ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್: ಛಾಯಾಗ್ರಾಹಕರಿಗೆ ಸಂಕಷ್ಟ, ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ

ತಳ್ಳುವ ಗಾಡಿಯಲ್ಲಿ ತರಕಾರಿ ಮಾರುತ್ತಿರುವ ಲ್ಯಾಬ್ ಮಾಲೀಕ!
Last Updated 23 ಮೇ 2021, 19:30 IST
ಅಕ್ಷರ ಗಾತ್ರ

ಇಳಕಲ್ : ಸಭೆ, ಸಮಾರಂಭ, ಮದುವೆ ಮತ್ತಿತರ ಶುಭ ಕಾರ್ಯಗಳನ್ನು ಕ್ಯಾಮೆರಾದದಲ್ಲಿ ಸೆರೆಹಿಡಿದು, ಬದುಕು ಕಟ್ಟಿಕೊಂಡಿದ್ದ ಛಾಯಾಗ್ರಾಹಕರು ಲಾಕ್‍ಡೌನ್‍ನಲ್ಲಿ ಕೆಲಸವಿಲ್ಲದೇ ತೀವ್ರ ಸಂಕಷ್ಟದಲ್ಲಿದ್ದಾರೆ.

ವೃತ್ತಿಪರ ಛಾಯಾಗ್ರಾಹಕರಲ್ಲಿ ಕೆಲವರು ತರಕಾರಿ, ಹಣ್ಣು ಮಾರಾಟಕ್ಕಿಳಿದಿದ್ದರೇ, ಕೇಲವರು ಬೇರೆ ಉದ್ಯೋಗದ ಹುಡುಕಾಟ ನಡೆಸಿ, ಯಾವುದೇ ಉದ್ಯೋಗ ಸಿಗದೇ ಇದ್ದಾಗ ತಮ್ಮ ಸ್ಟುಡಿಯೋದ ಕ್ಯಾಮೆರಾ, ಲೈಟ್ಸ್ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

'2020ರ ಮಾರ್ಚ್‌ನಿಂದಲೇ ಸಂಕಷ್ಟ ಆರಂಭವಾಗಿದೆ. ಆ ವರ್ಷ ಫೋಟೊಗ್ರಫಿ ಮಾಡಲು ನಿಗದಿಯಾಗಿದ್ದ ಮದುವೆಗಳು ರದ್ದುಗೊಂಡಾಗ ಪಡೆದಿದ್ದ ಮುಂಗಡ ಮರಳಿಸಲು ಕಷ್ಟವಾಗಿತ್ತು. ಹೇಗೋ ಹೊಂದಿಕೊಂಡು ನಾಳೆ ಕೆಲಸ ಸಿಕ್ಕಾವು ಎಂಬ ಆಶಾಭಾವನೆಯಲ್ಲಿರುವಾಗಲೇ ಮತ್ತೊಂದು ಲಾಕ್‍ಡೌನ್ ಎದುರಾಗಿದೆ. ಮದುವೆ ಸೇರಿದಂತೆ ಎಲ್ಲ ಕಾರ್ಯಕ್ರಮಗಳು ಈ ವರ್ಷವೂ ರದ್ದುಗೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಹುತೇಕ ವೃತ್ತಿಪರ ಪೋಟೊಗ್ರಾಫರ್ ಗಳಿಗೆ ದಿಕ್ಕು ತೋಚದಂತಾಗಿದೆ' ಎಂದು ಫೋಟೊ ಸ್ಟುಡಿಯೋದಿಂದಲೇ ಬದುಕು ಕಟ್ಟಿಕೊಂಡು ಈಗ ಸಂಕಷ್ಟಕ್ಕೆ ಸಿಲುಕಿರುವ ಸಂಗಮೇಶ ಸುಲ್ತಾನಪೂರ ಅಳಲು ತೋಡಿಕೊಂಡರು.

ಆಂಧ್ರ ಮೂಲದ ಕಮಲಹಾಸನ್ ಎಂಬುವವರು ನಗರದಲ್ಲಿ ಬಹು ವರ್ಷಗಳಿಂದ ಕಲರ್ ಲ್ಯಾಬ್‍ವೊಂದರಲ್ಲಿ ತಂತ್ರಜ್ಞನಾಗಿ ಕೆಲಸ ಮಾಡಿ, ಈಗಷ್ಟೇ ₹ 20ಲಕ್ಷ ವೆಚ್ಚದಲ್ಲಿ ಸ್ವಂತ ಕಲರ್ ಫೋಟೊ ಲ್ಯಾಬ್ ಹಾಕಿದ್ದರು. ಮದುವೆ ಸೀಸನ್‍ನಲ್ಲಿ ಕೆಲಸ ಆರ್ಡರ್ ಬರುತ್ತವೆ ಎಂದುಕೊಂಡು ಲ್ಯಾಬ್‍ಗೆ ಸಂಬಂಧಿಸಿದ ₹ 15 ಲಕ್ಷ ಮೌಲ್ಯದ ಕಚ್ಚಾವಸ್ತುಗಳನ್ನು ಸಂಗ್ರಹಿಸಿದ್ದರು. ಆದರೆ ಕೊರೊನಾ ವೈರಸ್‍ ಅವರ ಲೆಕ್ಕಾಚಾರ ಬುಡಮೇಲು ಮಾಡಿದೆ. ಸಂಗ್ರಹಿಸಿದ ವಸ್ತುಗಳು ಹಾಳಾಗುತ್ತಿವೆ, ಸಾಲದ ಮೇಲಿನ ಬಡ್ಡಿ ಹೆಚ್ಚುತ್ತಿದೆ. ಜತೆಗೆ ನಿತ್ಯದ ಜೀವನ ನಿರ್ವಹಣೆಗೆ ಕಷ್ಟವಾಗಿದೆ. ಈಗ ಕಮಲಹಾಸನ್ ತಮ್ಮ 12 ವರ್ಷದ ಮಗನೊಂದಿಗೆ ಒತ್ತು ಬಂಡಿಯಲ್ಲಿ ತರಕಾರಿ, ಕಾಯಿಪಲ್ಲೆ ಮಾರಾಟ ಮಾಡುತ್ತಿದ್ದಾರೆ.

ನಗರದ ಬಹುತೇಕ ಫೋಟೊ ಸ್ಟುಡಿಯೋಗಳ ಸ್ಥಿತಿ ಭಿನ್ನವಾಗಿಲ್ಲ. ಸರ್ಕಾರ ಕೂಡಲೇ ಛಾಯಾಗ್ರಾಹಕರ ಸಂಕಷ್ಟಕ್ಕೆ ಸ್ಪಂದಿಸಿ, ಪರಿಹಾರ ನೀಡಬೇಕು ಎಂದು ಇಲ್ಲಿಯ ಛಾಯಾಚಿತ್ರಗಾರ ಸಮೂಹ ಒತ್ತಾಯಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT