ಬಾಗಲಕೋಟೆ: ‘ವಿಜಯಪುರ ನಗರ ಸೇರಿದಂತೆ ಭೀಮಾ ತೀರದ ಪಟ್ಟಣಗಳಲ್ಲಿ ಈಗಾಗಲೇ ನೀಡಿರುವ ಗನ್ ಲೈಸೆನ್ಸ್‌ಗಳನ್ನು ಮರುಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಬೆಳಗಾವಿಯ ಉತ್ತರವಲಯ ಐಜಿಪಿ ಅಲೋಕ್ ಕುಮಾರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಜಯಪುರ ನಗರ ಹಾಗೂ ವಿಶೇಷವಾಗಿ ಇಂಡಿ, ಚಡಚಣ, ಝಳಕಿ , ಆಲಮೇಲ, ಸಿಂದಗಿ ಭಾಗದಲ್ಲಿ ನೀಡಿರುವ ಗನ್ ಲೈಸೆನ್ಸ್ ಮರುಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.
‘ಆ ಗನ್‌ಗಳು ಸಮರ್ಪಕವಾಗಿ ಬಳಕೆಯಾಗುತ್ತಿವೆಯೇ, ಸಂಬಂಧಿಸಿದವರಿಗೆ ಬೇಕಾಗಿದೆಯೇ, ಇಲ್ಲವೇ, ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಯೇ, ಸುಮ್ಮನೆ ಹಾಗೇ ಇಟ್ಟುಕೊಂಡಿದ್ದಾರೆಯೇ, ಇಲ್ಲವೇ ಬೇರೆ ಉದ್ದೇಶಕ್ಕೆ ಬಳಸುತ್ತಿದ್ದಾರೆಯೇ ಎಂಬುದರ ಬಗ್ಗೆಯೂ ಪರಾಮರ್ಶೆ ಮಾಡಲಾಗುವುದು. ದುರುಪಯೋಗ ಆಗುತ್ತಿರುವುದು ಕಂಡು ಬಂದರೆ ಗನ್ ಲೈಸೆನ್ಸ್ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗೆ ಪತ್ರ ಕಳುಹಿಸುವುದಾಗಿ’ ಹೇಳಿದರು.
‘ಪೊಲೀಸರು ಪ್ರಾಮಾಣಿಕ, ನಿಷ್ಪಕ್ಷಪಾತವಾಗಿ ಅಲ್ಲಿನ ಗ್ಯಾಂಗ್‌ಗಳ ಭಾಗವಾಗದೇ, ಅವರ ಸಹಾಯ ಪಡೆಯದೇ ಕೆಲಸ ಕೆಲಸ ಮಾಡಿದರೆ ಭೀಮಾ ತೀರದ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕುವುದು ಕಷ್ಟವಾಗುವುದಿಲ್ಲ. ಆ ನಿಟ್ಟಿನಲ್ಲಿ ನಾನೂ ಕೂಡ ಮೇಲಿಂದ ಮೇಲೆ ಆ ಭಾಗಕ್ಕೆ ಭೇಟಿ ನೀಡುತ್ತಿದ್ದೇನೆ’ ಎಂದರು.
‘ಗಂಗಾಧರ ಚಡಚಣ ನಾಪತ್ತೆಯ ತನಿಖೆ ವಿಚಾರದಲ್ಲಿ ನನ್ನ ಮೇಲೆ ಯಾರೂ ಪ್ರಭಾವ ಬೀರಿಲ್ಲ. ರಾಜಕಾರಣಿಗಳ ಹಸ್ತಕ್ಷೇಪವಿದ್ದರೆ ಆ ಮಟ್ಟಕ್ಕೆ ತನಿಖೆ ಮುಂದುವರೆಯುತ್ತಿರಲಿಲ್ಲ. ಪೊಲೀಸರ ವಶದಲ್ಲಿದ್ದಾಗಲೇ ಗಂಗಾಧರ ನಾಪತ್ತೆಯಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಿಯಮಾವಳಿಯಂತೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಹಾಗಾಗಿ ನನ್ನನ್ನು ಉದ್ದೇಶಪೂರ್ವಕವಾಗಿ ತನಿಖೆಯಿಂದ ಹೊರಗಿಡುವ ಪ್ರಶ್ನೆಯೇ ಬರುವುದಿಲ್ಲ’ ಎಂದರು.
‘ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಚಡಚಣ ಕುಟುಂಬದವರ ಒತ್ತಾಯದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಆ ಬಗ್ಗೆ ನನಗೆ ಯಾರೂ ಮನವಿ ಸಲ್ಲಿಸಿಲ್ಲ. ಗಂಗಾಧರ ನಾಪತ್ತೆ ವಿಚಾರದಲ್ಲಿ ಕುಟುಂಬದವರು ಜೂನ್ 6ರಂದು ಸಂಪರ್ಕಿಸಿ ದೂರು ನೀಡುತ್ತಿದ್ದಂತೆಯೇ ತನಿಖೆಗೆ ಮುಂದಾಗಿದ್ದೇನೆ’ ಎಂದರು.
‘ಭೀಮಾ ತೀರದಲ್ಲಿ ಪದೇ ಪದೇ ಎನ್‌ಕೌಂಟರ್ ಆಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಅಲೋಕ್‌ಕುಮಾರ, ನಾನು ಐಜಿಪಿಯಾಗಿ ಬಂದ ಕಳೆದ ಆರು ತಿಂಗಳಿನಿಂದ ಯಾವುದೇ ಎನ್‌ಕೌಂಟರ್ ನಡೆದಿಲ್ಲ. ವೃಥಾ ಆರೋಪ ಸಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.