ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೀನಗಡ: ಮಳೆಗೆ ಹೊಲದಲ್ಲೇ ಈರುಳ್ಳಿ ಬೆಳೆ ನಾಶ

ಅಮೀನಗಡ ಹೋಬಳಿ ವ್ಯಾಪ್ತಿ: 15 ಸಾವಿರ ಹೆಕ್ಟೇರ್ ಈರುಳ್ಳಿ ಮಣ್ಣುಪಾಲು
Last Updated 8 ಅಕ್ಟೋಬರ್ 2020, 16:37 IST
ಅಕ್ಷರ ಗಾತ್ರ

ಅಮೀನಗಡ: ನೀರಾವರಿ ಮತ್ತು ಒಣಬೇಸಾಯದಲ್ಲಿ ಉಳ್ಳಾಗಡ್ಡಿ ಬೆಳೆದ ರೈತರಿಗೆ ಈ ಬಾರಿ ಎಡೆಬಿಡದೆ ಸುರಿದ ಮಳೆಯ ಪರಿಣಾಮ ಕೊಳೆ ರೋಗ ತಗುಲಿದೆ. ಇದರಿಂದ ಸಾವಿರಾರು ಕ್ವಿಂಟಲ್ ಉಳ್ಳಾಗಡ್ಡಿ ನಾಶವಾಗಿದೆ. ಅಮೀನಗಡ ಹೋಬಳಿ ವ್ಯಾಪ್ತಿಯಲ್ಲಿ ನಿರಂತರ ಮಳೆಗೆ ಕೆರೆಕಟ್ಟೆ ತುಂಬಿದ್ದು, ತೇವಾಂಶ ಹೆಚ್ಚಾಗಿದೆ.

ಪ್ರತಿ ವರ್ಷ ರೈತರು ಹೆಚ್ಚಿನ ಪ್ರಮಾಣದಲ್ಲಿ ಉಳ್ಳಾಗಡ್ಡಿ ಬೆಳೆಯುತ್ತಾರೆ. ದರ ಏರಿಳಿತದ ನಡುವೆ ಈರುಳ್ಳಿ ಬೆಳೆಯುವ ಕೃಷಿಕರ ಸಂಖ್ಯೆ ಹೆಚ್ಚುತ್ತಿದೆ. ಈ ವರ್ಷ ಉಳ್ಳಾಗಡ್ಡಿ ಬೆಳೆದ ರೈತರು ನಿರಂತರ ಮಳೆಯಿಂದಾಗಿ ಹೈರಾಣಾಗಿದ್ದಾರೆ. ಅಲ್ಪಸ್ವಲ್ಪ ಉಳಿಸಿಕೊಂಡರೂ ರೋಗಭಾದೆ ಕಾಡುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಈರುಳ್ಳಿ ದರ ಉತ್ತಮವಾಗಿಯೇ ಇದೆಯಾದರೂ ಅತಿವೃಷ್ಟಿಯಿಂದಾಗಿ ಉಳ್ಳಾಗಡ್ಡಿ ಹೊಲದಲ್ಲೇ ಕೊಳೆತು ಹೋಗಿದೆ.

ಮಳೆ ಸತತವಾಗಿ ಬಿದ್ದ ಹಿನ್ನೆಲೆಯಲ್ಲಿ ಬೆಳೆಗೆ ರೋಗ ತಗುಲಿದ್ದು, ತೇವಾಂಶವೇ ಈರುಳ್ಳಿ ಬೆಳೆಗೆ ಮುಳುವಾಗಿ ಪರಿಣಮಿಸಿದೆ. ಅಮೀನಗಡ ಸಮೀಪದ ಮೂಗನೂರು, ಅಂಬಲಿಕೊಪ್ಪ, ಸೂಳೇಬಾವಿ, ಕೆಲೂರು, ದಮ್ಮೂರು, ಬೆನಕನವಾರಿ, ಸಿದ್ಧನಕೊಳ್ಳ, ಐಹೊಳೆ, ಕಮತಗಿ, ಸುರಳಿಕಲ್ಲ, ಚಿಕ್ಕಮಾಗಿ, ರಾಮಥಾಳ, ಚಿಕನಾಳ ಗ್ರಾಮಗಳಲ್ಲಿ ಈರುಳ್ಳಿ ಬೆಳೆ ನೆಲಕಚ್ಚಿದೆ.

ನಾವು ಮೂರು ಎಕರೆ ಉಳ್ಳಾಗಡ್ಡಿ ಬೆಳೆದಿದ್ದು ಉತ್ತಮವಾದ ಗಡ್ಡೆ ಬಂದಿದೆ. ಮಳೆಯ ತೇವಾಂಶದಿಂದ ರೋಗ ತಗುಲಿ ಅಂದಾಜು 100 ಕ್ವಿಂಟಲ್ ಬೆಳೆ ಕೊಳೆತು ಹೋಗಿದೆ ಎಂದು ಅಂಬಲಿಕೊಪ್ಪದ ರೈತ ಅರವಿಂದ, ಮಲ್ಲಕಾಜಪ್ಪ, ಮುರನಾಳ ತಮ್ಮ ಅಳಲನ್ನು ತೋಡಿಕೊಂಡರು.

ಒಂದು ಎಕರೆಗೆ ಬೀಜ, ಗೊಬ್ಬರ, ಕೀಟನಾಶಕ ಹೀಗೆ ₹20 ರಿಂದ ₹30 ಸಾವಿರ ವೆಚ್ಚ ಮಾಡಿದವರಿಗೆ ನಷ್ಟ ಉಂಟಾಗಿದೆ. ಈರುಳ್ಳಿ ಚೆನ್ನಾಗಿ ಇಳುವರಿ ಬಂದಿದ್ದರೂ ಕೆಲವೆಡೆ ರೋಗದ ಕಾಟದಿಂದ ಬಿತ್ತನೆಗೆ ಮಾಡಿದ ಖರ್ಚು ಕೈಗೆಟುಕದೇ ರೈತರು ಕಂಗಾಲಾಗಿದ್ದಾರೆ.

ಅಮೀನಗಡ ಹೋಬಳಿಯಲ್ಲಿ ಐಹೊಳೆ ಪ್ರದೇಶದಲ್ಲಿ ಅತಿ ಹೆಚ್ಚು ರೈತರು ಈರುಳ್ಳಿ ಬೆಳೆದಿದ್ದು 15 ಸಾವಿರ ಹೆಕ್ಟೇರ್ ಈರುಳ್ಳಿ ಮಣ್ಣುಪಾಲಾಗಿದೆ. ಮಳೆಗೆ ಈರುಳ್ಳಿ ಕೈಕೊಟ್ಟಿದ್ದರಿಂದ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ಪೂರೈಕೆ ಕಡಿಮೆಯಾಗಿ ದರ ಹೆಚ್ಚಾಗಿದೆ ಎಂದು ಪ್ರಗತಿಪರ ರೈತ ರವಿ ಸಜ್ಜನರ ಹೇಳಿದರು. ಸಾಕಷ್ಟು ಪ್ರಮಾಣದಲ್ಲಿ ರೈತರು ಈರುಳ್ಳಿ ಬೆಳೆದರೂ ಈರುಳ್ಳಿ ಲಾಭ ರವದಿಯಲ್ಲಿ ಹೋಯಿತು ಎಂಬಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT