ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಧೋಳ ಬಂದ್ ಸಂಪೂರ್ಣ ಯಶಸ್ವಿ

ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆ; ಡಿ.ಸಿ, ಎಸ್‌.ಪಿ ಸ್ಥಳಕ್ಕೆ ಭೇಟಿ
Published 12 ಆಗಸ್ಟ್ 2024, 15:12 IST
Last Updated 12 ಆಗಸ್ಟ್ 2024, 15:12 IST
ಅಕ್ಷರ ಗಾತ್ರ

ಮುಧೋಳ: ಘಟಪ್ರಭಾ ನದಿ‌ ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರು ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಸೋಮವಾರ ನಡೆದ ಪ್ರತಿಭಟನೆ ಹಾಗೂ ಮುಧೋಳ ಬಂದ್ ಯಶಸ್ವಿಯಾಗಿ ನಡೆಯಿತು.

ಬೆಳಿಗ್ಗೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ರಾಣಾ ಪ್ರತಾಪಸಿಂಹ ವೃತ್ತಕ್ಕೆ ಆಗಮಿಸಿ ವಿಜಯಪುರ– ಬೆಳಗಾವಿ ರಾಜ್ಯ ಹೆದ್ದಾರಿ ಸಂಪರ್ಕ‌ ಸ್ಥಗಿತಗೊಳಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ಮಾತನಾಡಿ, ಜನಪ್ರತಿನಿಧಿಗಳಾದವರು ಜನರ ಸಮಸ್ಯೆ ಆಲಿಸುವ ಕೆಲಸ ಮಾಡಬೇಕು. ನೆರೆಯಲ್ಲಿ ಮನೆ, ಬೆಳೆ ಕಳೆದುಕೊಂಡ ಸಂತ್ರಸ್ತರಿಗೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನೀಡುವ ಪರಿಹಾರ ಮೊತ್ತವನ್ನು ಪರಿಷ್ಕರಣೆ ಮಾಡಬೇಕು. ಓಬೆರಾಯನ ಕಾಲದ ಮಿತಿಯನ್ನು ತೆಗೆದುಹಾಕಬೇಕು. ಹೆಚ್ಚಿನ ಪರಿಹಾರ ಒದಗಿಸಿ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ರೈತಮುಖಂಡ ನಾಗೇಶ ಸೋರಗಾಂವಿ, ದುಂಡಪ್ಪ ಲಿಂಗರಡ್ಡಿ, ಹಣಮಂತ ಅಡವಿ, ಯಲ್ಲಪ್ಪ ಲೋಗಾವಿ, ಮಹೇಶಗೌಡ ಪಾಟೀಲ, ವೆಂಕಣ್ಣ ಮಳಲಿ‌, ಪರಸು ನಿಗಡೆ ಮುಂತಾದ ಮುಖಂಡರು ಮಾತನಾಡಿದರು.

ಪ್ರವಾಹದಲ್ಲಿ ಹಾನಿಯಾದ ಕಬ್ಬು ಬೆಳೆಗೆ ಎಕರೆಗೆ ₹ 1ಲಕ್ಷ ಹಾಗೂ ಇತರೆ ಬೆಳೆಗೆ ₹ 50 ಸಾವಿರ  ಪರಿಹಾರ ಘೋಷಿಸಬೇಕು. ಪ್ರವಾಹ ಸಮಸ್ಯೆ ಬಹಳ ವರ್ಷಗಳಿಂದ ನಮ್ಮನ್ನು ಬಾಧಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಧೋಳಕ್ಕೆ‌ ಆಗಮಿಸಿ ಸಮಸ್ಯೆಯನ್ನು ಕಣ್ಣಾರೆ ನೋಡಿ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದರು.

ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಭೇಟಿ : ರೈತರ ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹಾಗೂ ಎಸ್‌ಪಿ ಅಮರನಾಥರಡ್ಡಿ ರೈತರ ಸಮಸ್ಯೆ ಆಲಿಸಿದರು. ಈ ವೇಳೆ ಮಾತನಾಡಿದ ಅವರು, ಶಾಶ್ವತ ಪರಿಹಾರಕ್ಕಾಗಿ ಮುಂದಿಟ್ಟರುವ ನಿಮ್ಮ‌ ಬೇಡಿಕೆ ಪರಿಗಣಿಸಿ ಮುಧೋಳ ತಾಲೂಕಿನ 34 ಹಳ್ಳಿಗಳ ಕುರಿತು ಸರ್ವೇ ನಡೆಸಿ ಯಾವ ಗ್ರಾಮಗಳು ಸ್ಥಳಾಂತರಕ್ಕೆ ಅರ್ಹವಾಗಿವೆ ಎಂಬುದರ ಬಗ್ಗೆ ವರದಿ ಕೊಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಭರವಸೆ ನೀಡಿದರು.

ಇನ್ನು ಎನ್ ಡಿಆರ್ ಎಫ್ ಹಾಗೂ ಎಸ್ ಡಿಆರ್ ಎಫ್ ಪರಿಹಾರ ಪರಿಷ್ಕರಣೆ ಕಾರ್ಯ ಸರ್ಕಾರದ ಮಟ್ಟದಲ್ಲಿ ಆಗಬೇಕು. ಆದರೂ ನಿಮ್ಮ ಬೇಡಿಕೆ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳ‌‌ ಮಾತಿಗೆ ತೃಪ್ತರಾಗದ ಹೋರಾಟಗಾರರು ಜಿಲ್ಲಾ ಉಸ್ತುವಾರಿ ಸಚಿವರು ನಮ್ಮೊಂದಿಗೆ ಮಾತನಾಡಬೇಕು. ಸಭೆ ನಡೆಸಿ‌ ನಮ್ಮ ಸಮಸ್ಯೆ ಆಲಿಸಬೇಕು ಎಂದು ಪಟ್ಟು‌ಹಿಡಿದರು. ಈ ವೇಳೆ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರೊಂದಿಗೆ ದೂರವಾಣಿ‌ ಮೂಲಕ‌ ಮಾತನಾಡಿ‌ ರೈತರ ಬೇಡಿಕೆ ಬಗ್ಗೆ ಮನವರಿಕೆ‌ ಮಾಡಿಕೊಟ್ಟರು.

ಸಚಿವರು ಆ.14 ರಂದು ರೈತರೊಂದಿಗೆ ಸಭೆ ನಡೆಸುವುದಾಗಿ ಭರವಸೆ ನೀಡಿದರು. ಸಚಿವರ ಮಾತಿಗೆ ಮನ್ನಣೆ ನೀಡಿದ ಹೋರಾಟಗಾರರು ಆ.14ರವರೆಗೆ ಹೋರಾಟವನ್ನು‌ ಮುಂದೂಡಿದರು.

ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಶೀಲ್ದಾರ್ ವಿನೋದ ಹತ್ತಳ್ಳಿ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ಇದ್ದರು.

ಸುಭಾಷ ಶಿರಬೂರ, ದುಂಡಪ್ಪ ಯರಗಟ್ಟಿ, ನಾಗಪ್ಪ ಅಂಬಿ, ಸದಪ್ಪ ತೇಲಿ, ಮುತ್ತಪ್ಪ‌ ಕೋಮಾರ, ಸಂಗಣ್ಣ ಕಾತರಕಿ, ಬಂಡು ಘಾಟಗೆ, ರುದ್ರಪ್ಪ ಅಡವಿ, ಈರಪ್ಪ ಹಂಚಿನಾಳ, ಬಸಪ್ಪ ದೇಸಾಯಿ, ಮುತ್ತಪ್ಪ ಪಿಚೇಲಿ, ಸಿಗುರಪ್ಪ ಅಕ್ಕಿಮರಡಿ, ನಾರಾಯಣ ಯಡಹಳ್ಳಿ, ಸಂಗನಗೌಡ ಕಾತರಕಿ, ಬಸವರಾಜ ಮಳಲಿ, ರಾಜೇಂದ್ರ ಚಂದನಶಿವ, ಗಿರೀಶ ಲಕ್ಷಾಣಿ, ನವೀನ ಬದರಿ, ತಿಮ್ಮಣ್ಣ ಬಟಕುರ್ಕಿ, ಬಸವರಾಜ ಮಹಾಲಿಂಗೇಶ್ವರಮಠ, ಗುರುಪಾದ ಕುಳಲಿ, ಶಿವು ಗುರವ, ಶಿವಾನಂದ ಬೆಟಗೇರಿ ಸೇರಿದಂತೆ ಹೋರಾಟದಲ್ಲಿ‌ ಪಾಲ್ಗೊಂಡಿದ್ದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.ಹೋರಾಟಗಾರರು ರಾಜ್ಯ ಹೆದ್ದಾರಿಯಲ್ಲಿ ಅಡುಗೆ ಮಾಡಿ ಊಟ ಮಾಡಿದರು.

ಸ್ವಯಂಪ್ರೇರಿತ ಬಂದ್

ನೆರೆ ಸಂತ್ರಸ್ತರ ಪ್ರತಿಭಟನೆ ಹಿನ್ನೆಲೆ ನಗರದಲ್ಲಿನ ವ್ಯಾಪಾರಿಗಳು‌ ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿ‌ ಪ್ರತಿಭಟನೆಗೆ ಬೆಂಬಲ‌ ವ್ಯಕ್ತಪಡಿಸಿದರು. ರೈತರು ಹಾಗೂ ನೆರೆ ಸಂತ್ರಸ್ತರೊಂದಿಗೆ ವಕೀಲರ ಸಂಘದ ಅಧ್ಯಕ್ಷ ವಿ.ಡಿ.ಕತ್ತಿ ನೇತೃತ್ವದಲ್ಲಿ ಬೆಂಬಲ ವ್ಯಕ್ತಪಡಿಸಿ ಕಲಾಪದಿಂದ ದೂರ ಉಳಿದರು. ವಿವಿಧ ಸಂಘಟನೆಗಳ‌ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

ಪಶು ವೈದ್ಯಾಧಿಕಾರಿ ವಿರುದ್ಧ ಆಕ್ರೋಶ

ಜಿಲ್ಲಾಧಿಕಾರಿ ರೈತರ ಸಮಸ್ಯೆ ಆಲಿಸುವಾಗ ತಾಲ್ಲೂಕು ಪಶು ವೈದ್ಯಾಧಿಕಾರಿ ‌ಗೋವಿಂದ ರಾಠೋಡ ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ರೈತರ ಜಾನುವಾರುಗಳಿಗೆ ಸೂಕ್ತ ಮೇವು ನೀಡುವುದಿಲ್ಲ. ಹಲವಾರು ವರ್ಷಗಳಿಂದ ಮುಧೋಳದಲ್ಲಿಯೇ ಠಿಕಾಣಿ ಹೂಡಿರುವ ವೈದ್ಯಾಧಿಕಾರಿ ವಿರುದ್ಧ ಕ್ರಮಕೈಗೊಳ್ಳದಿದ್ದರೆ ನಾವೇ ಕ್ರಮಕ್ಕೆ‌ ಮುಂದಾಗುತ್ತೇವೆ ಎಂದು ಆಕ್ರೋಶ ಹೊರಹಾಕಿದರು.

ಮುಧೋಳದಲ್ಲಿ ನೆರೆ ಸಂತ್ರಸ್ಥರು ನಡೆಸಿದ ಪ್ರತಿಭಟನೆ ಬೆಂಬಲಿಸಿ ಎಲ್ಲ ವ್ಯಾಪಾರಸ್ಥರು ಸ್ವಯಂ ಪ್ರೇರಿತ ಬಂದ್ ಮಾಡಿ ಬೆಂಬಲ ಸೂಚಿಸಿದರು
ಮುಧೋಳದಲ್ಲಿ ನೆರೆ ಸಂತ್ರಸ್ಥರು ನಡೆಸಿದ ಪ್ರತಿಭಟನೆ ಬೆಂಬಲಿಸಿ ಎಲ್ಲ ವ್ಯಾಪಾರಸ್ಥರು ಸ್ವಯಂ ಪ್ರೇರಿತ ಬಂದ್ ಮಾಡಿ ಬೆಂಬಲ ಸೂಚಿಸಿದರು
ಮುಧೋಳದಲ್ಲಿ ನೆರೆ ಸಂತ್ರಸ್ಥರು ಶಾಶ್ವತ ಪರಿಹಾರಕ್ಕಾಗಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು
ಮುಧೋಳದಲ್ಲಿ ನೆರೆ ಸಂತ್ರಸ್ಥರು ಶಾಶ್ವತ ಪರಿಹಾರಕ್ಕಾಗಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು
ಮುಧೋಳದಲ್ಲಿ ನೆರೆ ಸಂತ್ರಸ್ಥರು ನಡೆಸಿದ ಪ್ರತಿಭಟನೆಯಲ್ಲಿ ಹೋರಾಟಗಾರರೊಂದಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಎಸ್.ಪಿ ಅಮರನಾಥರಡ್ಡಿ ಮಾತುಕತೆ ನಡೆಸಿದರು
ಮುಧೋಳದಲ್ಲಿ ನೆರೆ ಸಂತ್ರಸ್ಥರು ನಡೆಸಿದ ಪ್ರತಿಭಟನೆಯಲ್ಲಿ ಹೋರಾಟಗಾರರೊಂದಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಎಸ್.ಪಿ ಅಮರನಾಥರಡ್ಡಿ ಮಾತುಕತೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT