ಭಾನುವಾರ, ಆಗಸ್ಟ್ 25, 2019
21 °C

ಸಂತ್ರಸ್ತರಿಗೆ ಉಚಿತ ಕ್ಷೌರ

Published:
Updated:

ಕೂಡಲಸಂಗಮ: ಕಳೆದೊಂದು ವಾರದಿಂದ ಸಮರ್ಪಕ ಸ್ನಾನ, ಕ್ಷೌರವಿಲ್ಲದೇ ಇದ್ದ ನೆರೆ ಸಂತ್ರಸ್ತರಿಗೆ ಬುಧವಾರ  ಒಂದು ಬಗೆಯ ನೆಮ್ಮದಿ ತಂದಿತ್ತು. ಕೂಡಲಸಂಗಮದಲ್ಲಿ ಆಶ್ರಯ ಪಡೆದಿದ್ದ 200 ಜನರಿಗೆ 20 ಜನರ ತಂಡ ಉಚಿತ ಕ್ಷೌರ ಸೇವೆ ಒದಗಿಸಿತು.  

ಇಳಕಲ್‌ನ ಬಸವಪ್ರಿಯ ಹಡಪದ ಅಪ್ಪಣ್ಣ ವಿವಿಧೋದ್ದೇಶ ಸಹಕಾರಿ ಸಂಘ ಹಾಗೂ ಹಡಪದ ಅಪ್ಪಣ್ಣನವರ ಸೇವಾ ಸಂಘದ ಸದಸ್ಯರು ನೆರೆ ಸಂತ್ರಸ್ತರಿಗೆ ಈ ಸೇವೆ ಒದಗಿಸಿದರು. 

 ಮಾಸಿದ ತಲೆ, ಕುರುಚಲು ಗಡ್ಡ, ನೆರೆಯ ಚಿಂತೆಯಿಂದಾಗಿ ಬಳಲಿದಂತೆ ಕಾಣುತ್ತಿದ್ದವರೆಲ್ಲ, ಕ್ಷೌರದ ನಂತರ ತುಸು ಸಮಾಧಾನವಾದಂತೆ ಎನಿಸುತ್ತಿದ್ದರು. 

 ಬಸವರಾಜ ಬಂಡರಗಲ್ಲ, ಶಿವಶಂಕರ ಚಿನ್ನಾಪೂರ, ಅಪ್ಪಣ್ಣ ಲಿಂಗಸೂರ, ಚಿದಾನಂದ ಚಿನ್ನಾಪೂರ ಮುಂತಾದವರ ತಂಡಕ್ಕೆ ಕೂಡಲಸಂಗಮ ಹಡಪದ ಸಮಾಜದ ಸದಸ್ಯರೂ ಕೈಜೋಡಿಸಿದರು. ಸಿಆರ್‌ಪಿಎಫ್‌ ಯೋಧನಾಗಿರುವ ಹನಮಂತ ಹಡಪದ ಸಹ ಇವರೊಟ್ಟಿಗೆ ಪಾಲ್ಗೊಂಡರು. ನೆರೆ ಸಂತ್ರಸ್ತರಿಗೆ ಏನಾದರೂ ಸಹಾಯ ಮಾಡಬೇಕು ಎಂದೆನಿಸಿತ್ತು. ಸಹಾಯಕ್ಕಿಂತಲೂ ಸೇವೆಯೇ ಮಿಗಿಲೆನಿಸಿತು.  ಚಿತ್ತರಗಿ, ಕೂಡಲಸಂಗಮದಲ್ಲಿ 400ಕ್ಕೂ ಅಧಿಕ ಸಂತ್ರಸ್ತರಿಗೆ ಉಚಿತವಾಗಿ ಕಟಿಂಗ್ ಹಾಗೂ ಶೇವಿಂಗ್ ಮಾಡಿದವು ಎಂದು ಬಸವರಾಜ ಬಂಡರಗಲ್ಲ ಹೇಳುತ್ತಾರೆ.

***

ನದಿಯ ಪ್ರವಾಹಕ್ಕೆ ಎಲ್ಲ ಕಟಿಂಗ್ ಅಂಗಡಿಗಳು ಜಲಾವೃತವಾಗಿವೆ. ಇಂದು ಈ ತಂಡ ಕಟಿಂಗ್ ಮಾಡಿದ್ದು ಪರಸ್ಪರ ಮುಖ ನೋಡಿಕೊಳ್ಳುವಂತಾಗಿದೆ.

– ರವಿ ಪಾಟೀಲ, ಸಂತ್ರಸ್ತ.

 

Post Comments (+)