ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಖಾನೆ ಮಾಲೀಕರಿಗೆ ಡಿ.21ರ ಡೆಡ್‌ಲೈನ್

₹31.81 ಕೋಟಿ ಬಾಕಿ ಪಾವತಿ: ಇದು ಅಂತಿಮ ಗಡುವು ಜಿಲ್ಲಾಡಳಿತ ಸ್ಪಷ್ಟನೆ
Last Updated 17 ಡಿಸೆಂಬರ್ 2019, 14:21 IST
ಅಕ್ಷರ ಗಾತ್ರ

ಬಾಗಲಕೋಟೆ: ಹಿಂದಿನ ಅವಧಿಯಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳು ₹31.81 ಕೋಟಿ ಬಾಕಿ ಬಾಕಿ ಉಳಿಸಿಕೊಂಡಿದ್ದು, ಅದನ್ನು ಡಿಸೆಂಬರ್ 21ರ ಒಳಗೆ ಪಾವತಿಸುವಂತೆ ಜಿಲ್ಲಾಡಳಿತ ಮತ್ತೊಂದು ಗಡುವು ನೀಡಿದೆ.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ರೈತ ಮುಖಂಡರು ಹಾಗೂ ಕಾರ್ಖಾನೆ ಪ್ರತಿನಿಧಿಗಳನ್ನು ಸೇರಿಸಿ ಹಾಗೂಕಾರ್ಖಾನೆ ಪ್ರತಿನಿಧಿಗಳನ್ನು ಕರೆದು ಪ್ರತ್ಯೇಕವಾಗಿ ಸುದೀರ್ಘ ಸಭೆ ನಡೆಸಿದರು.

’ರೈತರ ವಿಚಾರದಲ್ಲಿ ಎಲ್ಲವೂ ನಡೆದುಹೋಗುತ್ತದೆ ಎಂಬ ಉದಾಸೀನ ಧೋರಣೆ ಸಹಿಸುವುದಿಲ್ಲ‘ ಎಂದು ಕಾರ್ಖಾನೆ ಪ್ರತಿನಿಧಿಗಳಿಗೆ ಖಡಕ್ ಎಚ್ಚರಿಕೆ ಕೂಡ ನೀಡಿದ ಜಿಲ್ಲಾಡಳಿತ, ಸಂಯಮದಿಂದ ವರ್ತಿಸುವಂತೆಯೂ ರೈತ ಮುಖಂಡರಿಗೂ ಇದೇ ವೇಳೆ ಮನವಿ ಮಾಡಿತು.

ರೈತರ ವಿಚಾರದಲ್ಲಿ ನಿಮ್ಮ ನಕಾರಾತ್ಮಕ ಧೋರಣೆ ಇನ್ನು ಸಹಿಸುವುದಿಲ್ಲ. ಈ ಹಿಂದೆ ಜಿಲ್ಲಾಡಳಿತದ ಮುಂದೆ ಒಪ್ಪಿಕೊಂಡಂತೆ ನೀವು ನಡೆದುಕೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ನೊಟೀಸ್ ಬೋರ್ಡ್‌ನಲ್ಲಿ ಪ್ರಕಟಿಸಿ:

ಈ ಬಾರಿ ರೈತರಿಗೆ ಕೊಡುವ ಎಚ್‌ಎನ್‌ಟಿ (ಕಟಾವು ಹಾಗೂ ಸಾಗಣೆ ವೆಚ್ಚ) ದರವನ್ನು ಬುಧವಾರವೇ ಎಲ್ಲಾ ಕಾರ್ಖಾನೆಗಳ ನೊಟೀಸ್‌ ಬೋರ್ಡ್‌ನಲ್ಲಿ ಹಾಕಿ ಬೆಳೆಗಾರರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಬೀಳಗಿ ಶುಗರ್ಸ್ ₹2.64 ಕೋಟಿ, ಜೆಮ್ ಶುಗರ್ಸ್ ₹5.24 ಕೋಟಿ, ಗೋದಾವರಿ ಶುಗರ್ಸ್ ₹3.67 ಕೋಟಿ, ನಿರಾಣಿ ಶುಗರ್ಸ್ ₹3.46 ಕೊಟಿ, ಪ್ರಭುಲಿಂಗೇಶ್ವರ ಶುಗರ್ಸ್ ₹10.38 ಕೋಟಿ, ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ₹5.82 ಕೋಟಿ, ಸಾವರಿನ್ ಶುಗರ್ಸ್ ₹56 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದು, ಗಡುವಿನ ಒಳಗೆ ಬಾಕಿ ಹಣ ಪಾವತಿಸಲು ಜಿಲ್ಲಾಡಳಿತ ಸೂಚಿಸಿತು.

ಎಫ್‌ಆರ್‌ಪಿ ದರವನ್ನು ನಿಯಮಾವಳಿಯಂತೆ ಕಬ್ಬು ಪೂರೈಸಿದ 15 ದಿನಗಳ ಒಳಗೆ ಪಾವತಿಸಲು ಕಾರ್ಖಾನೆ ಮಾಲೀಕರಿಗೆ ಹೇಳುವಂತೆ ರೈತ ಮುಖಂಡ ವಿಶ್ವನಾಥ ಉದಗಟ್ಟಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯೂ ದೊರೆಯಿತು. ಈ ವಿಚಾರಗಳು ಇತ್ಯರ್ಥವಾಗುವವರೆಗೂ ಕಾರ್ಖಾನೆಗಳು ಕಬ್ಬು ಅರೆಯುವುದು ಬೇಡ ಎಂದು ಉದಗಟ್ಟಿ ಮನವಿ ಮಾಡಿದರು.

’ಅವರು (ಕಾರ್ಖಾನೆಯವರು) ಮೂರು ದಿನ ಕಾಲಾವಕಾಶ ಕೋರಿದ್ದಾರೆ. ಇನ್ನು ಜಿಗುಟುತನ ಬೇಡ. ಉಸಿರಾಡಲು ಅವರಿಗೂ ಕಾಲಾವಕಾಶ ಕೊಡಿ. ನಂತರ ಮುಂದಿನ ನಿರ್ಣಯ ಕೈಗೊಳ್ಳಿ‘ ಎಂದು ಎಸ್ಪಿ ನೀಡಿದ ಸಲಹೆಗೆ ಸಭೆಯಲ್ಲಿದ್ದವರು ಒಪ್ಪಿಗೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT