ಮಹಾಲಿಂಗಪುರ: ಉತ್ತರ ಕರ್ನಾಟಕದ ಜನಪದ ಕಲೆಗಳಲ್ಲಿ ಅಗ್ರಸ್ಥಾನದಲ್ಲಿರುವ ಕರಡಿ ಮಜಲು ಕಲೆಯ ಪೂರಕ ವಾದ್ಯಗಳಾದ ಸೂರ್ಯ ವಾದ್ಯ ಹಾಗೂ ಚಂದ್ರ ವಾದ್ಯಗಳನ್ನು ಪುನರುಜ್ಜೀವನಗೊಳಿಸಲು ಸಂಗೀತ ನಾಟಕ ಅಕಾಡೆಮಿ ಮುಂದಾಗಿದೆ.
ದೇಶದಲ್ಲಿ ಸಾಂಪ್ರದಾಯಿಕ ಕಲೆ ಮತ್ತು ಕರಕುಶಲತೆ ಸಂರಕ್ಷಿಸುವ ಗುರಿಯನ್ನು ಹೊಂದಿರುವ ‘ಕಲಾ ದೀಕ್ಷಾ’ ಕಾರ್ಯಕ್ರಮದ ಅಡಿ ಅಕಾಡೆಮಿಯು ಗುರು-ಶಿಷ್ಯ ಪರಂಪರೆ ಮೂಲಕ ಮುಂದಿನ ಪೀಳಿಗೆಗೆ ಈ ಕಲೆಯನ್ನು ಹಸ್ತಾಂತರಿಸಲಿದೆ. ಪಟ್ಟಣದ ಗುಡಿ ಓಣಿಯಲ್ಲಿರುವ ಕರಡಿ ಅವರ ಮನೆಯಲ್ಲಿ ‘ಸೂರ್ಯ-ಚಂದ್ರ ವಾದ್ಯ’ಗಳ ತರಬೇತಿ ಕಾರ್ಯಕ್ರಮವನ್ನು ಕಳೆದ ಜೂನ್ ತಿಂಗಳಿನಿಂದ ನಡೆಸಲಾಗುತ್ತಿದೆ.
ರಾಷ್ಟ್ರಮಟ್ಟದಲ್ಲಿ ಖ್ಯಾತಿ: ಅಂದಾಜು 500 ವರ್ಷಗಳ ಇತಿಹಾಸವಿರುವ ಕರಡಿ ಮಜಲು ಕಲೆಯಲ್ಲಿ ಪಟ್ಟಣದ ಕರಡಿ ಮನೆತನದ 20ಕ್ಕೂ ಹೆಚ್ಚು ತಲೆಮಾರಿನ ಕಲಾವಿದರು ಪಳಗಿದ್ದಾರೆ. ಮರಿ ಕಲಾವಿದರಿಗೆ ಕಲೆಯ ದೀಕ್ಷೆಯನ್ನೂ ನೀಡಲಾಗುತ್ತಿದೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಇವರ ಕಲೆ ಹೆಸರಾಗಿದೆ. ಮೈಸೂರು ರಾಜ್ಯವಿದ್ದಾಗ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಈ ಕಲಾ ತಂಡ ಪ್ರಥಮ ರಾಷ್ಟ್ರಪತಿ, ಪ್ರಥಮ ಪ್ರಧಾನಿ ಸೇರಿದಂತೆ ನಾಡಿನ ಗಣ್ಯರ ಸಮ್ಮುಖದಲ್ಲಿ ಕಲಾ ಪ್ರದರ್ಶನ ನೀಡಿ ಪ್ರಶಂಸೆಗೆ ಪಾತ್ರವಾಗಿದೆ.
ಒಂದು ವರ್ಷದ ತರಬೇತಿ: ಸಂಗೀತ ನಾಟಕ ಅಕಾಡೆಮಿಯು ‘ಕಲಾ ದೀಕ್ಷಾ’ ಅಡಿ ರಾಜ್ಯದಲ್ಲಿ ತೊಗಲು ಗೊಂಬೆಯಾಟ ಹಾಗೂ ಕರಡಿ ಮಜಲು ಕಲೆಯ ಸೂರ್ಯ-ಚಂದ್ರ ವಾದ್ಯಗಳಿಗೆ ಮಹತ್ವ ನೀಡಿದೆ. ಹತ್ತು ವಿದ್ಯಾರ್ಥಿಗಳು ‘ಕಲಾ ದೀಕ್ಷಾ' ಅಡಿಯಲ್ಲಿ ಉದಯೋನ್ಮುಖ ಕಲಾವಿದರಾಗಿ ದಾಖಲಾಗಿ ತರಬೇತಿ ಪಡೆಯುತ್ತಿದ್ದಾರೆ. ಮಹಾಲಿಂಗಪ್ಪ ಕರಡಿ ಪ್ರಧಾನ ಗುರುಗಳಾಗಿ, ಚಂದ್ರಶೇಖರ ಕರಡಿ ಸಹಾಯಕ ಗುರುಗಳಾಗಿ ಒಂದು ವರ್ಷದ ತರಬೇತಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಪ್ರತಿದಿನ ಸಂಜೆ 7ರಿಂದ 8ರವರೆಗೆ ತರಬೇತಿ ನಡೆಯುತ್ತಿದೆ.
ಏನಿದು ವಾದ್ಯ?: ‘ವೃತ್ತಾಕಾರವಾಗಿರುವ ಸೂರ್ಯ ವಾದ್ಯವು 8ರಿಂದ10 ಅಂಗುಲ ವ್ಯಾಸವುಳ್ಳದ್ದಾಗಿದೆ. ಇದೇ ಮುಕುಟ ವಾದ್ಯ ಕೊಂಚ ಭಿನ್ನವಾಗಿ ಅರ್ಧಚಂದ್ರಾಕೃತಿಯಾಗಿದ್ದು ಚಂದ್ರ ವಾದ್ಯ ಎನ್ನಲಾಗುತ್ತದೆ. ಇವೆರಡು ವಾದ್ಯವನ್ನು ವಾದ್ಯಕಾರ ತನ್ನ ಹಣೆಯ ಮುಂಭಾಗಕ್ಕೆ ಬರುವಂತೆ ಧರಿಸಿ ಬಾರಿಸುವುದು ವಿಶೇಷ’ ಎಂದು ಮಹಾಲಿಂಗಪ್ಪ ಕರಡಿ ವಾದ್ಯದ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.