ಮಂಗಳವಾರ, ನವೆಂಬರ್ 12, 2019
20 °C
ಡೊಮನಾಳ ಶಾಲೆ: ಎಲ್ಲ ಶಿಕ್ಷಕರನ್ನು ಬದಲಿಸಲು ಗ್ರಾಮಸ್ಥರ ಆಗ್ರಹ

ಶಿಥಿಲಾವಸ್ಥೆಯಲ್ಲಿ ಕಟ್ಟಡ, ಮೈದಾನ ಕೆಸರುಗದ್ದೆ!

Published:
Updated:
Prajavani

ಬಾಗಲಕೋಟೆ: ಶಾಲೆಯ ಪ್ರಾಂಗಣದಲ್ಲಿಯೇ ಸೆರೆ (ಸಾರಾಯಿ) ಕುಡಿದು ಇಟ್ಟಿದ್ದ ಪ್ಲಾಸ್ಟಿಕ್ ಲೋಟ. ಕೆಸರು ಗದ್ದೆಯಂತಾಗಿ ನೆಟ್ಟಗೆ ಓಡಾಡಲು ಕಷ್ಟವಾಗಿದ್ದ ಪಾಚಿಗಟ್ಟಿದ್ದ ಅಂಗಳ, ಶಿಥಿಲಗೊಂಡು ಕುಸಿದುಬೀಳುವ ಹಂತ ತಲುಪಿರುವ ಶಾಲಾ ಕಟ್ಟಡ, ಕಾಂಪೌಂಡ್ ಇಲ್ಲದೇ ಯಾರಾದರೂ ಓಡಾಡಬಹುದಾದ ಶಾಲೆ ಆವರಣ, ಮಕ್ಕಳಿಗೆ ಆಟವಾಡಲು ಮೈದಾನವೂ ಮರೀಚಿಕೆ..

ಇದು ಬಾಗಲಕೋಟೆ ತಾಲ್ಲೂಕಿನ ಡೊಮನಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ. ಶಾಲೆಯ ವಿಜ್ಞಾನ ಶಿಕ್ಷಕ, ರಾಜ್ಯ ಸರ್ಕಾರಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಕರ್ತವ್ಯಲೋಪದ ಆರೋಪದ ಮೇಲೆ ಅಮಾನತುಗೊಂಡಿರುವುದು ಹಾಗೂ ಶಿಕ್ಷಕರು ಎರಡು ಬಣಗಳಾಗಿ ಅವರ ಪರ–ವಿರುದ್ಧ ಪ್ರತಿಭಟನೆಗೆ ಇಳಿದಿರುವ ಕಾರಣ ಡೊಮನಾಳ ಶಾಲೆ ಈಗ ಗಮನ ಸೆಳೆದಿದೆ.

ಶಾಲಾಭಿವೃದ್ಧಿ ಸಮಿತಿ ಹಾಗೂ ಗ್ರಾಮದ ಹಿರಿಯರು ಭಾನುವಾರ ಮಾಧ್ಯಮ ಪ್ರತಿನಿಧಿಗಳನ್ನು ಊರಿಗೆ ಕರೆಸಿ ಶಾಲೆಯ ದುಸ್ಥಿತಿ ತೋರಿಸಿದರು. ನಂತರ ಸುದ್ದಿಗೋಷ್ಠಿ ನಡೆಸಿ, ಊರ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದರು.

‘ಚಂದ್ರಶೇಖರ ನುಗ್ಲಿ ಮಾತ್ರವಲ್ಲ ಇಡೀ ಶಾಲೆಯ ಬೋಧಕ ಸಿಬ್ಬಂದಿಯನ್ನೇ ಇಲ್ಲಿಂದ ವರ್ಗಾಯಿಸಿ, ಹೊಸಬರನ್ನು ನೇಮಕ ಮಾಡಿ‘ ಎಂದು ಹಣಮಂತ ನಾಗರಾಳ ಆಗ್ರಹಿಸಿದರು. ‘ಶಾಲಾ ಕೊಠಡಿಗಳು ಶಿಥಿಲಗೊಂಡ ಕಾರಣ ಮಕ್ಕಳಿಗೆ ಸಮೀಪದ ಮಠದಲ್ಲಿ ಕೂರಿಸಿ ಪಾಠ ಮಾಡಲಾಗುತ್ತಿದೆ. ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆಲಸ ಮಾಡುತ್ತಿದ್ದ ಶಾಲೆ ಇಡೀ ರಾಜ್ಯಕ್ಕೆ ಮಾದರಿಯಾಗಬೇಕಿತ್ತು. ಆದರೆ ಕಲಿಕೆಯ ವಾತಾವರಣವೇ ಇಲ್ಲಿಲ್ಲ‘ ಎಂದು ಅಳಲು ತೋಡಿಕೊಂಡರು.

‘2007ರಲ್ಲಿ ನಮ್ಮೂರಿನ ಶಾಲೆಗೆ ನೇಮಕಗೊಂಡಾಗ ಆರಂಭದ ಕೆಲವು ವರ್ಷ ಶಾಲೆಗೆ ಸರಿಯಾಗಿ ಬರುತ್ತಿದ್ದರು. ಸಂಘದ ಪದಾಧಿಕಾರಿಯಾಗಿ ನೇಮಕಗೊಂಡ ನಂತರ ಎರಡು–ಮೂರು ದಿನಕ್ಕೊಮ್ಮೆ ಬಂದು ಹಾಜರಿ ಹಾಕಿ ಹೋಗುತ್ತಿದ್ದರು. ಕೇಳಿದರೆ ಬಿಇಒ, ಡಿಡಿಪಿಐ ಕಚೇರಿಯಿಂದ ಕರೆ ಬಂದಿದೆ ಎಂದು ಹೇಳುತ್ತಿದ್ದರು’ ಎಂಬುದಾಗಿ ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ ಕಟಗೇರಿ ತಿಳಿಸಿದರು.

ಈ ವೇಳೆ ಎಸ್‌ಡಿಎಂಸಿ ಸದಸ್ಯ ಬಲವಂತ ಕಂದಗಲ್, ಪ್ರಭುಗೌಡ ಬಿರಾದಾರ, ಹನಮಗೌಡ ಪಾಟೀಲ, ತಿಪ್ಪಣ್ಣಗೌಡ ಜಿರಬಾಯಿ, ಗಂಗಯ್ಯ ಇದ್ದರು.

ಪ್ರತಿಕ್ರಿಯಿಸಿ (+)