ಗುಳೇದಗುಡ್ಡ: ಈ ಹಿಂದೆ ವಿದ್ಯಾರ್ಥಿಗಳು ಮೈದಾನದಲ್ಲಿ ಆಟವಾಡಿ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಂಡ ಉದಾಹರಣೆಗಳಿವೆ. ಇಂದು ಮಕ್ಕಳು ಮೊಬೈಲ್‍ದಲ್ಲಿ ಆಟ ಆಡುತ್ತ ಆರೋಗ್ಯ ವಂಚಿತರಾಗುತ್ತಿದ್ದಾರೆ. ಕ್ರೀಡೆಯಿಂದ ದೈಹಿಕ, ಮಾನಸಿಕ ಸಧೃಡತೆ ಸಾಧ್ಯ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಮಾವಿನಮರದ ತಮ್ಮ ಕಳವಳ ವ್ಯಕ್ತಪಡಿಸಿದರು.
ಅವರು ಶನಿವಾರ ಬಾದಾಮಿ-ಗುಳೇದಗುಡ್ಡ ತಾಲ್ಲೂಕುಗಳ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಮೊಬೈಲ್‍ನಲ್ಲಿ ಆಟ ಆಡುವುದನ್ನು ನಿಲ್ಲಿಸಿ ಮೈದಾನದಲ್ಲಿ ಆಟವಾಡಲು ಪ್ರೋತ್ಸಾಹಿಸಬೇಕು. ಅಂದಾಗ ಮಕ್ಕಳ ಆರೋಗ್ಯ ವೃದ್ಧಿಯಾಗಲು ಸಾಧ್ಯ. ಕ್ರೀಡೆಗಳಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ ಎಂದರು.
ಬಾದಾಮಿ ಬಿಇಒ ಬಿ.ಎಚ್.ಹಳಗೇರಿ ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸಿರಲು ಸಾಧ್ಯ. ಕ್ರೀಡೆಗಳಲ್ಲಿ ನಿರ್ಣಾಯಕ ನಿರ್ಣಯವನ್ನು ಎಲ್ಲರೂ ಗೌರವಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಮಕ್ಕಳಲ್ಲಿ ಮತ್ತು ಕ್ರೀಡಾ ಶಿಕ್ಷಕರಲ್ಲಿ ಮನವಿ ಮಾಡಿದರು.
ಕೋಟೆಕಲ್ ಹುಚ್ಚೇಶ್ವರ ಮಠದ ಹೊಳೆಹುಚ್ಚೇಶ್ವರ ಸ್ವಾಮೀಜಿ, ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯರು ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿದರು. ವಾಲಿಬಾಲ್, ಥ್ರೋಬಾಲ್, ಕಬಡ್ಡಿ ಹಾಗೂ ಕೊಕ್ಕೊ ಗುಂಪು ಸ್ಪರ್ಧೆಗಳನ್ನು ಆಡಿಸಲಾಯಿತು. ಒಟ್ಟು 612 ಸ್ಫರ್ಧಾಳು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪ್ರಾಥಮಿಕ ಶಾಲೆಗಳ 5 ವಲಯ ಟೀಂಗಳು, ಪ್ರೌಢಶಾಲೆಗಳ 8 ವಲಯ ಟೀಂಗಳು ಭಾಗವಹಿಸಿದ್ದವು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಮೇಟಿ, ಶ್ರೀಮಂತ ಜಿ.ಎಸ್.ದೇಸಾಯಿ, ಸಂಗಪ್ಪ ಹಡಪದ, ಪ್ರೌಢಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಸಿದ್ದಪ್ಪ ಮಾವಿನಮರದ, ಪಿಡಿಒ ಆರತಿ ಕ್ಷತ್ರಿ, ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷೆ ನೀಲಾ ಗಾಜಿ, ಎಎಸ್‍ಐ ಎನ್.ಎಂ.ಭಜಂತ್ರಿ, ಬಾದಾಮಿ ತಾಲೂಕು ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.