ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: 40,020 ಮತದಾರರಿಗೆ ಅಂಚೆ ಮತದಾನ

85ಕ್ಕೂ ಹೆಚ್ಚು ವರ್ಷ, ಅಂಗವಿಕಲರಿಗೆ ಸೌಲಭ್ಯ
Published 1 ಏಪ್ರಿಲ್ 2024, 4:49 IST
Last Updated 1 ಏಪ್ರಿಲ್ 2024, 4:49 IST
ಅಕ್ಷರ ಗಾತ್ರ

ಪ್ರವೇಶ: ಬಾಗಲಕೋಟೆ ಪರಿವರ್ತನೆ: ಬಾಗಲಕೋಟೆಯು: ಅಂಗವಿಕಲರು ಹಾಗೂ ಇಳಿ ವಯಸ್ಸಿನ ಮತದಾರರಿಗೆ ಕಳೆದ ವಿಧಾನಸಭೆ ಚುನಾವಣೆ ವೇಳೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ನೀಡಲಾಗಿತ್ತು. ಲೋಕಸಭೆ ಚುನಾವಣೆಯಲ್ಲೂ ಮುಂದುವರಿಸಲಾಗಿದ್ದು, 40 ಸಾವಿರಕ್ಕೂ ಹೆಚ್ಚು ಜನರಿಗೆ ಅವಕಾಶ ದೊರೆಯಲಿದೆ.

ಕಳೆದ ಬಾರಿ 80 ವರ್ಷಕ್ಕಿಂತ ಹೆಚ್ಚಿನವರಿಗೆ ನೀಡಿದ್ದ ಅವಕಾಶವನ್ನು ಈ ಬಾರಿ 85 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ನೀಡಲಾಗಿದೆ. ಹಾಗೆಯೇ ಶೇ75 ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಅಂಗವಿಕಲತೆ ಹೊಂದಿರುವವರು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಬಹುದಾಗಿದೆ.

ಜಿಲ್ಲೆಯಲ್ಲಿ ಮನೆಯಿಂದಲೇ ಮತದಾನ ಅವಕಾಶ ಪಡೆಯಬಹುದಾದವರು 40,020 ಮತದಾರರಿದ್ದಾರೆ. 85 ವರ್ಷ ಮೇಲ್ಪಟ್ಟವರು 13,467 ಮತದಾರರು, 26,553 ಅಂಗವಿಕಲ ಮತದಾರರು ಇದ್ದಾರೆ.

ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟವರಲ್ಲಿ 5,228 ಪುರುಷರಿದ್ದರೆ, 8,239 ಮಹಿಳೆಯರಿದ್ದಾರೆ. ಮುಧೋಳ ಕ್ಷೇತ್ರದಲ್ಲಿ ಕಡಿಮೆ ಅಂದರೆ 751, ಬಾಗಲಕೋಟೆ ಕ್ಷೇತ್ರದಲ್ಲಿ ಹೆಚ್ಚು ಅಂದರೆ 1,587 ಜನರಿದ್ದಾರೆ. ಅದೇ ರೀತಿ ಅಂಗವಿಕಲರಲ್ಲಿ 15,378 ಪುರುಷರಿದ್ದರೆ, 11,174 ಪುರುಷರಿದ್ದಾರೆ. ಒಬ್ಬರು ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ ಕಡಿಮೆ ಅಂದರೆ 2,526 ಇದ್ದರೆ, ಜಮಖಂಡಿ ಕ್ಷೇತ್ರದಲ್ಲಿ ಹೆಚ್ಚು ಅಂದರೆ 4,506 ಇದ್ದಾರೆ. 

‘ಇಳಿ ವಯಸ್ಸಿನವರು ಮತ್ತು ಮತಗಟ್ಟೆಗೆ ತೆರಳಲಾಗದಷ್ಟು ಅಂಗವಿಕಲತೆ ಹೊಂದಿರುವ ಮತದಾರರಿಗೆ ಮನೆಯಿಂದಲೇ ಅಂಚೆಮತ ಪತ್ರದ ಮೂಲಕ ಮತ ಚಲಾಯಿಸುವ ಅವಕಾಶ ನೀಡಲಾಗುತ್ತದೆ. ಚುನಾವಣಾ ಆಯೋಗ ಪರಿಚಯಿಸಿರುವ ‘ಎಲೆಕ್ಟ್ ಒನ್’ ಆ್ಯಪ್ ಮೂಲಕ ಆಯಾ ಮತಗಟ್ಟೆವಾರು ಅಂಚೆಮತ ಪತ್ರ ಪಡೆಯಬಹುದಾದವರ ಮಾಹಿತಿಯನ್ನು ಮತಗಟ್ಟೆ ಅಧಿಕಾರಿಗಳಿಗೆ ರವಾನಿಸಲಾಗುತ್ತದೆ. ಅವರು ಮತದಾರರ ಮನೆಗೆ ಭೇಟಿ ಮತಗಟ್ಟೆಗೆ ಬರಲಾಗದವರಿಂದ 12ಡಿ ಅರ್ಜಿ ನಮೂನೆ ಭರ್ತಿ ಮಾಡಿಸಿ ಆಯಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಗೆ ಸಲ್ಲಿಸಲಿದ್ದಾರೆ. ಅವರಿಂದ ಜಿಲ್ಲಾ ಚುನಾವಣಾಧಿಕಾರಿಗೆ ಮಾಹಿತಿ ಸಲ್ಲಿಕೆಯಾದ ಬಳಿಕ ಮನೆಯಿಂದಲೇ ಮತದಾನ ಮಾಡುವವರ ಪಟ್ಟಿ ಸಿದ್ಧಪಡಿಸಲಾಗುತ್ತದೆ’ ಎಂದು ಚುನಾವಣಾ ಅಧಿಕಾರಿಯೊಬ್ಬರು ವಿವರಿಸಿದರು.

‘ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡ ಬಳಿಕ ಚುನಾವಣೆಗೆ ಕೆಲವು ದಿನ ಮುಂಚಿನಿಂದ ಅಂಚೆಮತ ಪತ್ರದ ಮೂಲಕ ಮತದಾನ ಮಾಡಿಸಲಾಗುತ್ತದೆ. ಮತಗಟ್ಟೆ ಅಧಿಕಾರಿಗಳ ನೇತೃತ್ವದಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳ ತಂಡವು ಮತದಾರರ ಮನೆಗೆ ತೆರಳಿ ಅವರಿಗೆ ಮತಪತ್ರ ನೀಡಿ, ಮತ ಹಾಕಿಸಿಕೊಂಡು ಬರಲಿದೆ. ಮತಗಟ್ಟೆಯಲ್ಲಿದ್ದಂತೆ ಇಲ್ಲಿಯೂ ಗೌಪ್ಯ ಮತದಾನ ಮಾಡಲು ಅವಕಾಶ ಇರುತ್ತದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT