ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ಪೂರ್ತಿ ಬಸ್‌ ಟಿಕೆಟ್‌ ಪಡೆದವರಿಂದ ಅರ್ಧ ಹಣ ವಾಪಸ್

Published 10 ಜನವರಿ 2024, 15:47 IST
Last Updated 10 ಜನವರಿ 2024, 15:47 IST
ಅಕ್ಷರ ಗಾತ್ರ

ಬಾಗಲಕೋಟೆ: 12 ವರ್ಷದೊಳಗಿದ್ದರೂ ಪೂರ್ಣ ಟಿಕೆಟ್ ಪಡೆದ ಕಂಡಕ್ಟರ್‌ಗೆ ಹೆಚ್ಚುವರಿಯಾಗಿ ಪಡೆದ ಟಿಕೆಟ್‌ ಹಣವನ್ನು ಶೇ 9ರ ಬಡ್ಡಿಯೊಂದಿಗೆ ಎರಡು ತಿಂಗಳಲ್ಲಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಮುಧೋಳ ತಾಲ್ಲೂಕಿನ ಅನಂತಪುರ ಗ್ರಾಮದ ನಿವಾಸಿ ದೀಪಾ ಹಿರೇಮಠ ಅವರು ತಮ್ಮ ಪುತ್ರನೊಂದಿಗೆ ಕಳೆದ ವರ್ಷ ಜುಲೈ 1ರಂದು ಮುಧೋಳದಿಂದ ವಿಜಯಪುರಕ್ಕೆ ಹೊರಟಿದ್ದರು.

ಮಗನಿಗೆ 10 ವರ್ಷ 11ತಿಂಗಳು ಆಗಿರುವುದರಿಂದ ಅರ್ಧ ಟಿಕೆಟ್‌ ನೀಡುವಂತೆ ಕಂಡಕ್ಟರ್‌ಗೆ ಕೇಳಿದರು. 12 ವರ್ಷ ಮೇಲ್ಪಟ್ಟಿದ್ದಾನೆ, ಪೂರ್ಣ ಟಿಕೆಟ್‌ ಪಡೆಯಬೇಕು ಎಂದು ಕಂಡಕ್ಟರ್ ಸೂಚಿಸಿದರು. ಆಗ ಜನ್ಮ ದಾಖಲೆಯ ಆಧಾರ್ ಕಾರ್ಡ್ ತೋರಿಸಿದರೂ ಒಪ್ಪದ ಅವರು, ಬಸ್‌ನಿಂದ ಕೆಳಗೆ ಇಳಿಯುವಂತೆ ತಿಳಿಸಿದರು. ಆಗ ಅವರು ಪೂರ್ಣ ಟಿಕೆಟ್‌ ಪಡೆದೇ ಪ್ರಯಾಣ ಮಾಡಿದ್ದರು.

ನಂತರ ಈ ವಿಷಯವನ್ನು ಡಿಪೊ ವ್ಯವಸ್ಥಾಪಕರ ಗಮನಕ್ಕೆ ತಂದು, ‘ಕಂಡಕ್ಟರ್ ವಿರುದ್ಧ ಕ್ರಮಕೈಗೊಳ್ಳಬೇಕು, ಟಿಕೆಟ್‌ ಹಣ ವಾಪಸ್‌ ಕೊಡಬೇಕು’ ಎಂದು ಕೋರಿದರು. ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳಲಿಲ್ಲ. ವಕೀಲರ ಮೂಲಕ ನೋಟಿಸ್ ಕಳುಹಿಸಿದರೂ, ಸ್ಪಂದಿಸದ್ದರಿಂದ ಆಯೋಗಕ್ಕೆ ದೂರು ಸಲ್ಲಿಸಿದ್ದರು.

‘ಕೆಎಸ್‌ಆರ್‌ಟಿಸಿ ನಿಯಮಾವಳಿ ಉಲ್ಲಂಘಿಸಿ ಪೂರ್ಣ ಟಿಕೆಟ್‌ ಕೊಟ್ಟು ಸೇವಾ ನ್ಯೂನತೆ ಮತ್ತು ಅನುಚಿತ ವ್ಯಾಪಾರ ಮಾಡಿರುವುದು ಸಾಬೀತಾಗಿದ್ದು, ದೂರುದಾರರಿಂದ ಹೆಚ್ಚುವರಿಯಾಗಿ ಪಡೆದ ₹50 ಅನ್ನು ಬಡ್ಡಿ ಸಮೇತ ನೀಡಬೇಕು. ಜೊತೆಗೆ ಮಾನಸಿಕ ಹಿಂಸೆ ಅನುಭವಿಸಿರುವುದರಿಂದ ವಿಶೇಷ ಪರಿಹಾರವಾಗಿ ₹2 ಸಾವಿರ, ಪ್ರಕರಣದ ಖರ್ಚಾಗಿ ₹1 ಸಾವಿರ ನೀಡಬೇಕು’ ಎಂದು ಆಯೋಗದ ಅಧ್ಯಕ್ಷ ಡಿ.ವೈ. ಬಸಾಪುರ, ಸದಸ್ಯರಾದ ಸಿ.ಎಚ್‌. ಸಮಿಉನ್ನಿಸಾ ಅಬ್ರಾರ್, ಕಮಲಕಿಶೋರ ಅವರನ್ನೊಳಗೊಂಡ ಪೀಠ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT