ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುವಕರಿಂದ ಫಾಗಿಂಗ್: ಗ್ರಾಮಸ್ಥರ ಮೆಚ್ಚುಗೆ

ಡೆಂಗಿ: ಕ್ರಮಕೈಗೊಳ್ಳದ ಗ್ರಾಮ ಪಂಚಾಯಿತಿ
ಅಮರ ಇಂಗಳೆ
Published : 9 ಆಗಸ್ಟ್ 2024, 4:30 IST
Last Updated : 9 ಆಗಸ್ಟ್ 2024, 4:30 IST
ಫಾಲೋ ಮಾಡಿ
Comments

ತೇರದಾಳ: ತಾಲ್ಲೂಕಿನ ಸಸಾಲಟ್ಟಿ ಗ್ರಾಮದ ವಿವೇಕಾನಂದ ಗೆಳೆಯರ ಬಳಗದವರು ಸ್ವಂತ ಖರ್ಚಿನಲ್ಲಿ ಗ್ರಾಮದಲ್ಲಿ ಫಾಗಿಂಗ್ ಮಾಡಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಡೆಂಗಿ ನಿಯಂತ್ರಣಕ್ಕಾಗಿ ಗ್ರಾಮ ಪಂಚಾಯಿತಿ ಮಾಡಬೇಕಾದ ಕೆಲಸವನ್ನು ವಿವೇಕಾನಂದ ಬಳಗದ ವತಿಯಿಂದ ಮಾಡಿ, ಗ್ರಾಮಸ್ಥರಿಗೆ ಅನುಕೂಲ ಮಾಡಿದ್ದಾರೆ.

‘ಡೆಂಗಿ ನಿಯಂತ್ರಣಕ್ಕೆ ಯಾವ ಕ್ರಮ ತೆಗೆದುಕೊಂಡಿದ್ದಿರಿ ಎಂದು ಗ್ರಾಮ ಪಂಚಾಯಿತಿ ಅಧಿಕಾರಿ, ಅಧ್ಯಕ್ಷರನ್ನು ಕೇಳಿದರೆ ಪ್ರತಿಯೊಬ್ಬರರು  ಬೇರೆ ಬೇರೆ ಉತ್ತರ ನೀಡುತ್ತಾರೆ. ಯಾವುದೇ ಕೆಲಸ ಮಾಡದೆ ಹಣ ಪಡೆಯುತ್ತಿದ್ದಾರೆ‘ ಎಂದು ಗ್ರಾಮಸ್ಥರು ದೂರಿದರು.

ಗ್ರಾಮದ ಬಹುತೇಕ ಜನರು ತೋಟಗಳಲ್ಲಿ ವಾಸವಿರುವುದರಿಂದ ಗ್ರಾಮದಲ್ಲಿನ ಜನವಸತಿ ಪ್ರದೇಶ ಚಿಕ್ಕದಾಗಿದೆ. ವಾರ್ಡ್‌ ಸಂಖ್ಯೆ 3 ಹಾಗೂ 5ರ ಕೆಲ ಭಾಗ ಮಾತ್ರ ಊರಲ್ಲಿವೆ. ಈ ಸೀಮಿತ ಪ್ರದೇಶದಲ್ಲಿ ಸೊಳ್ಳೆ ನಿಯಂತ್ರಿಸಿ, ರೋಗ ಬರದಂತೆ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯಿತಿ ಸಬೂಬು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.

ಈ ಕುರಿತು ಪಿಡಿಒ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಅವರು ಕಚೇರಿಯಲ್ಲಿ ಇರುವುದಿಲ್ಲ ಹಾಗೂ ಕರೆ  ಸ್ವೀಕರಿಸಲಿಲ್ಲ.  ಕಾರ್ಯದರ್ಶಿ ರಾಘವೇಂದ್ರ ಕೋಲಾರ ಅವರನ್ನು ಕೇಳಿದರೆ `ಗ್ರಾಮದಲ್ಲಿನ ಚರಂಡಿ ಹೂಳೆತ್ತಲಾಗಿದೆ. ರಾಸಾಯನಿಕಯುಕ್ತ ಫಾಗಿಂಗ್ ಮಾಡಲು ಅವಕಾಶವಿಲ್ಲ ಎಂದು ತಿಳಿದು ಇಲ್ಲಿಯವರೆಗೆ ಮಾಡಿಸಿಲ್ಲ. ಶೀಘ್ರ ಮಾಡಿಸಲಾಗುವುದು’ ಎಂದು ತಿಳಿಸಿದರು.

 `ಗ್ರಾಮದಲ್ಲಿ ಡೆಂಗಿ ತಡೆಗಟ್ಟಲು ಇಲ್ಲಿಯವರೆಗೆ ಯಾವ ಕ್ರಮವನ್ನು ಕೈಗೊಂಡಿಲ್ಲ. ಅನುದಾನವಿದ್ದು ಅದನ್ನು ಬಳಸಿಕೊಂಡು ಶಿವಲಿಂಗೇಶ್ವರ ಮಠ ಹಾಗೂ ಹೈಸ್ಕೂಲ್ ಮಧ್ಯೆ ಇರುವ ಹಳ್ಳದ ಹೂಳೆತ್ತುವ ಕಾರ್ಯ ಮಾಡಿದ ನಂತರ ಉಳಿದ ಕಡೆಯ ಚರಂಡಿಯ ಹೂಳೆತ್ತಿ, ಫಾಗಿಂಗ್ ಮಾಡಿ, ಡಿಡಿಟಿ ಪೌಡರ್ ಸಿಂಪಡಿಸುವ ಕೆಲಸ ಮಾಡಲಾಗುವುದು' ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾಶ್ರೀ ಮಹಾಂತೇಶ ಶೇಗುಣಸಿ ಹೇಳಿದರು.

`ಸಸಾಲಟ್ಟಿ ಗ್ರಾಮ ಪಂಚಾಯ್ತಿಯ ಆಡಳಿತ ವ್ಯವಸ್ಥೆ ಸರಿಯಾಗಿಲ್ಲ. ಪಿಡಿಒ ಸರಿಯಾಗಿ ಕಚೇರಿಗೆ ಬರುವುದಿಲ್ಲ. ಯಾವುದಾದರೂ ಮಾಹಿತಿ ಕೇಳಿದರೆ ಹಾರಿಕೆ ಉತ್ತರ ನೀಡಿ ಮರಳಿ ಕಳುಹಿಸುತ್ತಾರೆ. ಡೆಂಗಿ ರೋಗ ಬರದಂತೆ ಕ್ರಮವಹಿಸಲು ಗ್ರಾಮದಲ್ಲಿ ಫಾಗಿಂಗ್, ಡಿಡಿಟಿ ಸಿಂಪಡಣೆ, ಚರಂಡಿಗಳ ಹೂಳೆತ್ತಿಲ್ಲ’ ಎಂದು ಗ್ರಾಮಸ್ಥರಾದ ಪ್ರಕಾಶ ಉಳ್ಳಾಗಡ್ಡಿ, ರಾಜು ದರವಾನ ಹಾಗೂ ಉಮೇಶ ಉಳ್ಳಾಗಡ್ಡಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT