ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಪನಾಶ ಕೆರೆ ಪರಿಸರ ಸೌಂದರ್ಯೀಕರಣಕ್ಕೆ ಪಣ

ಕೊಳಚೆ ನೀರು ಶುದ್ಧೀಕರಣಕ್ಕೆ ಜಿಲ್ಲಾ ಆಡಳಿತ ಯೋಜನೆ
Last Updated 25 ಜೂನ್ 2018, 16:06 IST
ಅಕ್ಷರ ಗಾತ್ರ

ಬೀದರ್: ನಗರದ ಪಾಪನಾಶ ಕೆರೆಯನ್ನು ಯಥಾಸ್ಥಿತಿಯಲ್ಲೇ ಉಳಿಸಿಕೊಂಡು ನೈಸರ್ಗಿಕವಾಗಿ ಅಭಿವೃದ್ಧಿಪಡಿಸಲು ಜಿಲ್ಲಾ ಆಡಳಿತ ಮುಂದಾಗಿದೆ.

ಶಿವನಗರದ ಮನೆಗಳಿಂದ ಹರಿದು ಬರುತ್ತಿರುವ ಕೊಳಚೆ ನೀರು ಕೆರೆಗೆ ಸೇರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೆ ಚಿಕ್ಕದಾದ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಾಪನೆ ಮಾಡಿ ಸಂಸ್ಕರಿಸಿದ ನೀರು ಬಿಡಲು ನಿರ್ಧರಿಸಿದೆ.

ಕೊಳಚೆ ನೀರು ಕೆರೆಗೆ ಸೇರದಂತೆ ಮಾಡಲು ಹಿಂದೆ ಕೆರೆಯ ಒಂದು ಬದಿಗೆ ಬೆಟ್ಟ ಕೊರೆಯಲಾಗಿತ್ತು. ಬೃಹತ್‌ ಬಂಡೆಗಲ್ಲು ಇರುವ ಕಾರಣ ಅದನ್ನು ತಳ ಮಟ್ಟದಲ್ಲಿ ಒಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಪೈಪ್‌ಲೈನ್‌ ಮೂಲಕ ನೀರು ಹೊರಗೆ ಹೋಗುವಂತೆ ಮಾಡುವ ಯೋಜನೆಯೂ ಫಲ ನೀಡಲಿಲ್ಲ. ಹೀಗಾಗಿ ಎಸ್‌ಟಿಪಿ ಮೂಲಕ ನೀರು ಸಂಸ್ಕರಿಸಿ ಬಿಡಲು ಯೋಜನೆ ರೂಪಿಸಲಾಗಿದೆ.

₹7.85 ಲಕ್ಷ ವೆಚ್ಚದಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ನಿರ್ಮಾಣ ಕಾಮಗಾರಿಯನ್ನು ಆರಂಭಿಸುವಂತೆ ಜಿಲ್ಲಾ ಆಡಳಿತವು ಕೆಆರ್‌ಡಿಎಲ್‌ಗೆ ಸೂಚಿಸಿದೆ. ಪಾಪನಾಶ ಕೆರೆಯ ಆವರಣದಲ್ಲಿ ಚಿಕ್ಕದಾದ ಕಾವಲುಗಾರ ಕೊಠಡಿ, ಪ್ರವೇಶ ದ್ವಾರ, ಕೆರೆಯ ಸುತ್ತ ತಂತಿಬೇಲಿ ನಿರ್ಮಾಣಕ್ಕೆ ಅಗತ್ಯವಿರುವ ಅಂದಾಜು ವೆಚ್ಚವನ್ನು ಸಿದ್ಧಪಡಿಸುವಂತೆ ಭೂಸೇನಾ ನಿಗಮದ ಅಧಿಕಾರಿಗಳಿಗೂ ಸೂಚನೆ ನೀಡಿದೆ.

ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಹರ್ಷ ಗುಪ್ತ ಅವರು ಕೆರೆ ಅಭಿವೃದ್ಧಿಗೆ ಆಸಕ್ತಿ ತೋರಿದ್ದರು. 2010ರ ಫೆಬ್ರುವರಿಯಲ್ಲಿ ಕೆರೆ ಸ್ವಚ್ಛಗೊಳಿಸಿ ದೋಣಿ ವಿಹಾರಕ್ಕೆ ಚಾಲನೆ ನೀಡಲಾಗಿತ್ತು. ಖಾಸಗಿ ಸಂಸ್ಥೆಯೊಂದು ಕೆರೆ ಪ್ರದೇಶವನ್ನು ಅಭಿವೃದ್ಧಿಪಡಿಸಿ ಅಲ್ಲಿ ವಾಟರ್ ಸ್ಕೂಟರ್, ಮೋಟರ್ ಬೋಟಿಂಗ್‌ ಆರಂಭಿಸಲು ಯೋಜನೆ ರೂಪಿಸಿತ್ತು. ನಂತರ ಜಿಲ್ಲಾಧಿಕಾರಿಯಾಗಿ ಬಂದ ಸಮೀರ್ ಶುಕ್ಲಾ ಅವರು ಯೋಜನೆ ಆರಂಭಿಸಲು ಆಸಕ್ತಿ ತೋರಲಿಲ್ಲ. ಹೀಗಾಗಿ ದೋಣಿ ವಿಹಾರ ಸ್ಥಗಿತಗೊಂಡಿತು.

2014ರಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮಂಡ­ಳಿಯು ₹8.5 ಲಕ್ಷ ವೆಚ್ಚದಲ್ಲಿ ಪಾಪನಾಶ ಕೆರೆ ಪಕ್ಕದಲ್ಲಿ ರಸ್ತೆ ನಿರ್ಮಾಣ ಮಾಡಿದೆ. ಕೆರೆಯ ಆವರಣದಲ್ಲಿ ವೀಕ್ಷಣಾ ಗೋಪುರ ನಿರ್ಮಿಸಿ, ಎರಡು ಹೈಮಾಸ್ಟ್‌ ದೀಪ­ಗಳನ್ನು ಸಹ ಅಳವಡಿಸಲಾಗಿದೆ.

ಒಂದು ತಿಂಗಳ ಹಿಂದೆ ಅನಿರುದ್ಧ ಶ್ರವಣ ಅವರು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಕೆರೆಯ ಪರಿಸರ ವೀಕ್ಷಣೆ ಮಾಡಿದ್ದರು. ಕೆರೆಗೆ ಕೊಳಚೆ ನೀರು ಸೇರುತ್ತಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ್ದರು. ಕೆರೆಯಲ್ಲಿ ಸ್ವಚ್ಛ ನೀರು ಇರಬೇಕು ಎನ್ನುವ ಉದ್ದೇಶದಿಂದ ಎಸ್‌ಟಿಪಿ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ.

‘ಪಾಪನಾಶ ಕೆರೆಯಲ್ಲಿ ಕೊಳಚೆ ನೀರು ಸೇರುತ್ತಿದೆ. ದೇವಸ್ಥಾನಕ್ಕೆ ಬರುವ ಭಕ್ತರು ಕೆರೆಯಲ್ಲಿ ತ್ಯಾಜ್ಯ ಎಸೆದು ಹೋಗುತ್ತಿದ್ದಾರೆ. ಇದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ.

‘ಪಾಪನಾಶ ಪರಿಸರದಲ್ಲಿ 84 ಬಗೆಯ ಪಕ್ಷಿಗಳು ವಾಸವಾಗಿವೆ. ನವಿಲು, ಕೊಕ್ಕರೆ, ಗ್ರೇಹಾರ್ನ್‌ ಬಿಲ್, ಬಡಿಗನ ಹಕ್ಕಿ, ಕರಿಭೀಮಾ, ಪೆರಾಡೈಸ್‌ ಫ್ಲೈ ಕ್ಯಾಚರ್, ಪಿಟ್ಟಾ ಪಕ್ಷಿಗಳು ಸುಲಭವಾಗಿ ಕಾಣಸಿಗುತ್ತವೆ. ಇಲ್ಲಿನ ಪರಿಸರವನ್ನು ನೈಸರ್ಗಿಕವಾಗಿಯೇ ಉಳಿಸಿಕೊಳ್ಳಬೇಕಿದೆ’ ಎಂದು ಹವ್ಯಾಸಿ ಪಕ್ಷಿ ವೀಕ್ಷಕ ವಿನಾಯಕ ವಂಗೇಪಲ್ಲಿ ಹೇಳುತ್ತಾರೆ.

ಪಾಪನಾಶ ಕೆರೆಯ ಪರಿಸರದಲ್ಲಿ ಅನೇಕ ಬಗೆಯ ಪಕ್ಷಿಗಳ ವಾಸ ಇದೆ. ಋತುಮಾನಕ್ಕೆ ಅನುಗುಣವಾಗಿ ಪಕ್ಷಿಗಳು ಇಲ್ಲಿಗೆ ಬರುತ್ತಿರುವ ಕಾರಣ ಪರಿಸರ ಉಳಿಸಬೇಕಿದೆ.
- ವಿನಾಯಕ ವಂಗೇಪಲ್ಲಿ,ಹವ್ಯಾಸಿ ಪಕ್ಷಿ ವೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT