ಬಾಗಲಕೋಟೆ: ‘ರಾಜಕೀಯ ಜೀವನದಲ್ಲಿ ₹10 ಭ್ರಷ್ಟಾಚಾರ ಮಾಡಿಲ್ಲ. ಬೇರೆಯವರ ಹೆಸರಿನಲ್ಲಿ ಭೂಮಿ ತೆಗೆದುಕೊಂಡಿಲ್ಲ ಎಂದು ನಿಮ್ಮ ತಂದೆ–ತಾಯಿ ಮೇಲೆ ಪ್ರಮಾಣ ಮಾಡಿ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರಿಗೆ, ಮಾಜಿ ಸಚಿವ ಮುರುಗೇಶ ನಿರಾಣಿ ಸವಾಲು ಹಾಕಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಿಸ್ಟರ್ ಪಾಟೀಲ ಗಾಜಿನ ಮನೆಯಲ್ಲಿ ಕುಳಿತಿದ್ದೀಯಾ ಹುಷಾರ್. ಕೆಐಎಡಿಬಿಯಲ್ಲಿ ಡಮ್ಮಿಯಾಗಿ ಭೂಮಿ ತೆಗೆದುಕೊಂಡಿದ್ದೀಯಾ. ನಿನ್ನ ತಾಟಿನಲ್ಲಿ ಹೆಗ್ಗಣ ಬಿದ್ದಿದೆ. ನಿನ್ನ ಯೋಗ್ಯತೆ ಏನಿದೆ ನೋಡಿಕೊ. ಬಾಗಲಕೋಟೆ, ವಿಜಯಪುರ ಜಿಲ್ಲೆ ನನ್ನ ಕೊಡುಗೆ ಏನು ಎಂಬುದು ಜನರ ಮುಂದಿದೆ. ಜಿಲ್ಲೆ, ಕರ್ನಾಟಕಕ್ಕೆ ನಿನ್ನ ಕೊಡುಗೆ ಏನಿದೆ ಹೇಳು ಎಂದು ಪ್ರಶ್ನಿಸಿದರು.
‘ಹಿರಿಯರು ಕಟ್ಟಿ ಬೆಳೆಸಿದ ಬಿಎಲ್‌ಡಿಇ ಸಂಸ್ಥೆಯೆಂಬ ಹತ್ತದಲ್ಲಿ ಹಾವಾಗಿ ಸೇರಿದ್ದೀಯ. ತಾಕತ್ತಿದ್ದರೆ ಆ ಸಂಸ್ಥೆಯಿಂದ ಹೊರಗಡೆ ಬಂದು ಒಂದು ಸಂಸ್ಥೆ, ಕೈಗಾರಿಕೆ ಕಟ್ಟಿ ತೋರಿಸು. ಗೌಡಕಿಯ ದರ್ಪ ತೋರಿಸಬೇಡ. ಯಾರೋ ಎರೆಯುವ ನೀರಿನಲ್ಲಿ ಜಳಕ ಮಾಡಿಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ವಿಜಯಪುರ ಜಿಲ್ಲೆಯ ಕಾರಜೋಳ ಬಳಿ ಬಸವೇಶ್ವರ ಸಕ್ಕರೆ ಕಾರ್ಖಾನೆ ಮಾಡುತ್ತೇನೆ ಎಂದು ಕಡಿಮೆ ಬೆಲೆಗೆ ಭೂಮಿ ಪಡೆದಿದ್ದೆ. ತಮಿಳುನಾಡು ಕಂಪನಿಗೆ ಮಾರಾಟ ಮಾಡಿದಿರಿ. ಫ್ಯಾಕ್ಟರಿ ಕಟ್ಟಲು ಆಗಲಿಲ್ಲ. ನಿನಗಿಂತ 15 ವರ್ಷ ಮೊದಲೇ ಕೈಗಾರಿಕೆ ಸಚಿವನಾಗಿದ್ದೇನೆ. ದನ ಕಾಯೋನು ಎಂದು ಟೀಕೆ ಮಾಡಿದ್ದೀರಿ. ನನಗೂ ಅಂತಹ ಪದಗಳು ಗೊತ್ತಿವೆ. ಆದರೆ, ಅವುಗಳನ್ನು ಬಳಸುವುದಿಲ್ಲ’ ಎಂದರು.