ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನೀಲ್‌ಗೌಡಗೆ ಕಾಂಗ್ರೆಸ್ ಟಿಕೆಟ್: ಎಸ್.ಅರ್.ಪಾಟೀಲಗೆ ಅನಿವಾರ್ಯ ತ್ಯಾಗ?

ವಿಜಯಪುರ-ಬಾಗಲಕೋಟೆ ಪರಿಷತ್ ಚುನಾವಣೆ
Last Updated 22 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ವಿಧಾನ ಪರಿಷತ್ ವಿಜಯಪುರ-ಬಾಗಲಕೋಟೆ ದ್ವಿಸದಸ್ಯ ಸ್ಥಾನದ ಚುನಾವಣೆಗೆ ಹಾಲಿ ಸದಸ್ಯ ಸುನೀಲ್‌ಗೌಡ ಪಾಟೀಲ ಅವರಿಗೆ ಸೋಮವಾರ ಸಂಜೆ ಕಾಂಗ್ರೆಸ್ ಟಿಕೆಟ್ ಅಂತಿಮಗೊಂಡಿದೆ.

ಪಕ್ಷದಿಂದ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಒಲವು ತೋರಿದ ಪರಿಣಾಮಈ ಬಾರಿ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ನಿರಾಸೆಗೊಂಡಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್‌ನಿಂದ ಎಸ್.ಆರ್.ಪಾಟೀಲ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಬಸನಗೌಡ ಪಾಟೀಲ ಯತ್ನಾಳ ಸ್ಪರ್ಧಿಸಿ ಗೆದ್ದು ಬಂದಿದ್ದರು. ಆಗ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಜಮಖಂಡಿಯ ಜಿ.ಎಸ್.ನ್ಯಾಮಗೌಡ ಸೋಲು ಕಂಡಿದ್ದರು. ಬಿಜೆಪಿ ಆಗ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೂ ಸೋಲಿನ ರುಚಿ ಕಂಡಿತ್ತು.

ಮುಂದೆ ಬಸನಗೌಡ ಯತ್ನಾಳ ವಿಜಯಪುರ ನಗರದಿಂದ ವಿಧಾನಸಭೆ ಚುನಾವಣೆಗೆ ನಿಂತು ಆಯ್ಕೆಯಾದ ಕಾರಣ ಪರಿಷತ್‌ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ನಡೆದ ಉಪ ಚುನಾವಣೆಯಲ್ಲಿ ಶಾಸಕ ಎಂ.ಬಿ.ಪಾಟೀಲ ಸಹೋದರ ಸುನೀಲ್‌ಗೌಡ ಪಾಟೀಲ ಗೆಲುವು ಸಾಧಿಸಿದ್ದರು.

ಕಳೆದ ಚುನಾವಣೆಯಲ್ಲಿ ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ಗೆಲುವು ಹಾಗೂ ಉಪ ಚುನಾವಣೆಯ ಫಲಿತಾಂಶವನ್ನು ಅವಿಭಜಿತ ವಿಜಯಪುರ-ಬಾಗಲಕೋಟೆ ಜಿಲ್ಲೆಯಲ್ಲಿರುವ ಒಪ್ಪಂದ ರಾಜಕಾರಣದ ಪ್ರತೀಕ ಎಂದು ಆಗ ಅರ್ಥೈಸಲಾಗಿತ್ತು.

ಈ ಬಾರಿ ಬಿಜೆಪಿ ತನ್ನ ರಣತಂತ್ರ ಬದಲಿಸಿದ್ದು ಒಂದು ಸ್ಥಾನವನ್ನಾದರೂ ಗೆಲ್ಲಲೇಬೇಕು ಎಂಬ ಉಮೇದಿಯಿಂದ ತನ್ನ ಕಾರ್ಯತಂತ್ರ ರೂಪಿಸಿದೆ. ಪಕ್ಷದ ಅಭ್ಯರ್ಥಿಯಾಗಿ ಮಾಜಿ ಶಾಸಕ ಪಿ.ಎಚ್.ಪೂಜಾರ ಅವರನ್ನು ಕಣಕ್ಕಿಳಿಸಿದೆ. ಆರ್‌ಎಸ್‌ಎಸ್ ಹಿನ್ನೆಲೆಯ ಪೂಜಾರ ವಿಜಯಪುರ-ಬಾಗಲಕೋಟೆ ಜಿಲ್ಲೆಗಳಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಕಟ್ಟಾಳುಗಳಲ್ಲಿ ಒಬ್ಬರು. ಜೊತೆಗೆ ಯಡಿಯೂರಪ್ಪ ಅವರೊಂದಿಗಿನ ಬಾಂಧವ್ಯ, ಎರಡೂ ಜಿಲ್ಲೆಗಳಲ್ಲಿನ ಪಕ್ಷದ ಹಾಲಿ-ಮಾಜಿ ಶಾಸಕರೊಂದಿಗಿನ ಉತ್ತಮ ಸಂಪರ್ಕ ಅವರಿಗೆ ನೆರವಾಗಲಿದೆ ಎಂದು ಹೇಳಲಾಗುತ್ತಿದೆ. ಪೂಜಾರ ರಡ್ಡಿ ಸಮುದಾಯಕ್ಕೆ ಸೇರಿದ್ದಾರೆ.

ಕಳೆದ ಬಾರಿ ಚುನಾವಣೆಯಲ್ಲಿನ ಪರಾಜಿತ ಅಭ್ಯರ್ಥಿಗಳಾದ ಜಿ.ಎಸ್.ನ್ಯಾಮಗೌಡ ಹಾಗೂ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗೂಳಪ್ಪ ಶೆಟಗಾರ ಅವರನ್ನು ಬಿಜೆಪಿ ಈ ಬಾರಿ ಬದಲಾಯಿಸಿದಾಗಲೇ ತನ್ನ ರಣತಂತ್ರ ಪರಾಮರ್ಶಿಸುವುದು ಕಾಂಗ್ರೆಸ್‌ಗೆ ಅನಿವಾರ್ಯವಾಯಿತು. ಇಬ್ಬರ ಬದಲಿಗೆ ಒಬ್ಬರನ್ನು ಕಣಕ್ಕಿಳಿಸಲು ಮುಂದಾಯಿತು. ಆದರೆ ಯಾರನ್ನು ಅಂತಿಮಗೊಳಿಸುತ್ತಾರೆ ಎಂಬ ಸಂಗತಿ ಚರ್ಚೆಯ ಮುನ್ನೆಲೆಗೆ ಬಂದಿತ್ತು.

ಎಸ್.ಆರ್.ಪಾಟೀಲ ಕೂಡ ರಡ್ಡಿ ಸಮುದಾಯದಯಕ್ಕೆ ಸೇರಿದ್ದಾರೆ. ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಆ ಸಮುದಾಯದ ಹಿಡಿತ, ಪಕ್ಷದಲ್ಲಿನ ಹಿರಿತನ, ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿಯಲ್ಲೂ ಅವರಿಗೆ ಹಿತೈಷಿಗಳು ಹೆಚ್ಚಿರುವುದು, ಜೊತೆಗೆ 1996ರಿಂದ ಇಲ್ಲಿಯವರೆಗೆ ಸತತವಾಗಿ ನಾಲ್ಕು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಕಾರಣ ಅವರಿಗೆ ಟಿಕೆಟ್ ಅಂತಿಮಗೊಳ್ಳಲಿದೆ ಎಂದು ಹೇಳಲಾಗಿತ್ತು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ವರಿಷ್ಠರು ಸುನೀಲ್‌ಗೌಡ ಅವರಿಗೆ ಮಣೆ ಹಾಕಿದ್ದಾರೆ.

'ಈ ಬಾರಿ ತಮಗೊಬ್ಬರಿಗೆ ಟಿಕೆಟ್ ಕೊಟ್ಟರೆ ಮಾತ್ರ ಸ್ಪರ್ಧಿಸುವುದಾಗಿ ಎಸ್.ಆರ್.ಪಾಟೀಲ ಹೈಕಮಾಂಡ್‌ಗೆ ಹೇಳಿದ್ದರು. ಪಕ್ಷದಿಂದ ಇಬ್ಬರಿಗೂ ಟಿಕೆಟ್ ಕೊಡಿ, ನಾನು ಸ್ಪರ್ಧೆ ಮಾಡಿಯೇ ಸಿದ್ಧ ಎಂದು ಸುನೀಲ್‌ಗೌಡ ಪಟ್ಟು ಹಿಡಿದಿದ್ದರು. ಅವರಿಗೆ ಸಹೋದರ ಎಂ.ಬಿ.ಪಾಟೀಲ ಅವರ ಶ್ರೀರಕ್ಷೆಯೂ ನೆರವಾಯಿತು. ಹೀಗಾಗಿ ಎಸ್.ಆರ್.ಪಾಟೀಲ ಅವರಿಗೆ 'ತ್ಯಾಗ' ಅನಿವಾರ್ಯವಾಯಿತು' ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಪದಾಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

ಎರಡೂ ಪಕ್ಷಗಳು ತಲಾ ಒಬ್ಬೊಬ್ಬರಿಗೆ ಟಿಕೆಟ್ ಕೊಟ್ಟಿರುವುದರಿಂದಕಣದಲ್ಲಿರುವವರ ಗೆಲುವು ಸುಲಭ ಎಂಬ ಮಾತು ಈಗ ಸತ್ಯ. ಮಂಗಳವಾರ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯ ಆಗುವವರೆಗೂ ಏನಾದರೂ ಆಗಬಹುದು. ಪಕ್ಷೇತರರು ಇಲ್ಲವೇ ಬಿಜೆಪಿಯಿಂದ ಮತ್ತೊಬ್ಬರು ಕಣಕ್ಕಿಳಿದು ಚುನಾವಣೆ ರಂಗೇರಬಹುದು ಎಂದು ಅವರು ನಕ್ಕರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು 'ಪ್ರಜಾವಾಣಿ' ಎಸ್.ಆರ್.ಪಾಟೀಲ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರ ಫೋನ್ ಸ್ವಿಚ್ಡ್ ಆಫ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT