ಶುಕ್ರವಾರ, ಆಗಸ್ಟ್ 12, 2022
23 °C
ಆರಂಭವಾಗದ ಜಿಲ್ಲಾ ಉಸ್ತುವಾರಿ ಸಚಿವ ಕಚೇರಿ; ಜನರ ಪರದಾಟ

ಬಾಗಲಕೋಟೆ:ಕಚೇರಿಯೇ ಇಲ್ಲ, ಸಚಿವರನ್ನು ಭೇಟಿಯಾಗುವುದೆಲ್ಲಿ?

ಬಸವರಾಜ ಹವಾಲ್ದಾರ‌ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಗದಗ ಜಿಲ್ಲೆಯ ಸಿ.ಸಿ. ಪಾಟೀಲ ಅವರು ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಸಮಸ್ಯೆಗಳನ್ನು ಹೇಳಿಕೊಳ್ಳಲು, ಮನವಿ ನೀಡಲು ಅವರನ್ನು ಎಲ್ಲಿ ಭೇಟಿಯಾಗಬೇಕು ಎಂಬ ಪ್ರಶ್ನೆ ಜಿಲ್ಲೆಯ ಸಾರ್ವಜನಿಕರು, ಸಂಘಟನೆಗಳವರನ್ನು ಕಾಡುತ್ತಿದೆ.

ಸಚಿವ ಸಿ.ಸಿ. ಪಾಟೀಲ ಅವರು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಏಳೆಂಟು ತಿಂಗಳೇ ಕಳೆದಿವೆ. ಆದರೆ, ಉಸ್ತುವಾರಿ ಸಚಿವರ ಕಚೇರಿ ಬಾಗಲಕೋಟೆಯಲ್ಲಿ ಆರಂಭಿಸಿಲ್ಲ. ಹೀಗಾಗಿ ಅವರಿಗೆ ಮನವಿ ಕೊಡಲು, ಭೇಟಿಯಾಗಲು ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆ ಎದುರಾಗಿದೆ.

ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಜಿಲ್ಲಾಡಳಿತ ಭವನದ ಮೊದಲ ಮಹಡಿಯಲ್ಲಿ ಕಚೇರಿ ಹೊಂದಿದ್ದರು. ಕಾರಜೋಳ ಅವರು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಅವರ ಹೆಸರಿನ ಫಲಕ ತೆಗೆಯಲಾಗಿದ್ದು, ಕಚೇರಿಗೆ ಬೀಗ ಜಡಿಯಲಾಗಿದೆ. 

ಜಿಲ್ಲಾಡಳಿತ ಭವನದಲ್ಲಿದ್ದ ಉಸ್ತುವಾರಿ ಸಚಿವರ ಕಚೇರಿಗೆ ಆಗಾಗ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡುತ್ತಿದ್ದರು. ಸಾರ್ವಜನಿಕರೂ ಭೇಟಿ ನೀಡಿ ಮನವಿ ಸಲ್ಲಿಸುತ್ತಿದ್ದು. ಅವರಿಲ್ಲದಿದ್ದರೂ, ಅಲ್ಲಿ ಸಿಬ್ಬಂದಿ ಇರುತ್ತಿದ್ದರು. ಅವರಿಗೆ ಮನವಿ ನೀಡಿದರೂ, ಅದು ನಂತರ ಸಚಿವರ ಗಮನಕ್ಕೆ ಬರುತ್ತಿತ್ತು.

ಸಚಿವ ಸಿ.ಸಿ. ಪಾಟೀಲ ಅವರು ಸಭೆ, ಸಮಾರಂಭಗಳಿದ್ದಾಗ ಮಾತ್ರ ಜಿಲ್ಲೆಗೆ ಬರುತ್ತಾರೆ. ಆಗ ಅವರ ಸುತ್ತಲೂ ಜನಪ್ರತಿನಿಧಿಗಳು, ಅಧಿಕಾರಿಗಳು, ಪಕ್ಷದ ಮುಖಂಡರೇ ಸುತ್ತಿಕೊಂಡಿರುತ್ತಾರೆ. ಜನ ಸಾಮಾನ್ಯರ ಭೇಟಿ ಸಾಧ್ಯವಾಗುವುದೇ ಇಲ್ಲ ಎನ್ನುವುದು ಸಾರ್ವಜನಿಕರ ದೂರು.

ಬಿಜೆಪಿ ಸರ್ಕಾರದಲ್ಲಿ ಒಂದು ಜಿಲ್ಲೆಯ ಸಚಿವರನ್ನು, ಇನ್ನೊಂದು ಜಿಲ್ಲೆಗೆ ಸಚಿವರನ್ನಾಗಿ ಮಾಡಲಾಗಿದೆ. ಆದರೆ, ಅವರು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಕ್ಕಿಂತ ಸಭೆ, ಸಮಾರಂಭಗಳಿಗೆ ಸೀಮಿತರಾಗಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತವೆ.

‘ಜಿಲ್ಲೆಯ ಹಲವಾರು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರಬೇಕಾಗುತ್ತದೆ. ಅದಕ್ಕಾಗಿ ಅವರನ್ನು ಭೇಟಿಯಾಗಬೇಕಾಗುತ್ತದೆ. ಆದರೆ, ಅವರ ಕಚೇರಿ ಇಲ್ಲದ್ದರಿಂದ ಸಾಧ್ಯವಾಗುತ್ತಿಲ್ಲ. ಜನಸಾಮಾನ್ಯರಿಗೆ ಗದಗ, ಬೆಂಗಳೂರಿಗೆ ಹೋಗಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ ಆಮ್‌ ಆದ್ಮಿ ಪಾರ್ಟಿಯ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಬದ್ನೂರ.

*
ಬಾಗಲಕೋಟೆ ಜಿಲ್ಲೆ ನಿರ್ಲಕ್ಷಕ್ಕೆ ಒಳಗಾಗಿದೆ. ಸಚಿವರು ಕಚೇರಿ ತೆರೆಯದಿರುವುದು ಸರಿಯಲ್ಲ. ಜಿಲ್ಲೆಯ ಕೆಲ ಜನಪ್ರತಿನಿಧಿಗಳು ಇದಕ್ಕೆ ಅವಕಾಶ ನೀಡುವುದಿಲ್ಲ.
-ರಮೇಶ ಬದ್ನೂರ, ಅಧ್ಯಕ್ಷ, ಜಿಲ್ಲಾ ಘಟಕ, ಎಎಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು