ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಪುರದಲ್ಲಿ ಲೋಕೇಶ್ವರ ಜಾತ್ರಾ ಮಹೋತ್ಸವ

ಮಹೇಶ ಬೋಳಿಶೆಟ್ಟಿ
Published 9 ಮಾರ್ಚ್ 2024, 4:25 IST
Last Updated 9 ಮಾರ್ಚ್ 2024, 4:25 IST
ಅಕ್ಷರ ಗಾತ್ರ

ಲೋಕಾಪುರ: ಪಟ್ಟಣದ ಆರಾಧ್ಯ ದೈವ ಲೋಕೇಶ್ವರ ಜಾತ್ರಾ ಮಹೋತ್ಸವವ ಅದ್ದೂರಿಯಾಗಿ ನಡೆಯುತ್ತಿದ್ದು, ಭಕ್ತರಲ್ಲಿ ಸಂತಸ ಮನೆ ಮಾಡಿದೆ.

ಸುಣ್ಣದ ಕಲ್ಲು, ಪಾರಿಜಾತದ ತವರೂರು, ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಇತಿಹಾಸ ಹೊಂದಿರುವ ಲೋಕಾಪುರದ ಬೆಳಗಾವಿ ರಸ್ತೆಯಲ್ಲಿರುವ ಲೋಕೇಶ್ವರದ ದೇಗುಲ ಪಟ್ಟಣದ ಭಕ್ತರ ಶ್ರದ್ಧೆಯ ಕೇಂದ್ರವಾಗಿದೆ.

ಇತಿಹಾಸ: ಲೋಕಾಪುರ ಗ್ರಾಮವನ್ನು ರಾಷ್ಟ್ರಕೂಟರ ಅರಸು ಮನೆತನದ ಸಾಮಂತರಾದ ಚಲ್ಲಕೇತನ ಮನೆತನದ ಅರಸನಾದ ವೀರಬಂಕೇಯನ ದ್ವೀತಿಯ ಪುತ್ರ ಲೋಕಾದಿತ್ಯ (ಲೋಕಟೆ) ಕ್ರಿ.ಶ. 898 ರಲ್ಲಿ ಸ್ಥಾಪಿಸಿದ. ವೀರಬಂಕೆಯ ಮತ್ತು ತೈಲಕಬ್ಬೆ ದಂಪತಿಗೆ ಐವರು ಮಕ್ಕಳಿದ್ದರು. ವೀರಬಂಕೆಯನು ರಾಷ್ಟ್ರಕೂಟರ ಅರಸನಾದ ನೃಪತುಂಗನ ಬಲಗೈ ಬಂಟ ಸೇನಾನಿ ದಂಡನಾಯಕನಾಗಿದ್ದನು ಎಂಬುದು ಕೊಣ್ಣೂರಿನ ಶಾಸನದಿಂದ ಮಾಹಿತಿ ಲಭ್ಯವಿದೆ. ಜೈನಗುರು ಗುಣಭದ್ರಾಚಾರ್ಯರು ಬರೆದಿರುವ ಉತ್ತರ ಪುರಾಣದ ಆರಂಭದ ಪದ್ಯಗಳಲ್ಲಿ ಚೆಲ್ಲಕೇತನ ಕಿರುಅರಸು ಮನೆತನದ ಕುರಿತು ಲೋಕಾಪುರದ ಇತಿಹಾಸ ರಚನೆಗೆ ಸಿಕ್ಕ ಇನ್ನೊಂದು ಮಾಹಿತಿ ಇದೆ.

ಲೋಕಾದಿತ್ಯ (ಲೋಕಟೆ) ತನ್ನ ತಂದೆ ವೀರಬಂಕೆಯ ನೆನಪಿಗಾಗಿ ಬಂಕಾಪುರ ಹಾಗೂ ತನ್ನ ಲೋಕಾದಿತ್ಯ ಹೆಸರಿನಲ್ಲಿ ಲೋಕಾಪುರವನ್ನು ಕ್ರಿ.ಶ.898 ರಲ್ಲಿ ಸ್ಥಾಪಿಸಿದನು. ಆಗ ಲೋಕಾಪುರ -12 ಎಂದು ಆಡಳಿತ ಭಾಗವಾಗಿತ್ತು. ಲೋಕಾದಿತ್ಯನು ಲೋಕಾಪುರದಲ್ಲಿ ಹರಿ, ಹರ, ಜೀನ, ಸುತ, (ಬುದ್ದ) ದೇವಾಲಯಗಳನ್ನು ಕಟ್ಟಿಸಿ ವೈಷ್ಣವ, ಶೈವ, ಜೈನ, ಬೌದ್ಧ ಧರ್ಮಕ್ಕೆ ಪ್ರಾತಿನಿಧ್ಯ ನೀಡಿದ್ದ. ಅಲ್ಲದೇ ಲೋಕಮಹೇಶ್ವರಿ ದೇವಾಲಯ, ಲೋಕನಾಥ ಬಸದಿ, ಲೋಕ ಸಮುದ್ರ, ಸರೋವರ ಸಹ ನಿರ್ಮಿಸಿದ ಎಂಬುದು ಲೋಕಾಪುರದ ಶಾಸನ ತಿಳಿಸುತ್ತದೆ.

ರಾಷ್ಟ್ರಕೂಟರ ಅರಸರು ವಿಷ್ಣುವಿನ ಭಕ್ತರಾಗಿದ್ದರೂ ಜೈನ ಧರ್ಮದ ಕಡೆಗೆ ವಿಶೇಷ ಆಸಕ್ತಿ ವಹಿಸಿದ್ದರು. ಆದರೆ ರಾಷ್ಟ್ರಕೂಟರ ಸಾಮಂತರಾದ ಚೆಲ್ಲಕೇತನ ಮನೆತನದ ಅರಸರಾದ ಬಂಕೆಯ ಮತ್ತು ಲೋಕಾದಿತ್ಯನು ಜೈನ ಧರ್ಮ ಪ್ರಸಾರದ ಹೆಚ್ಚಳಕ್ಕೆ ಶ್ರಮಿಸಿದರು ಎಂಬುದಕ್ಕೆ ಲೋಕಾಪುರದಲ್ಲಿಯ ಕೆಲವು ದೇವಾಲಯಗಳಲ್ಲಿ ಜೈನ ಶಿಲ್ಪಿಗಳು, ಜೈನ ಬಸದಿಯ ವಾಸ್ತು ರಚನೆ, ಎಲ್ಲವೂ ಜೈನರ ತೀರ್ಥಂಕರರಿಗೆ ಸಂಭಂದಿಸಿದವುಗಳಾಗಿವೆ. ಅಂದಿನ ಲೋಕಮಹೇಶ್ವರಿ ದೇವಾಲಯ ಇಂದು ಲೋಕೇಶ್ವರ ದೇವಾಲಯ.

ಸಾಂಕ್ರಾಮಿಕ ರೋಗ ದೂರ ಮಾಡಿದ್ದ ರಥೋತ್ಸವ ಸಂಕಲ್ಪ: ಲೋಕಾಪುರ ಪರಿಸರದಲ್ಲಿ ಸಾಂಕ್ರಾಮಿಕ ರೋಗ ಬಂದಾಗ ಇಲ್ಲಿಯ ಜನರು ಮುಧೋಳದ ಗವಿಮಠದ ಮೃತ್ಯುಂಜಯ ಸ್ವಾಮೀಜಿಯವರನ್ನು ಭೇಟಿಯಾಗಿ ಸ್ವಾಮೀಜಿಯವರ ಸಲಹೆಯಂತೆ ಲೋಕೇಶ್ವರ ರಥೋತ್ಸವ ನೇರವೇರಿಸಲು ಸಂಕಲ್ಪ ಮಾಡಿದರು. ಕ್ರಿ.ಶ. 1950 ರಲ್ಲಿ ಲೋಕಾಪುರದ ವಿಶ್ವಕರ್ಮ ಸಹೋದರರು ಹೊಸ ತೇರನ್ನು ನಿರ್ಮಿಸಿದರು.

ಅಂದಿನ ಶಾಸಕರಾದ ಚನ್ನಬಸಪ್ಪ ಅಂಬಲಿ, ಜಾನಪದ ಸಾಹಿತಿ ದಿ. ಬಾಳಪ್ಪ ಹುಕ್ಕೇರಿ ಹಾಗೂ ಇನ್ನೂ ಅನೇಕ ಮಹೋದಯರ ಸಾನ್ನಿಧ್ಯದಲ್ಲಿ ರಥೋತ್ಸವ ನೇರವೇರಿತು. ಸಾಂಕ್ರಾಮಿಕ ರೋಗಕ್ಕೆ ತುತ್ತಾದ ಜನತೆಯ ಆರೋಗ್ಯ ಸುಧಾರಿಸಿತು. ಅದರಂತೆ ಪ್ರತಿವರ್ಷ ಶಿವರಾತ್ರಿಯ ಶಿವಯೋಗದ ಮರುದಿನ ರಥೋತ್ಸವ ನಡೆಯುತ್ತ ಬಂದಿದೆ. ಐದು ದಿನಗಳವರೆಗೆ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT