ಸೋಮವಾರ, ಆಗಸ್ಟ್ 15, 2022
27 °C

ಇದ್ದೂ ಇಲ್ಲದಂತಾದ ಜಮಖಂಡಿ ಬಸ್‌ ನಿಲ್ದಾಣ ಶೌಚಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಮಖಂಡಿ: ಇಲ್ಲಿನ ಜಮಖಂಡಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯ ದುಸ್ಥಿತಿ ತಲುಪಿದ್ದು, ಪ್ರಯಾಣಿಕರು ನಿಲ್ದಾಣದ ಆವರಣದಲ್ಲಿಯೇ ಶೌಚ ಮಾಡುವ ಪರಿಸ್ಥಿತಿ ಬಂದೊದಗಿದೆ.

ಲಾಕ್‌ಡೌನ್‌ ನಂತರ ಶೌಚಾಲಯ ನಿರ್ವಹಣೆಗೆ ಒಬ್ಬರನ್ನು ನೇಮಕ ಮಾಡಿದರು. ಅವರು ಯಾವುದೇ ಸ್ವಚ್ಛತೆಯನ್ನು ನಿರ್ವಹಿಸದ ಕಾರಣ ಪ್ರತಿನಿತ್ಯ ಪ್ರಯಾಣಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಸಿಂಗಾಪೂರ ಮಾದರಿ ಬಸ್ ನಿಲ್ದಾಣ ಉದ್ಘಾಟಣೆಯಾಗಿ ಮೂರು ವರ್ಷಗಳು ಕಳೆದಿವೆ. ಇಷ್ಟು ಕಡಿಮೆ ಅವಧಿಯಲ್ಲಿ ನಿಲ್ದಾಣದ ಎರಡು ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಒಂದು ಶೌಚಾಲಯ ನೀರು ಇಲ್ಲದಕ್ಕೆ ಕೀಲಿಯನ್ನು ಹಾಕಿದ್ದಾರೆ. ಎರಡೂ ಶೌಚಾಲಯಗಳನ್ನು ಪ್ರಯಾಣಿಕರ ಉಪಯೋಗಕ್ಕೆ ಬರುವಂತೆ ದುರಸ್ತಿ ಮಾಡಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಶೌಚಾಲಯಗಳ ಹೊರಗೂ ಮಲ-ಮೂತ್ರ ವಿಸರ್ಜನೆ ಎಗ್ಗಿಲ್ಲದೆ ನಡೆಯುತ್ತಿದೆ. ಮಹಿಳೆಯರು ಮೂತ್ರ ವಿಸರ್ಜನೆಗೆ ಹೋಗಬೇಕಾದರೆ ಪರದಾಡುವ ಸ್ಥಿತಿ ಇದೆ. ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಎಲ್ಲಿ ನೋಡಿದರಲ್ಲಿ ತ್ಯಾಜ್ಯ, ಪ್ಲಾಸ್ಟಿಕ್‍ಗಳು ಕಾಣುತ್ತಿವೆ. ಕಸದಬುಟ್ಟಿಯಲ್ಲಿ ಇರಬೇಕಾದ ಕಸ ನಿಲ್ದಾಣದಲ್ಲೇ ಹರಡಿರುತ್ತದೆ. ನಿಲ್ದಾಣದ ಗೋಡೆಗಳು ಎಲೆ, ಗುಟಕಾ ಕಲೆಗಳಿಂದ ಎದ್ದು ಕಾಣುತ್ತಿವೆ.

ಬಸ್‌ ನಿಲ್ದಾಣದಲ್ಲಿನ ಅವ್ಯವಸ್ಥೆ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಘಟಕ ವ್ಯವಸ್ಥಾಪಕ ಸಂಗಮೇಶ ಮಟೋಳಿ, ‘ಲಾಕ್ ಡೌನ್ ಇರುವುದರಿಂದ ಶೌಚಾಲಯದ ಪೈಪ್ ಗಳು ಬ್ಲಾಕ್ ಆಗಿವೆ. ಇನ್ನೆರಡು ದಿನಗಳಲ್ಲಿ ರಿಪೇರಿ ಮಾಡಿಸಿ ಪ್ರಾರಂಭ ಮಾಡಲಾಗುತ್ತದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು