ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಭಾವೈಕ್ಯ, ಸಾಂಸ್ಕೃತಿಕ ವೈಭವ ಸಾರುವ ಹೋಳಿ

ಹಲಗೆ ವಾದನ, ಸೋಗಿನ ಬಂಡಿ ಇಲ್ಲಿನ ವಿಶೇಷ
Published 25 ಮಾರ್ಚ್ 2024, 8:14 IST
Last Updated 25 ಮಾರ್ಚ್ 2024, 8:14 IST
ಅಕ್ಷರ ಗಾತ್ರ

ಬಾಗಲಕೋಟೆ: ಹೋಳಿ ಎಂದೊಡನೆ ಕಣ್ಣ ಮುಂದೆ ಬರುವುದು ಕಾಮದಹನ ಮತ್ತು ಬಣ್ಣದೆರಚಾಟ. ಒಂದು ಹೆಜ್ಜೆ ಮುಂದೆ ಹೋಗಿ, ಸಾಂಸ್ಕೃತಿಕ ವೈಭವ, ಭಾವೈಕ್ಯತೆಯ ಸಮ್ಮಿಲನ ಮೈಗೂಡಿಸಿಕೊಂಡಿರುವುದರಿಂದ ಬಾಗಲಕೋಟೆಯ ಹೋಳಿ ಹಬ್ಬ ಭಿನ್ನವಾಗಿ ನಿಲ್ಲುತ್ತದೆ. ಅದೇ ಕಾರಣಕ್ಕಾಗಿ ರಾಜ್ಯದ ಗಮನ ಸೆಳೆದಿದೆ.

ಬಹಳಷ್ಟು ಕಡೆಗಳಲ್ಲಿ ಹುಣ್ಣಿಮೆಯ ದಿನ ಕಾಮದಹನ ಮಾಡಿ, ಮರು ದಿನ ಬಣ್ಣವಾಡಿದರೆ ಹಬ್ಬ ಮುಗಿದು ಹೋಗುತ್ತದೆ. ಬಾಗಲಕೋಟೆಯಲ್ಲಿ ಶಿವರಾತ್ರಿ ಅಮವಾಸ್ಯೆ ಮರುದಿನದಿಂದ ಶುರುವಾಗುವ ಸಂಭ್ರಮ ಕಾಮದಹನ ಮಾಡಿದ ಐದನೇ ದಿನಕ್ಕೆ ಕೊನೆಗೊಳ್ಳುತ್ತದೆ.

ಹಳೆಯ ಬಾಗಲಕೋಟೆಯ ಕಿಲ್ಲಾ, ವೆಂಕಟಪೇಟೆ, ಹೊಸಪೇಟೆ, ಜೈನ್‌ಪೇಟೆ, ಹಳೆಪೇಟೆಗಳಲ್ಲಿ ಬಣ್ಣದಾಟವು ಭರ್ಜರಿಯಾಗಿ ನಡೆಯುತ್ತದೆ. ಹೊಸದಾಗಿ ನಿರ್ಮಾಣವಾಗಿರುವ ವಿದ್ಯಾಗಿರಿ, ನವನಗರಗಳಲ್ಲಿಯೂ ಬಣ್ಣದಾಟ ಜೋರಾಗಿರುತ್ತದೆ. 

ಸರನಾಡಗೌಡ, ದೇಸಾಯಿ, ಕುಲಕರ್ಣಿ, ಶೆಟ್ಟರ್‌ ಹಾಗೂ ಖಾತೆದಾರರ ಮನೆತನಗಳವರು ಬಾಬುದಾರರಾಗಿದ್ದಾರೆ. ನಿಶಾಣೆ (ರೇಷ್ಮೆ ಬಟ್ಟೆ ಧ್ವಜ ಮಾದರಿ ಲಾಂಛನ), ತುರಾಯಿ ಹಲಗೆ (ಚಿನ್ನ, ಬೆಳ್ಳಿ ಲೇಪನ ಹಾಗೂ ಅಲಂಕೃತ ಹಲಗೆ) ಹೋಳಿಯಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಖಾತೆದಾರ (ದಲಿತ ಕುಟುಂಬ) ಮನೆಯಿಂದ ತಂದ ಕಿಚ್ಚಿನಿಂದಲೇ ಕಾಮದಹನವಾಗುತ್ತದೆ. ಮಧ್ಯರಾತ್ರಿಯಿಂದಲೇ ಹಲಗೆ ವಾದನ, ಬಣ್ಣದ ಎರಚಾಟದೊಂದಿಗೆ ಕಾಮ ದಹನಕ್ಕೆ ಸಿದ್ಧತೆಗಳು ನಡೆಯುತ್ತವೆ. ಕಟ್ಟಿಗೆ, ಕುಳ್ಳು ಇತ್ಯಾದಿಗಳನ್ನು ಒಟ್ಟಿ ದಹನಕ್ಕೆ ಸಿದ್ಧ ಮಾಡಿರಲಾಗುತ್ತದೆ. ಹುಬ್ಬಾ ನಕ್ಷತ್ರ ಗೋಚರಿಸುತ್ತಿದ್ದಂತೆ ಕಾಮದಹನ ಮಾಡಲಾಗುತ್ತದೆ. ಅಲ್ಲಿಂದ ನಗರದ ವಿವಿಧೆಡೆ ಕಾಮದಹನ ನಡೆಯುತ್ತದೆ.

ನಿಶಾನೆ, ಕಾಮನ ಜೋಡಿಸುವಿಕೆ, ಕಾಮನ ಚಿತ್ರ ತಯಾರಿಸುವುದು ಬಾರಕೇರ, ಉಪ್ಪಾರ, ಮಡಿವಾಳ, ಪತ್ತಾರ ಮನೆಗಳಲ್ಲಿ ನಡೆಯುತ್ತವೆ. ಎಲ್ಲ ಸಮುದಾಯವರನ್ನು ಒಳಗೊಂಡು ನಡೆಯುವುದರಿಂದ ಬಾಗಲಕೋಟೆಯ ಹೋಳಿ ಭಾವೈಕ್ಯದ ಹೋಳಿಯೂ ಆಗಿದೆ. ಹಂತಿ ಪದ ಹಾಡುವ ಸಂಪ್ರದಾಯವು ಇದ್ದು, ಅರ್ಥಗರ್ಭಿತವಾದ ಹಂತಿ ಪದಗಳನ್ನು ಹಿರಿಯರು ಹಾಡುತ್ತಾರೆ

ಬೇರೆ ಕಡೆಗಳಲ್ಲಿ ಬಣ್ಣದಾಟವನ್ನು ಬಣ್ಣ, ಬಣ್ಣ ಕಲಿಸಿದ ನೀರು ಎರಚಾಡಿದರೆ, ಇಲ್ಲಿ ಎತ್ತಿನ ಬಂಡಿ, ಟ್ರ್ಯಾಕ್ಟರ್‌ಗಳಲ್ಲಿ ಬ್ಯಾರೆಲ್‌ಗಳನ್ನು ನೀರು ತಂದು ಎದುರು ಬದರಾಗಿ ಎರಚಾಡುವ ಸಂಭ್ರಮ ಬೇರೆಲ್ಲಿಯೂ ಸಿಗುವುದಿಲ್ಲ. 

ಈ ಬಾರಿ ಮಾರ್ಚ್ 25 ರಿಂದ ಮೂರು ದಿನಗಳ ಬಣ್ಣದಾಟಕ್ಕೆ ಬಾಗಲಕೋಟೆ, ನವನಗರ ಸಿದ್ಧಗೊಂಡಿವೆ. ವಿದ್ಯಾಗಿರಿ, ಹಳೆಯ ಬಾಗಲಕೋಟೆಯಲ್ಲಿ ಯುವಕ, ಯುವತಿಯರು, ಮಕ್ಕಳಿಗಾಗಿ ರೇನ್‌ ಡ್ಯಾನ್ಸ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಬಣ್ಣದ ಟ್ರ್ಯಾಕ್ಟರ್‌ಗಳ ಆರ್ಭಟ ಶುರುವಾಗುತ್ತದೆ. 

ಹೋಳಿ ಹಬ್ಬಕೊಂದು ಹೋಳಿ ಹಬ್ಬ ಆಚರಣಾ ಸಮಿತಿ ರಚನೆ ಮಾಡಲಾಗಿದೆ. ಮಾರ್ಚ್ 25ಕ್ಕೆ ಕಿಲ್ಲಾ, ನವನಗರ, ವಿದ್ಯಾಗಿರಿ, 26ಕ್ಕೆ ಜೈನಪೇಟೆ, ಹಳಪೇಟೆ, ವೆಂಕಟಪೇಟೆ, 27ಕ್ಕೆ ಹೊಸಪೇಟೆ ಓಣಿಯಲ್ಲಿ ಬಣ್ಣದಾಟ ಆಡಲು ತೀರ್ಮಾನಿಸಲಾಗಿದೆ.

ಐವತ್ತಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ಬ್ಯಾರಲ್‌ಗಳನ್ನಿಟ್ಟುಕೊಂಡು ಅದರಲ್ಲಿ ಬಣ್ಣ ತುಂಬಿಕೊಂಡು ಎದುರು–ಬದುರಾಗುತ್ತಾರೆ. ಜತೆಗೆ ಜನರೂ ರಸ್ತೆ ಬದಿಗಳಲ್ಲಿ ಬ್ಯಾರೆಲ್‌ಗಳನ್ನು ಬಣ್ಣ ತುಂಬಿಟ್ಟುಕೊಂಡಿರುತ್ತಾರೆ. ಇವರ ಬಣ್ಣದ ಕಾದಾಟವನ್ನು ನೋಡಲು ಜನರು ರಸ್ತೆ ಬದಿ, ಮಾಳಿಗೆಗಳ ಮೇಲೆ ನಿಂತಿರುತ್ತಾರೆ. ಪರಸ್ಪರ ಬಣ್ಣ ಎರೆಚಾಡುತ್ತಾ, ಹಲಗೆ ಬಾರಿಸುತ್ತ ಸಾಗುತ್ತಲೇ ಇರುತ್ತಾರೆ.

ರೇನ್ ಡ್ಯಾನ್ಸ್‌ನಲ್ಲಿ ತೊಡಗಿರುವುದು (ಸಂಗ್ರಹ)
ರೇನ್ ಡ್ಯಾನ್ಸ್‌ನಲ್ಲಿ ತೊಡಗಿರುವುದು (ಸಂಗ್ರಹ)
ಕಾಮದಹನದ ದೃಶ್ಯ
ಕಾಮದಹನದ ದೃಶ್ಯ
ಸೋಗಿನ ಬಂಡಿಯೊಂದರ ದೃಶ್ಯ
ಸೋಗಿನ ಬಂಡಿಯೊಂದರ ದೃಶ್ಯ
ಸೋಗಿನ ಬಂಡಿ ಮೆರವಣಿಗೆ
ಹೋಳಿಹಬ್ಬದ ಇನ್ನೊಂದು ಆಕರ್ಷಣೆಯೆಂದರೆ ಸೋಗಿನ ಬಂಡಿಗಳು. ಐದು ದಿನಗಳ ಕಾಲ ಸೋಗಿನ ಬಂಡಿಗಳ ಮೆರವಣಿಗೆ ನಡೆಯುತ್ತದೆ. ರಾಮಾಯಣ ಮಹಾಭಾರತ ಪುರಾತಣ ಕಾಲದ ಪ್ರಸಿದ್ಧ ಮಹಾಪುರುಷರ ವೇಷಭೂಷಣ ಹಾಕಿ ರಾತ್ರಿ ಜಗಮಗಿಸುವ ಬೆಳಕಿನಲ್ಲಿ ನಡೆಯುವ ಪ್ರದರ್ಶನ ನೋಡುವುದೇ ಖುಷಿ. ಇತ್ತೀಚಿನ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟ ಸೇರಿದಂತೆ ಹಲವು ಘಟನಾವಳಿಗಳ ವೇಷಭೂಷಣಧಾರಿಗಳನ್ನು ಕಾಣಬಹುದಾಗಿದೆ. ದೇಶದ ಸಂಸ್ಕೃತಿ ಇತಿಹಾಸ ಹೋರಾಟವನ್ನು ನೆನಪಿಸುವ ಸೋಗಿನ ಬಂಡಿಯಲ್ಲಿನ ವೇಷಧಾರಿಗಳು ಭವ್ಯ ಪರಂಪರೆಯನ್ನು ಮುಂದುವರೆಸಲು ಪ್ರೇರಣೆ ನೀಡುತ್ತಾರೆ.  ಸೋಗಿನ ಬಂಡಿ ವೇಷಭೂಷಣ ಧರಿಸುವ ತಂಡಗಳಿಗೂ ಸ್ಪರ್ಧೆಯನ್ನಿಟ್ಟು ನಗದು ಬಹುಮಾನ ನೀಡಲಾಗುತ್ತದೆ.
ಹಲಗೆ ಮೇಳಗಳ ಸಂಭ್ರಮ
ಬಾಗಲಕೋಟೆಯಲ್ಲಿ ಶಿವರಾತ್ರಿ ಅಮವಾಸ್ಯೆ ಮರು ದಿನದಿಂದಲೇ ಪ್ರತಿ ಓಣಿಯಲ್ಲಿಯೂ ಸಂಜೆಯಾದರೆ ಸಾಕು ವಯಸ್ಸಿನ ಭೇದವಿಲ್ಲದೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಹಲಗೆ ವಾದನ ನಡೆಯುತ್ತದೆ. ಒಂದು ತಂಡ ರಚಿಸಿಕೊಂಡು ವಿವಿಧ ವಾದ್ಯಗಳೊಂದಿಗೆ ಹಲಗೆ ಬಾರಿಸುವುದು ಇಲ್ಲಿನ ವಿಶೇಷ. ತಂಡದಲ್ಲಿ ಎಂಟರಿಂದ ಹದಿನೈದು ಜನರಿರುತ್ತಾರೆ. ಒಬ್ಬರು ಹಲಗೆ ಬಾರಿಸಿದರೆ ಉಳಿದವರು ಡಗ್ಗಾ ಝಯಮರಿ ಚಳ್ಳಮ ಗೆಜ್ಜೆ ಲೇಝಿಮ್‌ ಕಣಿ ಬಾರಿಸುತ್ತಾ ಹೆಜ್ಜೆ ಹಾಕುತ್ತಾರೆ. ಹಲಗೆ ವಾದನದ ಏರಿಳಿತಕ್ಕೆ ತಕ್ಕಂತೆ ಝುಮರಿ ಚಳ್ಳಮ ಬಾರಿಸುತ್ತಾ ಹೆಜ್ಜೆ ಹಾಕುವುದನ್ನು ನೋಡುವುದೇ ಅಂದ. ಇದನ್ನು ಕೇಳುತ್ತಾ ಹೋಗುವವರು ಕೈ ಕಾಲುಗಳು ಅಲ್ಲಿಯೇ ವಾದನಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತವೆ. ವಿವಿಧ ಸಂಘ–ಸಂಸ್ಥೆಗಳು ಹಲಗೆ ಮೇಳಗಳನ್ನು ಆಯೋಜಿಸುವ ಮೂಲಕ ಹಲಗೆ ವಾದನದ ಕಲೆಯನ್ನು ಬೆಳೆಸುತ್ತಾ ಬಂದಿವೆ. ₹25 ಸಾವಿರದಿಂದ ₹50 ಸಾವಿರವರೆಗೆ ಬಹುಮಾನ ನೀಡಲಾಗುತ್ತದೆ. ಜಿಲ್ಲೆಯ ವಿವಿಧೆಡೆಯಿಂದ ಹತ್ತಿಪ್ಪತ್ತು ತಂಡಗಳು ಭಾಗವಹಿಸುತ್ತವೆ. ಸಂಜೆ ಆರಂಭವಾದ ಕಾರ್ಯಕ್ರಮವು ಮಧ್ಯರಾತ್ರಿಯವರೆಗೂ ನಡೆಯುತ್ತದೆ. ಅದನ್ನು ನೋಡಿ ಸಂಭ್ರಮಿಸಲು ಸಾವಿರಾರು ಜನರು ಸೇರಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT