ರಬಕವಿ ಬನಹಟ್ಟಿ: ಬನಹಟ್ಟಿಯ ಕಾಡಸಿದ್ಧೇಶ್ವರರು ಮೂಲತಃ ವಚನಕಾರರು. ಅದರಲ್ಲೂ ಬೆಡಗಿನ ವಚನಗಳ ವಚನಕಾರ. ಕಾಡಸಿದ್ಧೇಶ್ವರರು ಬನಹಟ್ಟಿ ನಗರದ ಆರಾಧ್ಯ ದೈವರು. ಪ್ರತಿವರ್ಷ ಅನಂತನ ಹುಣ್ಣಿಮೆಯ ನಂತರ ಬರುವ ಮೊದಲ ಮಂಗಳವಾರದಂದು ಕಾಡಸಿದ್ಧೇಶ್ವರರ ಜಾತ್ರೆ ನಡೆಯುತ್ತದೆ.
ಜಾತ್ರೆಯ ಸಂದರ್ಭದಲ್ಲಿ ಸಂಜೆ ನಡೆಯುವ ರಥೋತ್ಸವವನ್ನು ನೋಡುವುದೇ ಒಂದು ಹಬ್ಬ. ಜಾತ್ರೆಯ ದಿನದಿಂದ ಹೂಮಾಲೆ, ದೀಪಾಲಂಕಾರ, ಕಂಠ ಮಾಲೆ ಮತ್ತು ಮಧ್ಯದಲ್ಲಿ ಪ್ರತಿಷ‍್ಠಾಪನೆಗೊಂಡ ಕಾಡಸಿದ್ಧೇಶ್ವರರ ಬೆಳ್ಳಿಯ ವಿಗ್ರಹದ ರಥೋತ್ಸವವನ್ನು ನೋಡಲು ಸುತ್ತ ಮುತ್ತಲಿನ ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ಬರುರುತ್ತಾರೆ. ಬಹುಶಃ ಉತ್ತರ ಕರ್ನಾಟಕದ ಭಾಗದಲ್ಲಿಯೇ ಇಷ್ಟೊಂದು ಪುರಾತನವಾದ ರಥ ಮತ್ತೊಂದು ಇಲ್ಲ. ಈ ರಥಕ್ಕೆ ಈಗ 154 ವರ್ಷಗಳಾಗಿವೆ. ಈ ರಥ ಬಹಳಷ್ಟು ಇತಿಹಾಸವನ್ನು ತಿಳಿಸುತ್ತದೆ.
ಈ ರಥವನ್ನು ಬನಹಟ್ಟಿಯ ಕಾಡಸಿದ್ಧೇಶ್ವರರ ರಥೋತ್ಸವಕ್ಕೆ ನೀಡಿದವರು ಜಮಖಂಡಿಯ ಸಂಸ್ಥಾನದ ಪರಶುರಾಮ ಶಂಕರರಾವ ಪಟವರ್ಧನ ಮಹಾರಾಜರು. ಕಾಡಸಿದ್ಧೇಶ್ವರರ ಜಾತ್ರೆಗೆ ರಥದ ಕೊರತೆ ಇದ್ದಾಗ, ಇಲ್ಲಿಯ ಮಂಗಳವಾರ ಪೇಟೆಯ ದೈವ ಮಂಡಳಿಯ ಹಿರಿಯರು ಜಮಖಂಡಿಯ ಮಹಾರಾಜರಿಗೆ ರಥವನ್ನು ನೀಡುವಂತೆ ಮನವಿ ಮಾಡಿಕೊಂಡರು. ಬನಹಟ್ಟಿಯ ಹಿರಿಯರ ಮನವಿಯನ್ನು ಪರಿಗಣಿಸಿದ ಪಟವರ್ಧನ ಮಹಾರಾಜರು ತಮ್ಮ ರಾಜವಾಡೆಯಲ್ಲಿರುವ ಸರ್ಕಾರದ ಆಸ್ತಿಯಾಗಿದ್ದ, ಬಹುಮೂಲ್ಯವಾದ ರಥವನ್ನು ನೀಡಿದರು.
ಈ ರಥವನ್ನು ಬನಹಟ್ಟಿಗೆ 1949 ರಲ್ಲಿ ತರಲಾಯಿತು. ರಥವನ್ನು ಪಡೆದುಕೊಂಡ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಿ.ಸಿ. ಅಬಕಾರ ಜಮಖಂಡಿ ಮಹರಾಜರಿಗೆ ನವಯುಗ ಪತ್ರಿಕೆಯ ಮೂಲಕ ತಮ್ಮ ಕೃತಜ್ಞತೆ ಸಲ್ಲಿಸುತ್ತ, ‘ತಮ್ಮ ರಾಜಕೀಯ ಆಸ್ತಿಯಾದ, ರಾಜವಾಡೆಯ ಭವ್ಯವಾದ ಮತ್ತು ಸುಂದರವಾದ ಸೀಸವೆ ಕಟ್ಟಿಗೆಯಿಂದ ನಿರ್ಮಾಣ ಮಾಡಲಾದ ಅಂದಾಜು 80 ವರ್ಷಗಳಷ್ಟು ಹಳೆಯದಾದ ರಥ ಎಂದು ಬರೆಯುತ್ತಾರೆ. ಈ ರಥ ಬನಹಟ್ಟಿಗೆ ಬಂದದ್ದು 1949 ರಲ್ಲಿ. ಅಲ್ಲಿಂದ ಮತ್ತೆ ಹಿಂದೆ 80 ವರ್ಷಗಳಷ್ಟು ಹಳೆಯದಾಗಿದೆ. ಅಂದರೆ ಈ ರಥಕ್ಕೆ ಸದ್ಯ 154 ವರ್ಷಗಳು ಎಂಬುದು ವಿಶೇಷ. ರಥವು ಜಮಖಂಡಿಯ ರಾಜವಾಡೆಯಲ್ಲಿದ್ದಾಗ ಗಣೇಶೋತ್ಸವ ಸಂದರ್ಭದಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಬಳಸುತ್ತಿದ್ದರು. ರಥವನ್ನು ಜಮಖಂಡಿಯಿಂದ ಬನಹಟ್ಟಿಗೆ ತೆಗೆದುಕೊಂಡು ಬರುವ ಸಂದರ್ಭದಲ್ಲಿ ದಟ್ಟ ಕಾಡಿನ ಮಧ್ಯದಲ್ಲಿ ಮತ್ತು ದಾರಿ ಸುತ್ತ ಮುತ್ತಲಿನ ಗಿಡ ಮರಗಳನ್ನು ಕಡಿದು ತರಲಾಗಿತ್ತು ಎನ್ನುತ್ತಾರೆ ಮಂಗಳವಾರ ಪೇಟೆಯ ದೈವ ಮಂಡಳಿಯ ಅಧ್ಯಕ್ಷ ಶ್ರೀಶೈಲ ಧಬಾಡಿ. ಬನಹಟ್ಟಿಯಲ್ಲಿರುವ ಬೃಹತ್ ರಥ ಬೇರೆ ಯಾವುದೆ ಪ್ರದೇಶದಲ್ಲಿ ಕಂಡು ಬರುವುದಿಲ್ಲ ಎಂಬುದು ವಿಶೇಷವಾಗಿದೆ.
ಇತಿಹಾಸ ತಿಳಿಸುವ ರಥ ರಥವನ್ನು 74 ವರ್ಷಗಳಿಂದ ರಥೋತ್ಸವವಕ್ಕೆ ಮಾತ್ರ ಬಳಸುತ್ತಿದ್ದು ಮಂಗಳವಾರ ಪೇಟೆಯ ದೈವ ಮಂಡಳಿಯ ಸದಸ್ಯರು ರಥವನ್ನು ಬಹಳಷ್ಟು ಉತ್ತಮ ರೀತಿಯಲ್ಲಿ ಇದುವರೆಗೆ ಕಾಪಾಡಿಕೊಂಡು ಬಂದಿದ್ದಾರೆ. ಈ ರಥದ ಬಗ್ಗೆ ತಿಳಿದುಕೊಳ್ಳುವವರು ಒಂದೂವರೆ ಶತಮಾನದಷ್ಟು ಹಳೆಯದಾದ ಇತಿಹಾಸದ ಜ್ಞಾನ ಪಡೆದುಕೊಳ್ಳಬಹುದಾಗಿದೆ. ಜಾತ್ರೆಯ ಜೊತೆಗೆ ರಥದ ಕುರಿತು ಇನ್ನಷ್ಟು ಐತಿಹಾಸಿಕ ಘಟನೆಗಳನ್ನು ತಿಳಿದುಕೊಳ್ಳಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.