ಶನಿವಾರ, ಜುಲೈ 24, 2021
26 °C
ಮಹಾರಾಷ್ಟ್ರದಲ್ಲಿ ಹೆಚ್ಚಿದ ಮಳೆ: ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ

ಜಮಖಂಡಿ: ಮೈದುಂಬಿದ ಕೃಷ್ಣೆ

ಆರ್.ಎಸ್.ಹೊನಗೌಡ Updated:

ಅಕ್ಷರ ಗಾತ್ರ : | |

Prajavani

ಜಮಖಂಡಿ: 10 ತಿಂಗಳ ಹಿಂದಷ್ಟೇ ಕೃಷ್ಣೆಯಲ್ಲಿ ತಲೆದೋರಿದ್ದ ಪ್ರವಾಹದಿಂದ ತಾಲ್ಲೂಕಿನ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಈ ನಡುವೆ ಕೋವಿಡ್–19 ಲಾಕ್‌ಡೌನ್ ಸಂಕಷ್ಟ ಕೂಡ ಹೈರಾಣಾಗಿಸಿತ್ತು. ಇದೀಗ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.

ತಾಲ್ಲೂಕಿನಲ್ಲಿ ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದೆ. ನದಿ ತೀರದ 40 ಗ್ರಾಮಗಳ ಜನರಿಗೆ ಪ್ರವಾಹದ ಆತಂಕ ಆರಂಭವಾಗಿದೆ. ಹಿಂದಿನ ವರ್ಷಗಳಲ್ಲಿ ಜುಲೈ ಕೊನೆಯ ವಾರದಲ್ಲಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿತ್ತು. ಈ ಬಾರಿ ಒಂದು ತಿಂಗಳು ಮುಂಚೆಯೇ ನೀರಿನ ಪ್ರಮಾಣ ಏರಿಕೆಯಾಗಿದೆ. ಇದು ರೈತರಲ್ಲಿ ಆತಂಕ ಸೃಷ್ಟಿಸಿದೆ. ದಕ್ಷಿಣ ಮಹಾರಾಷ್ಟ್ರ ಭಾಗದಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ಕೊಳದಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಇನ್ನೂ ಚೇತರಿಸಿಕೊಂಡಿಲ್ಲ: ಕಳೆದ ವರ್ಷದ ಪ್ರವಾಹದ ವೇಳೆ ಆದ ನಷ್ಟಕ್ಕೆ ಕೆಲವು ರೈತರಿಗೆ ಇನ್ನೂ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ. ಕೆಲವರ ಮನೆಗಳ ದುರಸ್ತಿ ಮುಗಿದಿಲ್ಲ, ಬೆಳೆದ ಬೆಳೆ ನೆಲಕಚ್ಚಿದ್ದು ಮರಳಿ ಸಾಲ ಮಾಡಿ ರೈತರು ಬಿತ್ತನೆ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತೆ ಪ್ರವಾಹದ ಬರೆ‌ ಬಿದ್ದರೆ ರೈತರಿಗೆ ಗಣನೀಯ ಹಾನಿಯಾಗಲಿದೆ.

ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಾ ಹೋದರೆ ಇನ್ನೊಂದು ವಾರದಲ್ಲಿ ತಾಲ್ಲೂಕಿನ ಮುತ್ತೂರು, ಕಂಕಣವಾಡಿ ನಡುಗಡ್ಡೆಗಳಾಗುತ್ತವೆ. ಎರಡೂ ಕಡೆ 70-80 ಕುಟುಂಬಗಳಿದ್ದು, 200 ಕ್ಕೂ ಅಧಿಕ ಜಾನುವಾರಗಳಿವೆ. ಈಗಲೇ ಮುಂಜಾಗ್ರತೆ ಕ್ರಮ ತೆಗೆದುಕೊಂಡರೆ ಸಮಸ್ಯೆ ಆಗುವುದಿಲ್ಲ.

ಸ್ಥಳೀಯರು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರವಾಗಬೇಕಾದರೆ ಅಲ್ಲಿ ಯಾವುದೇ ಮೂಲ ಸೌಕರ್ಯ ಇಲ್ಲ. ಮುಳ್ಳು ಕಂಟಿಗಳು ಬೆಳೆದಿವೆ. ಕುಡಿಯಲು ನೀರು, ಸಂಚರಿಸಲು ರಸ್ತೆ, ವಾಸಿಸಲು ಮನೆ, ಶೆಡ್‌ಗಳು ಇಲ್ಲದಿರುವುದರಿಂದ ಸ್ಥಳಾಂತರದ ಸಮಸ್ಯೆಯೇ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. 

ಸಮೀಪದ ಹಿಪ್ಪರಗಿ ಜಲಾಶಯದ ಒಟ್ಟು ಎತ್ತರ 524 ಅಡಿಗಳಿದ್ದು, ಜಲಾಶಯದಲ್ಲಿ 58,000 ಸಾವಿರ ಕ್ಯೂಸೆಕ್ ನೀರು ಒಳಹರಿವು ಮತ್ತು ಅಷ್ಟೇ ಪ್ರಮಾಣದ ಹೊರಹರಿವು ಇದೆ. ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವುದರಿಂದ ನೀರಿನ ಮಟ್ಟ ಹೆಚ್ಚಳವಾಗಬಹುದು ಎಂದು ಹಿಪ್ಪರಗಿ ಜಲಾಶಯದ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು