಪಿಸುವ ಕೆಲಸ ಆಗುತ್ತಿದೆ. ಅದು ಇನ್ನಷ್ಟು ತೀವ್ರಗೊಳ್ಳಬೇಕು. ಶಿಕ್ಷಣ, ಉದ್ಯೋಗವಕಾಶ, ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಬೇಕು.
– ಪ್ರಕಾಶ ತಪಶೆಟ್ಟಿ, ಅಧ್ಯಕ್ಷ, ಬಸವೇಶ್ವರ ಸಹಕಾರಿ ಬ್ಯಾಂಕ್‌, (ಬಾಗಲಕೋಟೆ ಜಿಲ್ಲಾ ನಿಯೋಜಿತ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು)

*

ವೈಜ್ಞಾನಿಕ ಬೆಲೆ ನಿಗದಿ ಮಾಡಿ
ನೇಕಾರರಿಗೆ ಕಟ್ಟಡ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ನೇಕಾರರಿಗೂ ಸಿಗಬೇಕು. ಉದ್ಯೋಗ ಭದ್ರತೆ ಒದಗಿಸಬೇಕು. ನೂಲು, ರೇಷ್ಮೆ ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ ಆಗಿದೆ. ಆದರೆ, ಅದಕ್ಕೆ ತಕ್ಕಂತೆ ಸೀರೆಗಳ ಬೆಲೆ ಹೆಚ್ಚಳವಾಗಿಲ್ಲ. ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ನೇರ ಮಾರುಕಟ್ಟೆ ಒದಗಿಸುವ ಸೌಲಭ್ಯ ಆಗಬೇಕು. ಕಚ್ಚಾ ವಸ್ತುಗಳ ಮೇಲೆ ಶೇ5, 12, 18ರಷ್ಟು ಜಿ.ಎಸ್‌.ಟಿ. ವಿಧಿಸಲಾಗುತ್ತದೆ. ಆದರೆ, ನಾವು ಮಾರಾಟ ಮಾಡುವ ಬಟ್ಟೆಯ ಮೇಲೆ ಶೇ5ರಷ್ಟು ಮಾತ್ರ ಇದೆ. ಜಿ.ಎಸ್‌.ಟಿ. ಮುಕ್ತಗೊಳಿಸಬೇಕು. ಕೋವಿಡ್‌ ನಂತರ 36 ಮಂದಿ ನೇಕಾರರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಅವರಿಗೆ ₹10 ಲಕ್ಷ ಪರಿಹಾರ ನೀಡಬೇಕು. ವಿದ್ಯುತ್‌ ಉಚಿತವಾಗಿ ನೀಡಬೇಕು. ₹10 ಲಕ್ಷ ಶೇ1, ₹20 ಲಕ್ಷ ಶೇ2ರ ಬಡ್ಡಿ ದರದಲ್ಲಿ ಬಂಡವಾಳ ಸಾಲ ನೀಡಬೇಕು
–ಶಿವಲಿಂಗ ಟಿರಕಿ, ಅಧ್ಯಕ್ಷ, ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ

*
ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ
ಎರಡು ದಶಕಗಳಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯದ ಸರ್ಕಾರಗಳು ನಿರ್ದಿಷ್ಟ ಹಾಗೂ ನಿಖರ ಯೋಜನೆ ಜಾರಿಗೊಳಿಸಿಲ್ಲ. ಅಭಿವೃದ್ಧಿ ಕಾಣದ ಕಾರಣದಿಂದ ಸ್ಮಾರಕಗಳು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾಗಿವೆ. ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ.

ಮೈಸೂರ ಕರ್ನಾಟಕ ಭಾಗದ ಪ್ರವಾಸಿ ತಾಣಗಳಿಗಿಂತಲೂ ಪ್ರಾಚೀನ ಇತಿಹಾಸ ಮತ್ತು ಮಹತ್ವ ಪಡೆದ ಜಿಲ್ಲೆಯ ಸ್ಮಾರಕಗಳು ಅನಾಥವಾಗಿವೆ. ಬನಶಂಕರಿ ಮತ್ತು ಪಟ್ಟದಕಲ್ಲಿನಲ್ಲಿ ಹೋಟೆಲ್ ನಿರ್ಮಾಣ ಕಾಮಗಾರಿಗಳು ತ್ವರಿತವಾಗಿ ಮುಗಿಯಬೇಕು. ಐಹೊಳೆ ಸ್ಥಳಾಂತರವಾಗಬೇಕು. ಕೂಡಲ ಸಂಗಮ ಅಂತರರಾಷ್ಟ್ರೀಯ ಕೇಂದ್ರ ಕಾಮಗಾರಿ ಬೇಗ ಮುಗಿದು ಪ್ರವಾಸಿಗರನ್ನು ಸೆಳೆಯುವಂತಾಗಬೇಕು. ನಾಗರಹೊಳೆ ಮತ್ತು  ಮೈಸೂರಿಗೆ ವಿಶೇಷ ಅಧಿಕಾರಿಯನ್ನು ನೇಮಿಸಿದಂತೆ ಜಿಲ್ಲೆಗೂ ವಿಶೇಷ ಅಧಿಕಾರಿ ನೇಮಿಸಬೇಕು. ಚಾಲುಕ್ಯ ಪ್ರಾಧಿಕಾರ ಘೋಷಿಸಿ ದಶಕಗಳೇ ಕಳೆದಿವೆ. ನೆಪ ಮಾತ್ರಕ್ಕೆ ಪ್ರಾಧಿಕಾರ ರಚನೆಯಾಯಿತು. ಅನುದಾನ ಬರಲಿಲ್ಲ. 
-ಇಷ್ಟಲಿಂಗ ಶಿರಸಿ, ಸಾಮಾಜಿಕ ಕಾರ್ಯಕರ್ತ, ಬಾದಾಮಿ

*
ಕಾಲಮಿತಿಯಲ್ಲಿ ಪೂರ್ಣಗೊಳ್ಳಲಿ
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಭೂಸ್ವಾಧೀನ, ನೀರಾವರಿ ಕಾಮಗಾರಿಗಳನ್ನು ಕಾಲಮಿತಿ ಹಾಕಿಕೊಂಡು ಪೂರ್ಣಗೊಳಿಸಬೇಕು.

ರಾಷ್ಟ್ರೀಯ ಪುನರ್‌ ವಸತಿ ನೀತಿಯನ್ವಯ ಭೂಮಿ ಕಳೆದುಕೊಂಡವರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು.

2015ಕ್ಕೂ ಮೊದಲು ಭೂಮಿ ಕಳೆದುಕೊಂಡವರ ಮಕ್ಕಳ ಶಿಕ್ಷಣ ಶುಲ್ಕ, ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ಅದನ್ನು ಮತ್ತೆ ಆರಂಭಿಸಬೇಕು.

ಮೂರನೇ ಹಂತದಲ್ಲಿ ಬಾಗಲಕೋಟೆ ಜಿಲ್ಲೆಗೆ ಕಡಿಮೆ ನೀರು ಹಂಚಿಕೆ ಮಾಡಲಾಗಿದ್ದು, ಅದರ ಪ್ರಮಾಣ ಹೆಚ್ಚಿಸಬೇಕು. ಮುಳುಗಡೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಗುಳೆ ಹೋಗುವುದನ್ನು ತಪ್ಪಿಸಬೇಕು.
-ಪ್ರಕಾಶ ಅಂತರಗೊಂಡ, ಸಂಚಾಲಕ, ಉ.ಕ ಸ್ವಾಭಿಮಾನಿ ವೇದಿಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು