ಶುಕ್ರವಾರ, ಫೆಬ್ರವರಿ 26, 2021
32 °C
ಸರ್ಕಾರಿ ಗೌರವ ಸಲ್ಲಿಕೆ, ವಿಧಿ ವಿಧಾನಗಳೊಂದಿಗೆ ಕ್ರಿಯಾ ಸಮಾಧಿ

ಭಕ್ತರ ಪಾಲಿನ ಬೆರಗು ಮಾತೆ ಮಹಾದೇವಿ ಬಯಲಲ್ಲಿ ಲೀನ

ವೆಂಕಟೇಶ್ ಜಿ.ಎಚ್ Updated:

ಅಕ್ಷರ ಗಾತ್ರ : | |

ಕೂಡಲಸಂಗಮ (ಬಾಗಲಕೋಟೆ): ಲಿಂಗೈಕ್ಯ ಮಾತೆ ಮಹಾದೇವಿ ಅವರ ಅಂತಿಮ ಕ್ರಿಯಾವಿಧಿ ಶನಿವಾರ ಸಂಜೆ ಇಲ್ಲಿನ ಬಸವಧರ್ಮ ಪೀಠದ ಶರಣಲೋಕದ ಸಮಾಧಿ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಪ್ರತಿಜ್ಞಾವಿಧಿಯೊಂದಿಗೆ ಕ್ರಿಯಾ ಸಮಾಧಿ
‘ನೀವು ತೋರಿಸಿಕೊಟ್ಟ ದಾರಿಯಲ್ಲಿಯೇ ಲಿಂಗಾಯತ ಸ್ವತಂತ್ರ ಧರ್ಮದ ಮನ್ನಣೆಗಾಗಿ ಹೋರಾಟ ಮುಂದುವರೆಸಲಿದ್ದೇವೆ. ಅದು ನಮ್ಮ ಬದುಕಿನ ಬದ್ಧತೆ’ ಎಂದು ಕ್ರಿಯಾವಿಧಿಗೂ ಮುನ್ನ ರಾಷ್ಟ್ರೀಯ ಬಸವದಳ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯರು ಪ್ರತಿಜ್ಞಾವಿಧಿ ಸ್ವೀಕರಿಸಿದರು. 

ಬಸವ ಜಂಗಮ ಸಂಪ್ರದಾಯದ ಪ್ರಕಾರ ಕೂಡಲಸಂಗಮಪೀಠದ ಮಹಾದೇಶ್ವರ ಸ್ವಾಮೀಜಿ ಅಂತಿಮ ಕ್ರಿಯಾವಿಧಿ–ವಿಧಾನ ನಡೆಸಿಕೊಟ್ಟರು. ಇದರೊಂದಿಗೆ ಬಸವಪರಂಪರೆಯ ಮೊದಲ ಮಹಿಳಾ ಜಗದ್ಗುರು, ಭಕ್ತರ ಪಾಲಿನ ಮಹಾಬೆರಗು ಬಯಲಿನಲ್ಲಿ ಲೀನವಾದರು.

ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣರು, ಗದಗ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ, ಬೀದರ್‌ನ ಭಾಲ್ಕಿಯ ಬಸವಲಿಂಗ ಪಟ್ಟದೇವರು, ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಇಳಕಲ್‌ನ ಗುರುಮಹಾಂತ ಸ್ವಾಮೀಜಿ ನೇತೃತ್ವದಲ್ಲಿ ಕ್ರಿಯಾವಿಧಿ ನೆರವೇರಿತು. 

ಇದಕ್ಕೂ ಮುನ್ನ ಪೀಠದ ಉತ್ತರಾಧಿಕಾರಿ ಮಾತೆ ಗಂಗಾಂಬಿಕಾ ಅವರಿಗೆ ಶಿವಮೂರ್ತಿ ಶರಣರು ರುದ್ರಾಕ್ಷಿಯ ಕಿರೀಟ ಹಾಕಿ, ಷಟ್‌ಸ್ಥಲಧ್ವಜ ನೀಡಿ ಪೀಠದ ಅಧಿಕಾರ ವಹಿಸಿಕೊಟ್ಟರು. ನಂತರ ಗೃಹ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಸರ್ಕಾರಿ ಗೌರವ ಸಲ್ಲಿಸಲಾಯಿತು. ಪೊಲೀಸರು ಮೂರು ಸುತ್ತು ಕುಶಾಲ ತೋಪು ಹಾರಿಸಿದರು.  

ಅಂತಿಮ ದರ್ಶನಕ್ಕೆ ಅವಕಾಶ
ಆಶ್ರಮದ ಮಹಾಮನೆಯ ಪಕ್ಕದ ಬಯಲಿನಲ್ಲಿ ವೇದಿಕೆ ನಿರ್ಮಿಸಿ, ಪೆಂಡಾಲ್ ಹಾಕಿ ಅಂತಿಮದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ರಾಜ್ಯದ ವಿವಿಧೆಡೆ ಹಾಗೂ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಿಂದ ಬಂದಿದ್ದ ಅನುಯಾಯಿಗಳು ಮುಂಜಾನೆಯಿಂದಲೇ ಸಾಲುಗಟ್ಟಿದ್ದರು. 

ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ, ಮುಂಡರಗಿಯ ನಿಜಗುಣಾನಂದ ಸ್ವಾಮೀಜಿ, ಮಹಾರಾಷ್ಟ್ರದ ಕನ್ಹೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ನಿಡುಮಾಮಿಡಿ ವೀರಭದ್ರಚೆನ್ನಮಲ್ಲ ಸ್ವಾಮೀಜಿ, ಬೀದರ್‌ನ ಬಸವಪ್ರತಿಷ್ಠಾನದ ಅಕ್ಕ ಅನ್ನಪೂರ್ಣಾ, ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮನಗುಂಡಿ ಮಠದ ಬಸವಾನಂದ ಸ್ವಾಮೀಜಿ ಅಂತಿಮ ದರ್ಶನ ಪಡೆದರು.

ಸಚಿವ ಶಿವಾನಂದ ಪಾಟೀಲ, ಸಂಸದರಾದ ಪಿ.ಸಿ.ಗದ್ದಿಗೌಡರ, ಬೀದರ್‌ನ ಭಗವಂತ ಖೂಬಾ, ಮೈಸೂರು ಮಿನರಲ್ಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ, ವೀರಣ್ಣ ಮತ್ತಿಕಟ್ಟಿ, ಕೆ.ಶರಣಪ್ಪ, ಜಾಗತಿಕ ಲಿಂಗಾಯತ ಮಹಾಸಭಾದ ಶಿವಾನಂದ ಜಾಮದಾರ, ಚಿಂತಕ ರಂಜಾನ್ ದರ್ಗಾ ಪಾಲ್ಗೊಂಡಿದ್ದರು.  


ಅಂತಿಮ ಕ್ರಿಯಾವಿಧಿ ವೇಳೆ ಭಾವಹಿಸಿದ್ದ ಬಸವದಳ ಸದಸ್ಯರು

ಕ್ರಿಯಾ ಸಮಾಧಿ
ಕ್ರಿಯಾ ಸಮಾಧಿ ಸ್ಥಳದಲ್ಲಿ ನಿರ್ಮಿಸಿದ್ದ 6 ಅಡಿ ಎತ್ತರ, 5 ಅಡಿ ಅಗಲದ ಇಷ್ಟಲಿಂಗ ಮಾದರಿಯ ಗೋಲದೊಳಗೆ ದೇಹ ಇಟ್ಟು, ತ್ಯಾಗಾಂಗ, ಭೋಗಾಂಗ, ಯೋಗಾಂಗಕ್ಕೆ ಅನುಗುಣವಾಗಿ ಷಟ್ಕೋನಾಕಾರದಲ್ಲಿ 12 ಸಾವಿರ ವಿಭೂತಿಗಳನ್ನು ಜೋಡಣೆ ಮಾಡಲಾಯಿತು.

ಲಿಂಗಾಯತ ಧರ್ಮದ ಸಂವಿಧಾನಕ್ಕೆ ಅನುಗುಣವಾಗಿ ಐಕ್ಯ, ಶರಣ, ಪ್ರಾಣಲಿಂಗಿ, ಪ್ರಸಾದಿ, ಮಹೇಶ, ಭಕ್ತ ಹೀಗೆ ಷಟಸ್ಥಲಗಳ ಸೂಚಕವಾಗಿ ವಿಭೂತಿ ಧಾರಣೆ ನಡೆಯಿತು. ಸೇರಿದ್ದ ಶ್ರೀಗಳಿಂದ ಅಂತಿಮ ಪ್ರಾರ್ಥನೆ ನಡೆಯಿತು.

ಮಾತೆ ಮಹಾದೇವಿ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಗುರುವಾರ ಲಿಂಗೈಕ್ಯರಾಗಿದ್ದರು.


ಅಂತಿಮ ದರ್ಶನ ಪಡೆದ ಜನ

ಬಿಜೆಪಿ ಮುಖಂಡರೇ ಹೆಚ್ಚು ಭಾಗಿ..
ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಲಿಂಗಾಯತ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಸಚಿವರಾದ ಶರಣಪ್ರಕಾಶ ಪಾಟೀಲ, ಬಸವರಾಜ ರಾಯರಡ್ಡಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಗೈರು ಹಾಜರಿ ಎದ್ದುಕಂಡಿತು. ಮಾಜಿ ಸಚಿವ ವಿನಯ ಕುಲಕರ್ಣಿ, ಆಳಂದದ ಮಾಜಿ ಶಾಸಕ ಬಿ.ಆರ್.ಪಾಟೀಲ ಬಂದಿದ್ದರು. ವಿಶೇಷವೆಂದರೆ ಕಾಂಗ್ರೆಸ್‌ಗಿಂದ ಬಿಜೆಪಿ ಮುಖಂಡರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಎಲ್‌ಇಡಿ ಪರದೆಯಲ್ಲಿ ವೀಕ್ಷಣೆ..
ಸಮಾಧಿ ಸ್ಥಳಕ್ಕೆ ತೆರಳುವ ಜಾಗ ಇಕ್ಕಟ್ಟಾಗಿದ್ದ ಕಾರಣ ಅಂತಿಮ ಕ್ರಿಯಾವಿಧಿ ವೇಳೆ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಪೊಲೀಸ್ ಬಿಗಿ ಭದ್ರತೆ ಕಲ್ಪಿಸಿ ಪಾಸ್ ಇದ್ದವರನ್ನು ಮಾತ್ರ ಒಳಗೆ ಬಿಡಲಾಯಿತು. ನಾಲ್ಕು ಕಡೆ ಎಲ್ಇಡಿ ಪರದೆ ಅಳವಡಿಸಿ ಅಲ್ಲಿಂದ ಕ್ರಿಯಾ ಸಮಾಧಿಯ ವಿಧಿ–ವಿಧಾನಗಳನ್ನು ವೀಕ್ಷಿಸುವ ಅವಕಾಶ ಸಾರ್ವಜನಿಕರಿಗೆ ಕಲ್ಪಿಸಲಾಗಿತ್ತು.

ಇವನ್ನೂ ಓದಿ...
ವೈದ್ಯೆ ಆಗಬೇಕಿದ್ದ ರತ್ನಾ, ಮಾತೆ ಮಹಾದೇವಿಯಾದರು​
ಅನುಭಾವಪೀಠದ ಅಸೀಮ ಮಾತೆ
ಮಾತೆ ಮಹಾದೇವಿ ಬರಹ: ‘ದೇವರೆಂಬ ಅದ್ಭುತ ಶಕ್ತಿ’
ಮಾತೆ ಮಹಾದೇವಿ ಬರಹ: ‘ಆತ್ಮಾರ್ಪಣೆ ಅತ್ಯಂತ ಶ್ರೇಷ್ಠ’
ಮಾತೆ ಮಹಾದೇವಿ ಬರಹ: ಜೀವನ ಶೃಂಗರಿಸುವುದು ಹೇಗೆ?​
ಬಸವಕಲ್ಯಾಣಕ್ಕೆ ಹೊಸ ಕಳೆ ತಂದ ಮಾತಾಜಿ​
ಲಿಂಗಾಯತ ಸ್ವತಂತ್ರ ಧರ್ಮದ ಕಿಡಿ ಹೊತ್ತಿಸಿದ ಮಾತೆ​

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು