ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಸ್ಥಿತಿ ಸಮರ್ಥವಾಗಿ ನಿರ್ವಹಿಸಿ: ಅಧಿಕಾರಿಗಳಿಗೆ ಸಚಿವ ತಿಮ್ಮಾಪುರ ಸೂಚನೆ

Published 28 ನವೆಂಬರ್ 2023, 14:07 IST
Last Updated 28 ನವೆಂಬರ್ 2023, 14:07 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಮುಂದಿನ ಏಳು ತಿಂಗಳು ಬಹಳಷ್ಟು ಕಠಿಣವಾಗಿವೆ. ಎರಡು ತಾಲ್ಲೂಕಿನ ಅಧಿಕಾರಿಗಳು ಬರ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಬೇಕು. ಸರ್ಕಾರಕ್ಕೆ ಕೆಟ್ಟ ಹೆಸರನ್ನು ತರುವ ಕಾರ್ಯ ಮಾಡಬೇಡಿ. ಎಲ್ಲ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸಿದರೆ ಮಾತ್ರ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ನಗರಸಭೆ ಸಭಾ ಭವನದಲ್ಲಿ ರಬಕವಿ ಬನಹಟ್ಟಿ, ಜಮಖಂಡಿ ಹಾಗೂ ತೇರದಾಳ ತಾಲ್ಲೂಕು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸೋಮವಾರ ಅವರು ಮಾತನಾಡಿದರು.

ಶಾಲೆ, ಕಾಲೇಜು, ಅಂಗನವಾಡಿ ಕೇಂದ್ರಗಳು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯಗಳಿಗೆ ನೀರಿನ ತೊಂದರೆಯಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ತಕ್ಷಣ ಗುರುತಿಸಿ ನೀರು ನೀಡುವ ತುರ್ತು ಕೆಲಸವಾಗಬೇಕು. ಈ ಕುರಿತು ಎರಡು ತಾಲ್ಲೂಕುಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಮತ್ತು ತಹಶೀಲ್ದಾರ್ ಕಾರ್ಯಾಲಯದಲ್ಲಿ ಸಹಾಯವಾಣಿ ಕೂಡ ಆರಂಭಿಸಲಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮ ತೆಗೆದುಕೊಳ‍್ಳಬೇಕು ಎಂದರು.

ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ 22,115 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆಯಾಗಿದ್ದು, ಇದರಲ್ಲಿ 15,480ರಷ್ಟು ಬೆಳೆ ಹಾನಿಯಾಗಿದೆ. ಜಮಖಂಡಿ ತಾಲ್ಲೂಕಿನಲ್ಲಿ 40,625 ಹೆಕ್ಟೇರ್ ನಲ್ಲಿ ಮುಂಗಾರು ಬಿತ್ತನೆಯಾಗಿದ್ದು, ಇದರಲ್ಲಿ 28,421 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.

ರಬಕವಿ ಬನಹಟ್ಟಿ ಮತ್ತು ಜಮಖಂಡಿ ನಗರಸಭೆ ಹಾಗೂ ಮಹಾಲಿಂಗಪುರ ಮತ್ತು ತೇರದಾಳ ಪುರಸಭೆಗಳ ನೀರಿನ ಮೂಲಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಎಲ್ಲರಿಗೂ ಶುದ್ಧ ಮತ್ತು ಗುಣಮಟ್ಟದ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬರ ಸಂದರ್ಭದಲ್ಲಿ ರಾಜಕಾರಣ ಮಾಡದೆ ಪರಿಹಾರಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ನೀರು ಸರಬರಾಜು ಮಾಡುವ ಕೆರೆ, ಬಾವಿ ಮತ್ತು ಕೊಳವೆ ಬಾವಿಗಳ ನೀರಿನ ಶುದ್ಧತೆ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ಸಚಿವ ತಿಳಿಸಿದರು.

ವಿವಿಧ ಇಲಾಖೆಗಳ ಕುರಿತು ಮಾಹಿತಿಯನ್ನು ಪಡೆದುಕೊಂಡು, ಮಾಹಿತಿ ಇಲ್ಲದೆ ಸಭೆಗೆ ಆಗಮಿಸಿದ ಹೆಸ್ಕಾಂ, ನೀರಾವರಿ, ಅಂಗನವಾಡಿ ಅಧಿಕಾರಿಗಳನ್ನು ಸಚಿವ ತಿಮ್ಮಾಪುರ ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿ, ಈಗಾಗಲೇ ಅಂತರರಾಜ್ಯ ಮೇವು ಸಾಗಾಣಿಕೆಯನ್ನು ನಿರ್ಭಂಧಿಸಲಾಗಿದೆ. ಮೇವು ಸಾಗಾಣಿಕೆ ಮಾಡುವವರ ಮೇಲೆ ನಿಗಾ ವಹಿಸಲಾಗುವುದು. ಬರ ಸಂದರ್ಭದಲ್ಲಿ ಎಲ್ಲ ಅಧಿಕಾರಿಗಳು ಗಂಭೀರತೆಯಿಂದ ಕರ್ತವ್ಯ ನಿರ್ವಹಿಸಬೇಕು. ಪ್ರತಿಯೊಂದು ಟಾಸ್ಕ್ ಫೋರ್ಸ್ ಸಭೆಯಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಉಪ ಕಾರ್ಯದರ್ಶಿ ಅಮರೇಶ ನಾಯಕ, ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಇದ್ದರು.

ರಬಕವಿ ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ, ಜಮಖಂಡಿ ತಹಶೀಲ್ದಾರ್ ಸದಾಶಿವ ಮಕ್ಕೋಜಿ, ಗ್ರೇಡ್-2 ತಹಶೀಲ್ದಾರ್ ಎಸ್.ಬಿ.ಕಾಂಬಳೆ, ಆರೋಗ್ಯ ಇಲಾಖೆಯ ಅಧಿಕಾರಿ ಡಾ.ಜಿ.ಎಚ್. ಗಲಗಲಿ, ಪೌರಾಯುಕ್ತ ಜಗದೀಶ ಈಟಿ, ಲಕ್ಷ್ಮಿ ಅಷ್ಠಗಿ, ಈರಣ್ಣ ದಡ್ಡಿ, ಸಿದ್ದಪ್ಪ ಪಟ್ಟಿಹಾಳ, ಶ‍್ರೀಕಾಂತ ಮಾಯನ್ನವರ, ರವಿ ಹುಕ್ಕೇರಿ ಸೇರಿದಂತೆ ರಬಕವಿ ಬನಹಟ್ಟಿ, ಜಮಖಂಡಿ ಹಾಗೂ ತೇರದಾಳ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಪ್ಪು ಮಾಹಿತಿ ನೀಡಿದರೆ ಕ್ರಮ
ಬರ ಸಂದರ್ಭದಲ್ಲಿ ನಡೆಯುವ ಪ್ರತಿಯೊಂದು ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ನಿಖರ ಸ್ಪಷ್ಟ ಮಾಹಿತಿಯೊಂದಿಗೆ ಸಭೆಗೆ ಬರಬೇಕು. ತಪ್ಪು ಮಾಹಿತಿ ನೀಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಆರ್.ಬಿ. ತಿಮ್ಮಾಪುರ ಎಚ್ಚರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT