ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆರೂರ | ಬಿಸಿಯೂಟ ಸಾಮಗ್ರಿ ಕಳವು: ಮುಖ್ಯಶಿಕ್ಷಕಿ ಅಮಾನತಿಗೆ ಆಗ್ರಹ

Published 9 ಜುಲೈ 2024, 15:45 IST
Last Updated 9 ಜುಲೈ 2024, 15:45 IST
ಅಕ್ಷರ ಗಾತ್ರ

ಕೆರೂರ: ಇಲ್ಲಿಗೆ ಸಮೀಪದ ಯರಗೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಬಿಸಿಯೂಟ ಸಾಮಗ್ರಿಗಳನ್ನು ಕಳವು ಮಾಡಿರುವುದು, ಅನುದಾನ ದುರ್ಬಳಕೆ, ಶಾಲೆಯ ಮಕ್ಕಳಲ್ಲಿ ಶೈಕ್ಷಣಿಕ ಮಟ್ಟ ಕುಸಿತ ಸೇರಿದಂತೆ ಹಲವು ಆರೋಪಗಳ ಕಾರಣ ಮುಖ್ಯಶಿಕ್ಷಕಿ ಎಂ.ಎ. ಟೀನ್‌ಮೇಕರ್ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಶಾಲೆಯಲ್ಲಿ ತಾಲ್ಲೂಕು ಬಿಸಿಯೂಟ ಅಧಿಕಾರಿ ಎಂ.ಬಿ. ದೊಡ್ಡಪ್ಪನ್ನವರ, ಬಿಆರ್‌ಪಿ ವಿ.ಎಸ್. ಹಿರೇಮಠ, ಸಿಆರ್‌ಪಿ ಎಸ್.ಎಚ್. ಚೌಕಿದ ಸಮ್ಮುಖದಲ್ಲಿ ಮಂಗಳವಾರ ನಡೆದ ಪಾಲಕರ ಸಭೆಯಲ್ಲಿ ಪಾಲಕರು ಹಾಗೂ ಗ್ರಾಮಸ್ಥರು ಮುಖ್ಯ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡರು.

ಬಿಸಿಯೂಟ ಸಾಮಗ್ರಿಗಳನ್ನು ಕಳವು ಮಾಡುವಾಗ ಗ್ರಾಮಸ್ಥರಿಗೆ ಸಿಕ್ಕಿ ಹಾಕಿಕೊಂಡು ಸಾಕಷ್ಟು ಬಾರಿ ತಪ್ಪೊಪ್ಪಿಗೆಯಿಂದ ಬಚಾವ್ ಆಗಿದ್ದಾರೆ. ಶಾಲೆಯಲ್ಲಿ ಯಾವುದೇ ಜಯಂತಿ ಆಚರಣೆಯಲ್ಲೂ ನಿಗದಿತ ವೇಳೆಗೆ ಹಾಜರಾತಿ ಇರುವುದಿಲ್ಲ. ಏಳನೇ ತರಗತಿ ಮುಗಿದ ಮಕ್ಕಳಿಗೆ ಬೇರೆ ಶಾಲೆಯಲ್ಲಿ ದಾಖಲಾತಿಗೆ ಹಿಂದೇಟು, ಸಿಬ್ಬಂದಿಗೆ ಕಿರುಕುಳ, ಪಾಲಕರೊಂದಿಗೆ ಅನುಚಿತ ವರ್ತನೆ, ಕೆಲ ವ್ಯಕ್ತಿಗಳಿಂದ ದಬ್ಬಾಳಿಕೆ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.

ಟಿನ್‌ಮೇಕರ್ ಅವರನ್ನು ಅಮಾನತುಗೊಳಿಸಿ ಶಾಲೆಗೆ ಉತ್ತಮ ಶಿಕ್ಷಕರನ್ನು ನೇಮಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಪಾಂಡುರಂಗ ಬಿದರಿ, ವೆಂಕಟೇಶ ನಾಡಗೌಡರ, ಯಂಕಣ್ಣ ದಂಡಿನ, ಮಂಜುನಾಥ ವಡ್ಡರ, ವೆಂಕಟೇಶ ಹೊಸೂರ, ಬೀಮಶಿ ಜಮ್ಮನಕಟ್ಟಿ, ತಿಮ್ಮನ್ನ ಬಂಡಿವಡ್ಡರ, ವೆಂಕಟೇಶ ದಂಡಿನ, ರಾಜು ಜೈಕಾರ, ಗುರಪ್ಪ ತಳವಾರ, ಪ್ರವೀಣ ತಿಗಳಪ್ಪನ್ನವರ ಒತ್ತಾಯಿಸಿದರು.

Quote - ಯರಗೊಪ್ಪ ಇನಾಂ ಗ್ರಾಮದ ಶಾಲೆಯ ಮುಖ್ಯಶಿಕ್ಷಕಿ ವಿರುದ್ಧ ಲಿಖಿತ ದೂರು ಬಂದ ಕಾರಣ ಶಾಲೆಯಲ್ಲಿ ಪಾಲಕರ ಸಭೆ ನಡೆಸಲಾಗಿತ್ತು. ಮುಂದಿನ ಕ್ರಮಕ್ಕಾಗಿ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂ.ಬಿ. ದೊಡ್ಡಪ್ಪನವರ ಕ್ಷೇತ್ರ ಸಮನ್ವಯ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT