ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ ಕ್ಷೇತ್ರ | ಬಗೆಹರಿಯದ ಕಾಂಗ್ರೆಸ್‌ ಟಿಕೆಟ್ ಬಿಕ್ಕಟ್ಟು

Published 21 ಮಾರ್ಚ್ 2024, 5:02 IST
Last Updated 21 ಮಾರ್ಚ್ 2024, 5:02 IST
ಅಕ್ಷರ ಗಾತ್ರ

ಬಾಗಲಕೋಟೆ: ಆರು ತಿಂಗಳ ಮೊದಲೇ ಅಭ್ಯರ್ಥಿ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದ ಕಾಂಗ್ರೆಸ್‌ ಮುಖಂಡರು ಚುನಾವಣೆ ಘೋಷಣೆಯಾದರೂ ಅಭ್ಯರ್ಥಿ ಅಂತಿಮಗೊಳಿಸಿಲ್ಲ. ಅಭ್ಯರ್ಥಿ ಬಗ್ಗೆ ಏನನ್ನೂ ಹೇಳದ ಬಿಜೆಪಿ ನಾಯಕರು ಅಭ್ಯರ್ಥಿ ಘೋಷಣೆ ಮಾಡಿದ್ದು, ಅಭ್ಯರ್ಥಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಮಾಡಿದಂತೆ ಬೇಗನೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದರು. ಆದರೆ, ಟಿಕೆಟ್ ಪಡೆಯಲು ಅಭ್ಯರ್ಥಿಗಳು ಪೈಪೋಟಿ ನಡೆಸುತ್ತಿರುವ ಹಿನ್ನಲೆಯಲ್ಲಿ ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗಿದೆ.

ಕಳೆದ ಬಾರಿ ಲೋಕಸಭೆಗೆ ಚುನಾವಣೆ ನಡೆದಾಗ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ ಎರಡು ಕ್ಷೇತ್ರಗಳಲ್ಲಿ ಶಾಸಕರಿದ್ದರು. ಆದರೆ, ಈ ಬಾರಿ ಐವರು ಶಾಸಕರಿದ್ದಾರೆ. ಜತೆಗೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತ ನಡೆಸುತ್ತಿದೆ. ಜತೆಗೆ ಗ್ಯಾರಂಟಿಗಳ ಬಲವೂ ಇರುವುದರಿಂದ ಟಿಕೆಟ್‌ಗಾಗಿ ಪೈಪೋಟಿ ಹೆಚ್ಚಿದೆ.

ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ, ಶಕ್ತಿ ಯೋಜನೆಯ ಲಾಭ ಬಹಳಷ್ಟು ಕುಟುಂಬಗಳ ಮಹಿಳೆಯರಿಗೇ ನೇರವಾಗಿ ದಕ್ಕಿದೆ. ಐದು ಕೆಜಿ ಹೆಚ್ಚುವರಿಯಾಗಿ ನೀಡುತ್ತಿರುವ ಅಕ್ಕಿಯ ಮೊತ್ತವೂ ಅವರ ಖಾತೆಗೆ ಜಮಾ ಆಗುತ್ತಿದೆ. ಹಾಗಾಗಿ, ಈ ಬಾರಿ ಮಹಿಳಾ ಮತಗಳ ಮೇಲೆ ಕಾಂಗ್ರೆಸ್‌ ಕಣ್ಣಿಟ್ಟಿದೆ.

ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ವೀಣಾ ಕಾಶಪ್ಪನವರ ಜತೆಗೆ ಮಾಜಿ ಸಂಸದ ಅಜಯಕುಮಾರ ಸರನಾಯಕ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರಕ್ಷಿತಾ ಈಟಿ ಸೇರಿದಂತೆ ಎಂಟು ಮಂದಿ ಅರ್ಜಿ ಸಲ್ಲಿಸಿದ್ದರು. ಕೊನೆ ಗಳಿಗೆಯಲ್ಲಿ ಟಿಕೆಟ್ ಪಟ್ಟಿಗೆ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಸಹ ಸೇರ್ಪಡೆಗೊಂಡಿದ್ದಾರೆ.

ಟಿಕೆಟ್‌ಗಾಗಿ ಹಲವರು ಪಟ್ಟು ಹಿಡಿದಿದ್ದಾರೆ. ಮುಖಂಡರು, ಸ್ವಾಮೀಜಿಗಳ ಮೂಲಕ ಪ್ರಭಾವ ಬೀರಿಸುತ್ತಿದ್ದಾರೆ. ಪರಿಣಾಮ ಟಿಕೆಟ್ ಹಂಚಿಕೆ ಕಗ್ಗಂಟಾಗಿದ್ದು, ಇಂದು, ನಾಳೆ ಎಂದು ಮುಂದೂಡಲಾಗುತ್ತಿದೆ.

ಬಿಜೆಪಿಯಿಂದ ಐದನೇ ಬಾರಿಗೆ ಕಣಕ್ಕಿಳಿಯಲು ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ಜೊತೆಗೆ ಪ್ರಕಾಶ ಪರಪ್ಪ ಬಹಿರಂಗವಾಗಿಯೇ ಟಿಕೆಟ್ ಕೇಳಿದ್ದರು. ಮಾಜಿ ಸಚಿವ ಮುರುಗೇಶ ನಿರಾಣಿ ಅವರೂ ಸಹ ಟಿಕೆಟ್‌ಗಾಗಿ ಯತ್ನಿಸಿದ್ದರು ಎಂಬ ಮಾತುಗಳು ಪಕ್ಷದಲ್ಲಿಯೇ ಕೇಳಿ ಬಂದಿದ್ದವು. ಹೈಕಮಾಂಡ್ ಗದ್ದಿಗೌಡರಿಗೆ ಟಿಕೆಟ್ ಘೋಷಣೆ ಮಾಡಿದೆ.

ಈಗಾಗಲೇ ಅವರು ಕ್ಷೇತ್ರ ವ್ಯಾಪ್ತಿಯ ಪಕ್ಷದ ಮುಖಂಡರ ಸಭೆ ಮಾಡುತ್ತಿದ್ದಾರೆ. ಪಕ್ಷದ ಮುಖಂಡರ ಮನೆಗಳಿಗೂ ಭೇಟಿ ಮಾಡುತ್ತಿದ್ದಾರೆ. ಬಹಿರಂಗ ಸಭೆಗಳಿಗೂ ಸಿದ್ಧತೆ ನಡೆದಿದೆ. ಆದರೆ, ಕಾಂಗ್ರೆಸ್‌ ಇನ್ನೂ ಅಭ್ಯರ್ಥಿ ನಿರ್ಧರಿಸುವಲ್ಲಿಯೇ ತಿಣುಕಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT