ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುನಗುಂದ | ಮೂಲ ಸೌಕರ್ಯ ಅಭಿವೃದ್ಧಿ ಮರೀಚಿಕೆ

Published 26 ಜೂನ್ 2024, 4:17 IST
Last Updated 26 ಜೂನ್ 2024, 4:17 IST
ಅಕ್ಷರ ಗಾತ್ರ

ಹುನಗುಂದ: ತಾಲ್ಲೂಕಿನ ಕಮಲದಿನ್ನಿ ಗ್ರಾಮವು ನಾರಾಯಣಪುರ ಆಣೆಕಟ್ಟೆ ಹಿನ್ನೀರಿನ ಪ್ರದೇಶದಲ್ಲಿ ಬರುವ ಗ್ರಾಮವಾಗಿದ್ದು. ಗ್ರಾಮದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಮರೀಚಿಕೆ ಆಗಿದೆ. ಇವೆಲ್ಲವುಗಳ ನಡುವೆ ಗ್ರಾಮಸ್ಥರ ಗೋಳು ಕೇಳುವವರು ಇಲ್ಲದಂತಾಗಿದೆ.

ಕಮಲದಿನ್ನಿ ಗ್ರಾಮ 1998 ಕೃಷ್ಣಾ ಮೇಲ್ದಂಡೆ ಯೋಜನೆಯ ಭಾಗವಾಗಿ ಮುಳುಗಡೆ ಪ್ರದೇಶ ಎಂದು ಘೋಷಿಸಲಾಯಿತು. ನಾರಾಯಣಪುರ ಆಣೆಕಟ್ಟೆ ನಿರ್ಮಾಣ ಯೋಜನೆ ಘೋಷಣೆಗೊಂಡು 1985-86 ನೇ ಸಾಲಿನಲ್ಲಿ ಪೂರ್ಣಗೊಂಡಿತು. ಯೋಜನಾ ನಿರಾಶ್ರಿತರ ಗ್ರಾಮ ಎಂದು ಘೋಷಣೆಯ ನಂತರ ಗ್ರಾಮ ಸ್ಥಳಾಂತರಕ್ಕೆ ಸಂಬಂಧಿಸಿ ಯೋಜನೆ ನನೆಗುದಿಗೆ ಬಿತ್ತು. ನಂತರ 2009ರಲ್ಲಿ ಕಮಲದಿನ್ನಿ ಗ್ರಾಮ ಸಂಪೂರ್ಣವಾಗಿ ಪುನರ್ವಸತಿ ಕೇಂದ್ರಕ್ಕೆ (ಹೊಸ ಪ್ಲಾಟ್‌ಗೆ) ಸ್ಥಳಾಂತರಗೊಂಡಿದೆ.

ಮೂಲ ಸೌಕರ್ಯ ಕೊರತೆ:

ಪುನರ್ವಸತಿ ಕೇಂದ್ರದಲ್ಲಿ ಪ್ರಮುಖ ಬೀದಿಗಳ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜಿಗಾಗಿ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಅಳವಡಿಸಿರುವ ನಳಗಳಿಗೆ ಈವರೆಗೂ ನೀರು ಹರಿದಿಲ್ಲ. ಜೊತೆಗೆ ಗ್ರಾಮದ ಪ್ರಮುಖ ರಸ್ತೆ ಬದಿಗಳಲ್ಲಿ ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯಿಲ್ಲ. ಕೆಲವು ಕಡೆ ಇರುವ ಚರಂಡಿಗಳಲ್ಲಿ ಕಸ, ಕಡ್ಡಿ, ಮಣ್ಣು ತುಂಬಿಕೊಂಡು ದುರ್ನಾತ ಬೀರುವುದರ ಜೊತೆಗೆ  ಅವ್ಯವಸ್ಥೆಯಿಂದ ಕೂಡಿವೆ. ಮಹಿಳಾ ಶೌಚಾಲಯ ನಿರ್ಮಾಣ. ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸಲು ನಿರ್ಮಾಣವಾಗಿರುವ ಓವರ್‌ಹೆಡ್ ಟ್ಯಾಂಕ್‌ಗೆ ನೀರಿನ ಮೂಲಗಳನ್ನು ಹುಡುಕಬೇಕಿದೆ. ಶಾಲೆಗೆ ಸುಸಜ್ಜಿತ ಕಾಂಪೌಂಡ್ ನಿರ್ಮಾಣವಾಗಿಲ್ಲ. ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಅಡುಗೆ ಸಹಾಯಕಿ ಹಾಗೂ ಕಾಯಂ ಶಿಕ್ಷಕಿ ನೇಮಕವಾಗಬೇಕಿದೆ.

ಗ್ರಾಮವು ಅಂದಾಜು 700 ಜನಸಂಖ್ಯೆ ಹೊಂದಿದೆ. ಹಾವರಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುತ್ತದೆ. ತಾಲ್ಲೂಕು ಕೇಂದ್ರದಿಂದ 30 ಕಿ.ಮೀ ದೂರವಿದೆ. ವ್ಯಾಪಾರ, ವಹಿವಾಟು, ದೈನಂದಿನ ಕೆಲಸಗಳಿಗೆ ಗ್ರಾಮದ ಜನರು ತಾಲ್ಲೂಕು ಕೇಂದ್ರವನ್ನು ಅವಲಂಬಿಸಿದ್ದಾರೆ. ಶಾಲೆ–ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲ. ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ನಮಗೆ ಅನುಕೂಲ ಮಾಡಿಕೊಡುವಂತೆ ಗ್ರಾಮದ ಕಾಲೇಜು ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.

ಗ್ರಾಮ ಪಂಚಾಯತಿ ಸದಸ್ಯರ ಆಯ್ಕೆಗೆ ಗ್ರಾಮದಲ್ಲಿ ಮೀಸಲಾತಿ ವರ್ಗ ಇಲ್ಲದ ಕಾರಣ ಬೇರೆ ಗ್ರಾಮದ ಸದಸ್ಯ ಗ್ರಾಮ ಪಂಚಾಯ್ತಿಗೆ ಸದಸ್ಯರಾಗಿದ್ದಾರೆ. ಅವರು ಗ್ರಾಮಕ್ಕೆ ಬಂದು ಜನರ ಸಮಸ್ಯೆ ಕೇಳಿಲ್ಲ ಎನ್ನುವುದು ಗ್ರಾಮಸ್ಥರ ದೂರು.

‘ಸ್ಮಶಾನದ ವ್ಯವಸ್ಥೆ ಇಲ್ಲ’

ಗ್ರಾಮವು ನಾರಾಯಣಪುರ ಆಣೆಕಟ್ಟೆ ಹಿನ್ನೀರಿನಿಂದ ಮುಳುಗಡೆ ಆಗಿ ಸ್ಥಳಾಂತರಗೊಂಡರೂ ಗ್ರಾಮದ ಜನರ ಶವ ಸಂಸ್ಕಾರಕ್ಕೆ ಸ್ಮಶಾನದ ವ್ಯವಸ್ಥೆ ಇಲ್ಲ. ಜಮೀನು ಇರುವವರು ತಮ್ಮ ಜಮೀನಗಳಲ್ಲಿ ಅಂತ್ಯಸಂಸ್ಕಾರ ಮಾಡುತ್ತಾರೆ. ಜಮೀನು ಇಲ್ಲದವರು ಶವಸಂಸ್ಕಾರಕ್ಕೆ ಹಳ್ಳದ ತೀರ ಪ್ರದೇಶವನ್ನು ಅವಲಂಬಿಸಬೇಕಿದೆ. ಮಳೆಗಾಲದ ಸಂದರ್ಭದಲ್ಲಿ ಅಂತ್ಯಸಂಸ್ಕಾರಕ್ಕೆ ಪರದಾಡಬೇಕಾಗುತ್ತದೆ ಎಂದು ಗ್ರಾಮಸ್ಥರೊಬ್ಬರು ಅಳಲು ತೋಡಿಕೊಂಡರು.

ಗ್ರಾಮದ ಮೂಲ ಸೌಕರ್ಯಗಳಿಗೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ ಅದಕ್ಕೆ ಮಂಜೂರಾತಿ ಪಡೆದು ಕಾಮಗಾರಿ ಕೈಗೊಳ್ಳಲಾಗುವುದು.
ಕೃಷ್ಣ ದಾಸರ, ಪಿಡಿಒ, ಹಾವರಗಿ
ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೂಕ್ತ ಚರಂಡಿ ವ್ಯವಸ್ಥೆ ಶಾಲಾ ಕಾಂಪೌಂಡ್ ದೇವಸ್ಥಾನ ಸಮುದಾಯ ಭವನ ಸ್ಮಶಾನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಬೇಕು.
ಪ್ರವೀಣ ಕುಮಾರ, ಗ್ರಾಮಸ್ಥ, ಕಮಲದಿನ್ನಿ
ಹುನಗುಂದ: ತಾಲ್ಲೂಕಿನ ಕಮಲದಿನ್ನಿ ಗ್ರಾಮದ ಚರಂಡಿಯಲ್ಲಿ ಕಸ ಕಡ್ಡಿ ತುಂಬಿಕೊಡಿರುವುದು
ಹುನಗುಂದ: ತಾಲ್ಲೂಕಿನ ಕಮಲದಿನ್ನಿ ಗ್ರಾಮದ ಚರಂಡಿಯಲ್ಲಿ ಕಸ ಕಡ್ಡಿ ತುಂಬಿಕೊಡಿರುವುದು
ಹುನಗುಂದ: ತಾಲ್ಲೂಕಿನ ಕಮಲದಿನ್ನಿ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿನ ಶೆಡ್ ಗಳ ಮುಂಭಾಗದ ರಸ್ತೆ ಅವ್ಯವಸ್ಥೆಯಿಂದ ಕೂಡಿರುವುದು
ಹುನಗುಂದ: ತಾಲ್ಲೂಕಿನ ಕಮಲದಿನ್ನಿ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿನ ಶೆಡ್ ಗಳ ಮುಂಭಾಗದ ರಸ್ತೆ ಅವ್ಯವಸ್ಥೆಯಿಂದ ಕೂಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT